ಸಾಗರ: ‘ಜಾಗತಿಕ ತಾಪಮಾನ ಹೆಚ್ಚುತ್ತಿರುವುದು ಪರಿಸರ ನಮಗೆ ನೀಡುತ್ತಿರುವ ಎಚ್ಚರಿಕೆಯ ಗಂಟೆಯಾಗಿದೆ’ ಎಂದು ಪರಿಸರ, ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಹೇಳಿದರು.
ಇಲ್ಲಿನ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನವು ಡಾ.ಜಿ.ಎ.ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಸೇರಿದಂತೆ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಜಾಗತಿಕ ತಾಪಮಾನದಲ್ಲಿ ತೀವ್ರ ಏರುಪೇರು ಕಾಣುತ್ತಿದೆ. ಇವುಗಳಲ್ಲದೆ ಎಲ್ಲೆಡೆ ಜರುಗುತ್ತಿರುವ ಹವಾಮಾನ ವೈಪರಿತ್ಯದ ಪರಿಣಾಮಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದರು.
ಪ್ರಪಂಚದ ಯಾವುದೊ ಮೂಲೆಯಲ್ಲಿ ಪರಿಸರಕ್ಕೆ ಸಂಬಂಧಪಟ್ಟಂತೆ ಅವಘಡ ನಡೆದರೆ ಅದು ನಮಗೆ ಸಂಬಂಧಿಸಿದ್ದಲ್ಲ ಎಂದು ಭಾವಿಸುವುದು ಸರಿಯಲ್ಲ. ಅಂತಹ ಅವಘಡಗಳು ಭವಿಷ್ಯದಲ್ಲಿ ನಾವು ನೆಲೆಸಿರುವ ಪ್ರದೇಶಕ್ಕೂ ಧಾವಿಸಬಹುದು ಎಂಬ ಮುಂಜಾಗ್ರತೆ ನಮ್ಮಲ್ಲಿರಬೇಕು ಎಂದು ಅವರು ಕಿವಿಮಾತು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿರುವವರು ಪರಿಸರದ ಅಸಮತೋಲನದ ಕುರಿತು ಪ್ರಪಂಚದಲ್ಲಿ ಘಟಿಸುತ್ತಿರುವ ಪ್ರತಿಯೊಂದು ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಅವುಗಳನ್ನು ವಿದ್ಯಾರ್ಥಿ ಯುವಜನರಿಗೆ ದಾಟಿಸುವ ಕೆಲಸ ಮಾಡಬೇಕು ಎಂದು ಅವರು ಕೋರಿದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಶಿವಕುಮಾರ್, ಕೋಶಾಧಿಕಾರಿ ಕವಲಕೋಡು ವೆಂಕಟೇಶ್, ಸಹಕಾರ್ಯದರ್ಶಿ ಸತ್ಯನಾರಾಯಣ, ಪ್ರಾಂಶುಪಾಲರಾದ ಶಿಲ್ಪಾ, ಲಕ್ಷ್ಮೀಶ್ ಎ.ಎಸ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.