
ಸಾಗರ: ‘ತೋಟದೊಳಗೆ ಕಾಲಿಟ್ಟರೆ ಕಾಡಿನ ಅನುಭವವಾಗಬೇಕೆದರೆ ನೀವು ಸಾಗರದಿಂದ 8 ಕಿ.ಮೀ. ದೂರದಲ್ಲಿರುವ ಮಂಚಾಲೆ ಗ್ರಾಮದ ಪ್ರಕಾಶ್ ರಾವ್ ಅವರ ತೋಟಕ್ಕೆ ಬರಬೇಕು’.
ಅಡಿಕೆ, ತೆಂಗು ಪ್ರಧಾನ ಬೆಳೆಯಾಗಿರುವ ಪ್ರಕಾಶ್ ರಾವ್ ಅವರ ಮೂರು ಎಕರೆ ವಿಸ್ತೀರ್ಣದ ತೋಟದಲ್ಲಿ ಬಾನೆತ್ತರಕ್ಕೆ ಬೆಳೆದಿರುವ ಕಾಡು ಜಾತಿಯ ಮರಗಳನ್ನು ಕಾಣಬಹುದು. ಇದರ ಜೊತೆಗೆ 2,000ಕ್ಕೂ ಅಧಿಕ ಸಂಖ್ಯೆಯ ಔಷಧೀಯ ಸಸ್ಯಗಳು, ಸಾಂಬಾರು ಪದಾರ್ಥದ ಗಿಡಗಳು, ಉಪ ಬೆಳೆಗಳು ಕೂಡ ಕಾಣಸಿಗುವುದು ಇಲ್ಲಿನ ವಿಶೇಷತೆಯಾಗಿದೆ.
ತಮ್ಮ ತೋಟದಲ್ಲಿನ ಸಂಪೂರ್ಣ ಜಾಗವನ್ನು ಇಂಚೂ ಬಿಡದಂತೆ ಪ್ರಧಾನವಾಗಿ ತಾವು ಬೆಳೆಯುವ ಬೆಳೆಗಳಿಗೆ ಪ್ರಾಮುಖ್ಯತೆ ನೀಡುವ ಪದ್ದತಿ ಹೆಚ್ಚಿನವರಲ್ಲಿ ಚಾಲ್ತಿಯಲ್ಲಿದೆ. ಆದರೆ ಪ್ರಕಾಶ್ ರಾವ್ ಅವರು ಇದಕ್ಕೆ ವ್ಯತಿರಿಕ್ತವಾಗಿ ತೋಟದ ನಡುವೆಯೇ ಕಾಡು ಬೆಳೆಸುವ ಮೂಲಕ ‘ಪರಿಸರ ಸ್ನೇಹಿ’ ಮಾದರಿಯ ಕೃಷಿಗೆ ಮುಂದಾಗಿದ್ದಾರೆ.
‘ನಾವು ಬೆಳೆಸುವ ತೋಟದಲ್ಲಿ ಎಲ್ಲಾ ಜಾತಿಯ ಗಿಡ– ಮರಗಳನ್ನು ನೆಡುವ ಮೂಲಕ ಮಣ್ಣನ್ನು ಸಂರಕ್ಷಿಸಬೇಕು. ಅಲ್ಲಿ ವೈವಿಧ್ಯಮಯ ಸಸ್ಯಗಳಿದ್ದರೆ ನೆರಳಿನ ಪ್ರಮಾಣ ಹೆಚ್ಚಿರುತ್ತದೆ. ಬೇಸಿಗೆಯಲ್ಲೂ ತೋಟದಲ್ಲಿ ಶೇ 60ರಿಂದ ಶೇ 65ರಷ್ಟು ತೇವಾಂಶವಿದ್ದರೆ ತೋಟಕ್ಕೆ ಕಾಡಿನ ಗುಣ ಬರುತ್ತದೆ’ ಎಂದು ಕೃಷಿ ವಿಜ್ಞಾನಿ ವಾಸುದೇವ್ ಅವರು ಒಮ್ಮೆ ಹೇಳಿದ ಮಾತು ಪ್ರಕಾಶ್ ರಾವ್ ಅವರ ಕೃಷಿಯ ಮಾದರಿಯನ್ನೆ ಬದಲಿಸಿತು.
‘ಸಸ್ಯ ವೈವಿಧ್ಯತೆಯ ಜೊತೆಗೆ ಬೆಳೆ ಹಾಗೂ ತಳಿಗಳ ವೈವಿಧ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ತೋಟದ ನಡುವೆ ವಿವಿಧ ಜಾತಿಯ ಮರಗಳನ್ನು ಬೆಳೆಸಲು ಮುಂದಾಗಿದ್ದೇನೆ. ಮೂಲ ಬೆಳೆಗೆ ಪೂರಕವಾಗುವ ರೀತಿಯಲ್ಲಿ ಈ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದೇನೆ’ ಎನ್ನುತ್ತಾರೆ ಪ್ರಕಾಶ್ ರಾವ್.
