ADVERTISEMENT

ರೈತ, ಕಾರ್ಮಿಕ ಸ್ನೇಹಿ ಕಾಯ್ದೆ ರೂಪಿಸಲು ಒತ್ತಾಯ

ಬಹುರಾಷ್ಟ್ರೀಯ ಕಂಪನಿಗಳನ್ನು ದೇಶ ಬಿಟ್ಟು ತೊಲಗಿಸಲು ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 8:06 IST
Last Updated 14 ಆಗಸ್ಟ್ 2025, 8:06 IST
ಸಾಗರದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರು ಬುಧವಾರ ಪ್ರತಿಭಟನೆ ನಡೆಸಿದರು.
ಸಾಗರದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರು ಬುಧವಾರ ಪ್ರತಿಭಟನೆ ನಡೆಸಿದರು.   

ಸಾಗರ: ‘ದೇಶದ ದುಡಿಯುವ ಜನರ ಸಂಕಟಕ್ಕೆ ಕಾರಣವಾಗಿರುವ ಬಹುರಾಷ್ಟ್ರೀಯ ಕಂಪನಿಗಳನ್ನು ಭಾರತದಿಂದ ತೊಲಗಿಸಬೇಕು’ ಎಂದು ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರು ಬುಧವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳಿಂದಾಗಿ ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ. ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ರೈತರ ಬೆಳೆಗೆ ಕನಿಷ್ಠ ಬೆಲೆ ದೊರಕುತ್ತಿಲ್ಲ. ಕಾರ್ಮಿಕರಿಗೆ ಕನಿಷ್ಠ ವೇತನ ಲಭ್ಯವಾಗುತ್ತಿಲ್ಲ’ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಿವಾನಂದ ಕುಗ್ವೆ ದೂರಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರವಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗುವ ಕಾಯ್ದೆಗಳನ್ನೇ  ರೂಪಿಸುತ್ತಿವೆ. ಇದರಿಂದಾಗಿ ಸಹಕಾರ ಸಂಸ್ಥೆಗಳ, ಕೃಷಿ ಉತ್ಪನ್ನ ಮಾರುಕಟ್ಟೆಗಳ ಅಸ್ತಿತ್ವಕ್ಕೆ ಧಕ್ಕೆ ಬರುವಂತಾಗಿದೆ ಎಂದು ಅವರು ಟೀಕಿಸಿದರು.

ADVERTISEMENT

ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಯನ್ನು ಕಾಯುವ ಸಲುವಾಗಿಯೇ ಸರ್ಕಾರ ಖಾಸಗೀಕರಣವನ್ನು ಪ್ರೋತ್ಸಾಹಿಸುತ್ತಿದೆ. ಇದರ ಫಲವಾಗಿ ಬಿಎಸ್ಎನ್ಎಲ್, ಏರ್ ಇಂಡಿಯಾದಂತಹ ಸಂಸ್ಥೆಗಳು ಕೂಡ ನಷ್ಟಕ್ಕೆ ಸಿಲುಕುವಂತಾಗಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲೂ ಖಾಸಗಿಯವರದ್ದೆ ಕಾರುಬಾರು ನಡೆಯುತ್ತಿದ್ದು ಸರ್ಕಾರದ ಪಾತ್ರ ನಗಣ್ಯವಾಗಿದೆ ಎಂದು  ಆರೋಪಿಸಿದರು.

‘ಕಾರ್ಪೊರೇಟ್ ಕಂಪನಿಗಳಿಗೆ ನೂರಾರು ಎಕರೆ ಭೂಮಿಯನ್ನು ರಿಯಾಯಿತಿ ದರದಲ್ಲಿ ನೀಡುವ ಸರ್ಕಾರ ಬಡವರಿಗೆ ಭೂಮಿಯ ಹಕ್ಕು ನೀಡಲು ಚೌಕಾಸಿ ಮಾಡುತ್ತಿದೆ. ಖಾಸಗಿ ಕಂಪನಿಗಳ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡಲು ಇಲ್ಲದ ತೊಡಕು ರೈತರ ಸಾಲ ಮನ್ನಾ ಮಾಡಲು ಮುಂದಾಗುವುದು ಹೇಗೆ’ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತ್ ಕುಮಾರ್ ಪ್ರಶ್ನಿಸಿದರು.

ಪ್ರಮುಖರಾದ ಪರಮೇಶ್ವರ ದೂಗೂರು, ನಾಗರಾಜ್, ಮೋಹನ್ ಮೂರ್ತಿ, ಎಂ.ಕೆ.ದ್ಯಾವಪ್ಪ ಕೆಳದಿ, ರಮೇಶ್ ಐಗಿನಬೈಲು, ಚೌಡಪ್ಪ, ಅಣ್ಣಪ್ಪ, ಶಿವಪ್ಪ, ಕುಂಟುಗೋಡು ಸೀತಾರಾಮ್, ಪ್ರಸನ್ನ ಕುಮಾರ್, ಹರೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.