
ಸಾಗರ: ತಾಲ್ಲೂಕಿನ ಆನಂದಪುರದ ಮುರುಘಾ ಮಠದಲ್ಲಿ ನ. 20ರಂದು ಕಂಚಿನ ರಥ ದೀಪೋತ್ಸವ, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಲಿದೆ ಎಂದು ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.
ಬೆಳಿಗ್ಗೆ 5.30ಕ್ಕೆ ಮಠದ ಗದ್ದುಗೆಗೆ ವಿಶೇಷ ಪೂಜೆ, 9.30ಕ್ಕೆ ಧ್ವಜಾರೋಹಣ ನಡೆಯಲಿದ್ದು, 10ಕ್ಕೆ ಶರಣ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಕುಂದಗೋಳು ಕಲ್ಯಾಣಪುರ ಮಠದ ಬಸವಣ್ಣಜ್ಜ ಸ್ವಾಮೀಜಿ, ಶಿವಮೂರ್ತಿ ಸ್ವಾಮೀಜಿ ಹಾಜರಿರುತ್ತಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಂದು ಸಂಜೆ 4ಕ್ಕೆ ನಡೆಯಲಿರುವ ಭಾವೈಕ್ಯ ಸಮ್ಮೇಳನವನ್ನು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದು, ರೇಣುಕಾನಂದ ಸ್ವಾಮೀಜಿ, ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಎಸ್.ಎನ್.ಚನ್ನಬಸಪ್ಪ, ಬಿ.ಕೆ.ಸಂಗಮೇಶ್ವರ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಐಕ್ಯಾಟ್ ಏರ್ ಅಂಬ್ಯುಲೆನ್ಸ್ ಸಂಸ್ಥಾಪಕ ನಿರ್ದೇಶಕಿ ಡಾ.ಶಾಲಿನಿ ನಾಲ್ವಾಡ್ ಅವರಿಗೆ ‘ಕೆಳದಿ ರಾಣಿ ಚನ್ನಮ್ಮ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಸಂಧ್ಯಾ ಶೆಣೈ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದ್ದು ನಂತರ ಕಂಚಿನ ರಥೋತ್ಸವ, ಹೂವಿನ ಪಲ್ಲಕ್ಕಿ, ಪಟಾಕಿ ಸೇವೆ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಮುಖರಾದ ವಿಜಯಕುಮಾರ್, ರಾಜು, ದೇವೇಂದ್ರಪ್ಪ, ರಾಜೇಂದ್ರ ಗೌಡ, ಮಂಜುನಾಥ್, ಯೋಗೀಶ್, ಮುರುಗೇಂದ್ರ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.