ಮೂಲ ಬೆಳೆಯ ಜೊತೆಗೆ ಔಷಧೀಯ ಸಸ್ಯ, ಸಾಂಬಾರು ಪದಾರ್ಥಗಳನ್ನು ಬೆಳೆಯುವುದರಿಂದ ಆದಾಯವೂ ದೊರಕುತ್ತದೆ. ಅದರಲ್ಲೂ ಸಣ್ಣ, ಅತಿಸಣ್ಣ ಬೆಳೆಗಾರರಿಗೆ ಈ ರೀತಿಯ ಉಪ ಬೆಳೆಗಳಿಂದ ದೊರಕುವ ಆದಾಯ ಅತ್ಯಂತ ಪ್ರಮುಖವಾದದ್ದು ಎಂದು ಅವರು ದೃಢವಾಗಿ ನಂಬಿದ್ದಾರೆ.
‘ಮೂಲ ಬೆಳೆಗಳಾದ ಅಡಿಕೆ, ತೆಂಗಿನ ಜೊತೆಗೆ ವಿವಿಧ ಜಾತಿಯ ಸಸ್ಯಗಳನ್ನು ಬೆಳೆಸಿರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿದೆ. ಈ ಕಾರಣಕ್ಕೆ ರಾಸಾಯನಿಕ ಗೊಬ್ಬರ, ಔಷಧಿ ಬಳಸದೆ ಬೇರೆಯವರು ಪಡೆಯುವಷ್ಟೇ ಫಸಲನ್ನು ಪಡೆಯುತ್ತಿದ್ದೇನೆ’ ಎಂದು ಅವರು ಸಂತೋಷದಿಂದ ವಿವರಿಸುತ್ತಾರೆ.
ಕೃಷಿ ಕಾರ್ಯದೊಂದಿಗೆ ತಳಿ ವೈವಿಧ್ಯತೆ ಸಂರಕ್ಷಣೆಯಲ್ಲಿ ತೊಡಗಿರುವ ಕಾರಣಕ್ಕೆ ಪ್ರಕಾಶ್ ರಾವ್ ಅವರಿಗೆ 2021ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಪುರಸ್ಕಾರವಾಗಿರುವ ‘ಜಿನೊ ಸೇವಿಯರ್ ರಿವಾರ್ಡ್’ ಲಭಿಸಿದೆ. 2022ರಲ್ಲಿ ಕೇಂದ್ರ ಸರ್ಕಾರದ ಕೃಷಿ ಇಲಾಖೆ ‘ಇನೋವೇಟಿವ್ ಫಾರ್ಮರ್ ಅವಾರ್ಡ್’ ನೀಡಿ ಗೌರವಿಸಿದೆ.
ತಮ್ಮ ತೋಟದಲ್ಲೆ ಶತಮೂಲಿಕಾ ವನ, ಸಾಂಬಾರು ಪದಾರ್ಥಗಳ ವನ ಬೆಳೆಸಿರುವ 70 ವರ್ಷ ವಯಸ್ಸಿನ ಇವರ ತೋಟಕ್ಕೆ ಹೋದರೆ ವಿವಿಧ ಬಗೆಯ ಔಷಧೀಯ ಸಸ್ಯಗಳನ್ನು, ಸಾಂಬಾರು ಪದಾರ್ಥಗಳನ್ನು ತೋರಿಸುತ್ತಲೆ ಆಸಕ್ತಿದಾಯಕ ವಿವರಗಳನ್ನು ನೀಡುತ್ತಾರೆ. ಕೃಷಿಯಲ್ಲಿ ಹೊಸ ಸಾಧ್ಯತೆಗಳ ಹುಡುಕಾಟದ ಮೂಲಕ ಅವರು ಪ್ರಯೋಗಶೀಲ ಕೃಷಿಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಕಾಶ್ ರಾವ್ ಅವರ ಸಂಪರ್ಕ ಸಂಖ್ಯೆ– 9481935132.
ಜಾಗತಿಕ ತಾಪಮಾನ ಕಡಿಮೆ ಮಾಡುವತ್ತ..
‘ಜಾಗತಿಕ ತಾಪಮಾನ ಒಂದು ಡಿಗ್ರಿಯಷ್ಟು ಹೆಚ್ಚಾದರೆ ಶೇ 30 ರಷ್ಟು ಇಳುವರಿ ಪ್ರಮಾಣ ಕಡಿಮೆಯಾಗುತ್ತದೆ ಎಂದು ಕೃಷಿ ವಿಜ್ಞಾನಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೃಷಿಕರು ಚಿಂತಿಸಬೇಕಿದೆ. ಈ ಹಾದಿಯಲ್ಲಿಯೆ ನನ್ನ ಕಾಡು ಹಾದಿಯ ತೋಟದ ಮಾದರಿ ನಿರ್ಮಾಣಗೊಂಡಿದೆ’ ಎಂದು ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.