ADVERTISEMENT

ಪರಿಹಾರದ ಜೊತೆ ಉದ್ಯೋಗಾವಕಾಶ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 4:15 IST
Last Updated 12 ಜುಲೈ 2025, 4:15 IST
ಸಾಗರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ಸ್ವತ್ತು ಕಳೆದುಕೊಳ್ಳುವವರಿಗೆ ಪರಿಹಾರ ನೀಡುವ ಸಂಬಂಧ ಶುಕ್ರವಾರ ಸಮಾಲೋಚನಾ ಸಭೆ ನಡೆಯಿತು
ಸಾಗರದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ಸ್ವತ್ತು ಕಳೆದುಕೊಳ್ಳುವವರಿಗೆ ಪರಿಹಾರ ನೀಡುವ ಸಂಬಂಧ ಶುಕ್ರವಾರ ಸಮಾಲೋಚನಾ ಸಭೆ ನಡೆಯಿತು   

ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ಸ್ವತ್ತು ಕಳೆದುಕೊಳ್ಳುವ ಕುಟುಂಬದ ಸದಸ್ಯರಿಗೆ ಪರಿಹಾರದ ಜೊತೆ ಉದ್ಯೋಗಾವಕಾಶವನ್ನೂ ಕಲ್ಪಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.

ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯಿಂದ ಭೂಮಿ ಕಳೆದುಕೊಳ್ಳಲಿರುವ ಬಗರ್ ಹುಕುಂ ಸಾಗುವಳಿದಾರರಿಗೂ ಪರಿಹಾರ ನೀಡಲಾಗುವುದು. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

₹8,644 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು 2,000 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಯೋಜನೆಯಿಂದ 8 ಎಕರೆ ಪ್ರದೇಶದಲ್ಲಿರುವ ನಿವಾಸಿಗಳು ಸಂತ್ರಸ್ತರಾಗಲಿದ್ದಾರೆ. 54 ಎಕರೆ ಅರಣ್ಯ ಪ್ರದೇಶಕ್ಕೆ ತೊಂದರೆಯಾಗಲಿದ್ದು ಇದರ ಬದಲಿ ಅರಣ್ಯ ಬೆಳೆಸುವ ಮೂಲಕ ನಷ್ಟವನ್ನು ಸರಿದೂಗಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಯೋಜನೆಗೆ ಪರ-ವಿರೋಧ ಎರಡೂ ಅಭಿಪ್ರಾಯಗಳಿವೆ. ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ಕಡಿಯುವುದು ಅನಿವಾರ್ಯವಾಗಿತ್ತು. ಮುಂದಿನ ಪೀಳಿಗೆಗೆ ಅಗತ್ಯದಷ್ಟು ವಿದ್ಯುತ್ ಪೂರೈಕೆ ಮಾಡಲು ಇಂತಹ ಯೋಜನೆಗಳ ಅನುಷ್ಠಾನ ಅನಿವಾರ್ಯ ಎಂದು ಪ್ರತಿಪಾದಿಸಿದರು.

ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಮನವಿ ಸಲ್ಲಿಕೆ: 

ಇದೇ ಸಂದರ್ಭದಲ್ಲಿ ಪರಿಸರ ಕಾರ್ಯಕರ್ತರು ಯೋಜನೆ ಅನುಷ್ಠಾನ ವಿರೋಧಿಸಿ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಶರಾವತಿ ಪಂಪ್ಡ್ ಯೋಜನೆ ವಿನಾಶಕಾರಿಯಾಗಿದ್ದು ಶರಾವತಿ ನದಿಗೆ ಈ ಯೋಜನೆ ಸಂಚಕಾರ ತರಲಿದೆ. ಪರಿಸರ ಇಲಾಖೆ ಅನುಮತಿ ಪಡೆಯದೇ ಭೂ ಸ್ವಾಧೀನ ಪ್ರಕ್ರಿಯೆ ನಡೆಸುವುದು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಾದ ನಡೆಯಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ, ಇಂಧನ ತಜ್ಞ ಶಂಕರ ಶರ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.