ಸಾಗರ: ನಗರಲ್ಲಿರುವ ತ್ಯಾಗರ್ತಿ ವೃತ್ತದಿಂದ ಎಲ್.ಬಿ. ಕಾಲೇಜು ವೃತ್ತದವರೆಗೆ ನಡೆಯುತ್ತಿರುವ ಹೆದ್ದಾರಿ ವಿಸ್ತರಣೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂಬ ಮಾತುಗಳು ಸಾರ್ವಜನಿಕರಿಮದ ಕೇಳಿಬರುತ್ತಿವೆ.
₹ 80 ಕೋಟಿ ವೆಚ್ಚದ ಈ ಕಾಮಗಾರಿಯ ಗುತ್ತಿಗೆ ಕರಾರಿನ ಪ್ರಕಾರ ಮುಂಬರುವ ಜೂನ್ ಅಂತ್ಯದೊಳಗೆ ಕಾಮಗಾರಿ ಮುಗಿಯಬೇಕಿದೆ. ಆದರೆ, ಈಗ ಕಾಮಗಾರಿ ನಡೆಯುತ್ತಿರುವ ವೇಗ ನೋಡಿದರೆ ಮಳೆಗಾಲದ ಮುನ್ನ ಶೇ 50ರಷ್ಟೂ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ಅನುಮಾನ ಮೂಡಿದೆ.
ರಸ್ತೆ ಮಧ್ಯದಿಂದ ಎರಡೂ ಬದಿಯಲ್ಲಿ 11.5 ಮೀಟರ್ ಮಾರ್ಜಿನ್‌ನೊಂದಿಗೆ ವಿಸ್ತರಣೆ ಕಾಮಗಾರಿ ನಡೆಯುವುದು ಎಂದು ನಿಶ್ಚಿತವಾಗಿದೆ. ಈ ಮಾರ್ಜಿನ್ ವ್ಯಾಪ್ತಿಯೊಳಗೆ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಚರಂಡಿ, ವಿದ್ಯುತ್ ಕಂಬ, ಫುಟ್‌ಪಾತ್ ಕೂಡ ಬರುವುದು ಎಂದು ಅಧಿಸೂಚನೆಯಲ್ಲಿ ನಮೂದಾಗಿದೆ.
ಆದರೆ, ಪ್ರಭಾವಿ ವ್ಯಕ್ತಿಗಳ ವಾಣಿಜ್ಯ ಸಂಕೀರ್ಣ, ಮಳಿಗೆಗಳು ಇರುವಲ್ಲಿ ಮಾರ್ಜಿನ್ ಬಿಡುವ ವಿಷಯದಲ್ಲಿತಾರತಮ್ಯ ನೀತಿ ಅನುಸರಿಸಲಾಗಿದೆ. ಕೆಲವಡೆ 2ರಿಂದ 2.5 ಅಡಿ ಅಗಲದ ಚರಂಡಿ ನಿರ್ಮಿಸಿದರೆ, ಮತ್ತೆ ಕೆಲವೆಡೆ 1ರಿಂದ 1.5 ಅಡಿ ಚರಂಡಿ ನಿರ್ಮಿಸಲಾಗಿದೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಫ್ರಾಂಕಿ ಲೋಬೊ ಹೇಳುತ್ತಾರೆ.
‘ಸುಪ್ರೀಂಕೋರ್ಟ್‌ನ ನಿರ್ದೇಶನದ ಪ್ರಕಾರ ರಸ್ತೆ ವಿಸ್ತರಣೆ ಕಾಮಗಾರಿಗೂ ಮುನ್ನ ಭೂಸ್ವಾಧೀನ ಪ್ರಕ್ರಿಯೆ ಮೂಲಕ ವಶಪಡಿಸಿಕೊಂಡ ಆಸ್ತಿಗಳ ಮಾಲೀಕರಿಗೆ ಪರಿಹಾರ ವಿತರಿಸಬೇಕು. ಆದರೆ, ಇಲ್ಲಿ ಈವರೆಗೂ ಪರಿಹಾರ ವಿತರಿಸದೆ ಲೋಪ ಎಸೆಗಲಾಗಿದೆ’ ಎನ್ನುತ್ತಾರೆ ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್.
‘ಇಷ್ಟೆಲ್ಲ ಹಣ ವ್ಯಯಿಸಿ ಬರೀ ಚರಂಡಿ ವಿಸ್ತರಣೆ ನಿರ್ಮಿಸುವುದಾದರೆ ರಸ್ತೆ ವಿಸ್ತರಣೆಯ ಉದ್ದೇಶ ಹೇಗೆ ಈಡೇರುತ್ತದೆ. ಅಲ್ಲದೆ ಈಗ ಬೈಪಾಸ್ ನಿರ್ಮಿಸುವ ಮಾತು ಕೇಳಿ ಬರುತ್ತಿದ್ದು, ಬೈಪಾಸ್ ಮಾಡುವುದಾದರೆ ವಿಸ್ತರಣೆ ಕಾಮಗಾರಿ ಏಕೆ?’ ಎಂದು ಅವರು ಪ್ರಶ್ನಿಸುತ್ತಾರೆ.
ನ್ಯೂ ಬಿ.ಎಚ್.ರಸ್ತೆಯ ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಪ್ರಯಾಣಿಕರು ಸುಡು ಬಿಸಿಲಿನಲ್ಲಿ ರಸ್ತೆ ಮೇಲೆಯೇ ನಿಂತು ಬಸ್‌ಗಳಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಫುಟ್‌ಪಾತ್, ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಯೋಜನೆ ವಿಸ್ತರಣೆ ಕಾಮಗಾರಿಯಲ್ಲಿ ಇಲ್ಲ ಎಂಬ ದೂರು ಕೇಳಿ ಬಂದಿದೆ.
ಕಾಮಗಾರಿಯ ಅಸಮರ್ಪಕತೆ ಕುರಿತು ಸಾರ್ವಜನಿಕರು ಸಲ್ಲಿಸಿದ ದೂರಿನ ಆಧಾರದ ಮೇರೆಗೆ ಕಳೆದ ತಿಂಗಳು ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದಾಗ್ಯೂ ಕಾಮಗಾರಿಯ ಎಡವಟ್ಟುಗಳು ಮುಂದುವರಿದಿದೆ ಎಂಬುದು ಸಾರ್ವಜನಿಕರ ಅಳಲು.
‘ಅರಣ್ಯ ಇಲಾಖೆಯು ಸಕಾಲದಲ್ಲಿ ಮರಗಳನ್ನು ತೆರವುಗೊಳಿಸಲು ಅನುಮತಿ ನೀಡದ ಕಾರಣ ಹೆದ್ದಾರಿ ವಿಸ್ತರಣೆ ಕಾಮಗಾರಿ ವಿಳಂಬವಾಗುತ್ತಿದೆ. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.