
ಸಾಗರ: ಶಿವಮೊಗ್ಗ ಜಿಲ್ಲೆಯಲ್ಲಿ ಏಕೈಕ ಉಪವಿಭಾಗೀಯ ಕೇಂದ್ರವಾಗಿರುವ ಸಾಗರ ಎಲ್ಲ ದೃಷ್ಟಿಗಳಿಂದಲೂ ಜಿಲ್ಲಾ ಕೇಂದ್ರವಾಗುವ ಅರ್ಹತೆ ಹೊಂದಿದೆ ಎಂದು ಜಾನಪದ ಕಲಾವಿದ ಟಾಕಪ್ಪ ಕಣ್ಣೂರು ಹೇಳಿದರು.
ಸಾಗರಕ್ಕೆ ಜಿಲ್ಲಾ ಕೇಂದ್ರದ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಸಾಗರ ಜಿಲ್ಲಾ ಹೋರಾಟ ಸಮಿತಿ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಗುರುವಾರದಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಐತಿಹಾಸಿಕ ಮಹತ್ವ ಪಡೆದಿರುವ ಕೆಳದಿ, ಇಕ್ಕೇರಿ, ಕಲಸೆ, ಧಾರ್ಮಿಕ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಗಂದೂರು, ವರದಹಳ್ಳಿ, ವಡನ್ ಬೈಲು, ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಜೋಗ ಜಲಪಾತ, ಹೊನ್ನೇಮರಡು ಮೊದಲಾದ ಪ್ರಮುಖ ಸ್ಥಳಗಳನ್ನು ಒಳಗೊಂಡಿರುವ ಸಾಗರಕ್ಕೆ ಜಿಲ್ಲಾ ಕೇಂದ್ರದ ಮಾನ್ಯತೆ ಸಿಗಬೇಕು ಎಂಬ ಮಲೆನಾಡಿಗರ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
‘ಭೌಗೋಳಿಕವಾಗಿ ಅಂದಾಜು 130 ಕಿ.ಮೀ. ವ್ಯಾಪ್ತಿ ಹೊಂದಿರುವ ಸಾಗರ ತಾಲ್ಲೂಕು ಜನಸಂಖ್ಯೆ ದೃಷ್ಟಿಯಿಂದಲೂ ಜಿಲ್ಲಾ ಕೇಂದ್ರವಾಗುವ ಅರ್ಹತೆ ಪಡೆದಿದೆ. ಕೊಡಗು, ರಾಮನಗರದಂತಹ ಸಣ್ಣ ಜಿಲ್ಲಾ ಕೇಂದ್ರಗಳ ಮಾದರಿಯಲ್ಲೇ ಮಲೆನಾಡಿನ ಅಭಿವೃದ್ಧಿಯ ದೃಷ್ಟಿಯಿಂದ ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದು ಸೂಕ್ತ’ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.
‘ಹಲವು ವರ್ಷಗಳ ಹಿಂದೆಯೆ ಸಾಹಿತಿ ನಾ.ಡಿಸೋಜ ಅವರ ನೇತೃತ್ವದಲ್ಲಿ ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯಿಸಿ ಪಕ್ಷಾತೀತವಾಗಿ ಪ್ರತಿಭಟನೆ ನಡೆದಿತ್ತು. ಕೇಂದ್ರ ಸರ್ಕಾರ ನಡೆಸಲಿರುವ ಜನಗಣತಿಯ ಕಾರಣ ನೂತನ ಜಿಲ್ಲೆಗಳ ರಚನೆ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ದೊರಕಿದೆ. ಈ ಕಾರಣ ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು’ ಎಂದು ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರಾದ ತೀ.ನ.ಶ್ರೀನಿವಾಸ್ ಒತ್ತಾಯಿಸಿದರು.
ಸಂಘ ಪರಿವಾರದ ಅ.ಪು.ನಾರಾಯಣಪ್ಪ, ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಹೋರಾಟ ಸಮಿತಿಯ ಮಹ್ಮದ್ ಖಾಸಿಂ, ಸುಂದರ್ ಸಿಂಗ್, ಎಸ್.ವಿ.ಹಿತಕರ ಜೈನ್, ರೈತ ಸಂಘದ ದಿನೇಶ್ ಶಿರವಾಳ, ಶಿವಾನಂದ ಕುಗ್ವೆ, ಎಂ.ಬಿ.ಮಂಜಪ್ಪ, ಪ್ರಮುಖರಾದ ಕನ್ನಪ್ಪ ಬೆಳಲಮಕ್ಕಿ, ಪ್ರಕಾಶ್ ಲ್ಯಾವಿಗೆರೆ, ರೇವಪ್ಪ ಹೊಸಕೊಪ್ಪ, ಮಂಜುನಾಥ ಆಚಾರ್, ನಾಗರಾಜ್, ದೇವೇಂದ್ರಪ್ಪ, ಜಿ.ನಾಗೇಶ್, ಕುಂಟಗೋಡು ಸೀತಾರಾಮ್, ಮೈಕೆಲ್ ಡಿಸೋಜ, ಜಿ.ಕೆ.ಭೈರಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.