ಶಿವಮೊಗ್ಗ: ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸುವ ವಿಚಾರಗಳು ಸರ್ಕಾರವನ್ನು ಸದಾ ಎಚ್ಚರಿಸುತ್ತಿದ್ದು, ಸಮಾಜಕ್ಕೆ ಪೂರಕ ಶಕ್ತಿಯಾಗಿ ನಿಂತಿದೆ ಎಂದು ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ)ದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅಭಿಪ್ರಾಯಪಟ್ಟರು.
ಇಲ್ಲಿನ ಗೋಪಾಳದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಫ್ರೆಂಡ್ಸ್ ಸೆಂಟರ್ ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿನ ವಾಸ್ತವತೆಯನ್ನು ಕವಿತೆ, ಹನಿಗವನ, ಕಥೆಗಳ ಮೂಲಕ ವಿಶ್ಲೇಷಿಸಿ ಪರಸ್ಪರ ಚರ್ಚಿಸುವಂತಹ ಕಾರ್ಯಕ್ಕೆ ಸಾಹಿತ್ಯ ಹುಣ್ಣಿಮೆ ಪ್ರೇರಣೆಯಾಗಿದೆ. ವಿದೇಶದಲ್ಲಿರುವ ಕನ್ನಡಿಗರು ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಅಲ್ಲಿ ಆಯೋಜಿಸುವ ಮೂಲಕ ನಾಡಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಮಕ್ಕಳಿಗೆ ಇಂಗ್ಲಿಷ್ ಮತ್ತು ಕನ್ನಡವನ್ನು ಪರಿಪೂರ್ಣವಾಗಿ ಕಲಿಯಲು ಸಾಧ್ಯವಾಗಿಲ್ಲ. ಧಾವಂತದ ಜೀವನದಲ್ಲಿ ಪಾಲಕರು ಪ್ರತಿಷ್ಠಿತ ಶಾಲೆಗಳ ಮೇಲೆ ತೋರುವಷ್ಟು ಆಸಕ್ತಿಯನ್ನು ತಮ್ಮ ಮಕ್ಕಳಿಗೆ ಮಾತೃಭಾಷೆಯನ್ನು ಕಲಿಸಲು ತೋರಿಸುತ್ತಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಬೇಸರಿಸಿದರು.
‘ಜನಪದ ಕಲಾವಿದರು ನಮ್ಮ ಸಂಸ್ಕೃತಿಯ ತಾಯಿ ಬೇರು ಇದ್ದಂತೆ. ಅವರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.
ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ. ಜಿ. ಧನರಾಜ್ ಅಧ್ಯಕ್ಷತೆ ವಹಿಸಿದ್ದರು. ಫ್ರೆಂಡ್ಸ್ ಸೆಂಟರ್ ಮಹಿಳಾ ಘಟಕದ ಅಧ್ಯಕ್ಷೆ ಸ್ವಪ್ನಾ ಬದರಿನಾಥ, ಮಾಜಿ ಅಧ್ಯಕ್ಷ ಜಿ. ವಿಜಯಕುಮಾರ್, ಮಧುಸೂದನ್ ಐತಾಳ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.