ಹೊಸನಗರ ತಾಲ್ಲೂಕು ನಗರ ಪ್ರೌಢಶಾಲೆಯಲ್ಲಿ ನಡೆದ ಸಹ್ಯಾದ್ರಿ ಸಂವಾದ ಕಾರ್ಯಕ್ರಮದಲ್ಲಿ ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಮಾತನಾಡಿದರು
ಹೊಸನಗರ: ‘ಪಶ್ಚಿಮಘಟ್ಟಗಳ ಸಹ್ಯಾದ್ರಿ ಶ್ರೇಣಿಗಳು ಜಾಗತಿಕ ಜೀವಂತಿಕೆಯ ತಾಣ. ಆ ಜೀವಂತಿಕೆಯಲ್ಲಿ ನಮ್ಮ ಬದುಕು ಅಡಗಿದೆ’ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ನಗರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಾರಾ ಸಂಸ್ಥೆ ಹಮ್ಮಿಕೊಂಡಿದ್ದ ಸಹ್ಯಾದ್ರಿ ಸಂವಾದ, ಜೀವವೈವಿಧ್ಯತೆ ಮಹತ್ವ ಸಾರುವ ಭಿತ್ತಿಚಿತ್ರಗಳ ಪ್ರಾತ್ಯಕ್ಷಿಕೆಗೆ ಅವರು ಚಾಲನೆ ನೀಡಿ ಮಾತನಾಡಿದರು.
‘ಇಂದು ಸಕಲ ಜೀವರಾಶಿಗಳ ಬದುಕು ಅಸ್ತವ್ಯಸ್ತವಾಗಿದೆ. ಇದಕ್ಕೆ ಕಾರಣವಾಗಿರುವುದು ಮಾನವನ ಜೀವನ ಶೈಲಿ. ಮಾನವ ತನ್ನ ರಕ್ಷಣೆಗೆ ಕೈಗೊಳ್ಳುವ ಕ್ರಮಗಳಿಂದಾಗಿ ಜೀವವೈವಿಧ್ಯ ನಾಶವಾಗುತ್ತಿದೆ. ಇದರ ಪರಿಣಾಮ ಅಂತಿಮವಾಗಿ ಮನುಷ್ಯನ ಮೇಲೇ ಬೀಳುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಜೀವವೈವಿಧ್ಯಗಳ ಉಳಿವು ಪ್ರಮುಖವಾಗಿರುವುದು ಆಹಾರ ಸರಪಳಿಯಲ್ಲಿ. ಆದರೆ, ಆಹಾರ ಸರಪಳಿಯನ್ನು ಮನುಷ್ಯನೇ ಮುರಿಯುತ್ತಿದ್ದಾನೆ. ಇದರಿಂದಾಗಿ ಹೇರಳವಾಗಿದ್ದ ಕಾಡುಪ್ರಾಣಿಗಳು, ಪಕ್ಷಿಗಳು ಇಂದು ನಾಶವಾಗಿವೆ. ವನ್ಯಜೀವಿ ಸಂಕುಲಗಳ ಮಹತ್ವವನ್ನು ಅರಿಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಹೇಳಿದರು.
ಸಾರಾ ಸಂಸ್ಥೆಯ ಪ್ರತಿನಿಧಿ ಧನುಷ್, ಸಹ್ಯಾದ್ರಿ ಸಂವಾದದ ಮೂಲಕ ಮಕ್ಕಳಲ್ಲಿ ಸಹ್ಯಾದ್ರಿಯ ಅರಿವು ಮೂಡಿಸಲಾಗುತ್ತಿದೆ. ಭೌಗೋಳಿಕ ವ್ಯಾಪ್ತಿ, ಕೃತಕ ರಾಸಾಯನಿಕಗಳ ಪರಿಣಾಮ, ಜೀವವೈವಿಧ್ಯಗಳು, ಭೂಮಿಯ ಜೀವಜಲ, ಪೂರ್ವಜರ ಪರಿಸರ ಪ್ರೀತಿ, ಅಣೆಕಟ್ಟುಗಳು, ಜೀವಜಲ, ಭೂವೈಜ್ಞಾನಿಕ ವ್ಯಾಪ್ತಿ, ಸಸ್ಯ ಸಂಪತ್ತು ಮತ್ತು ಹವಾಮಾನ, ಸೂಕ್ಷ್ಮ ಜೀವಗಳು, ಸಹ್ಯಾದ್ರಿಯ ಸಂಸ್ಕೃತಿ ಸೇರಿ ಸಹ್ಯಾದ್ರಿಯ ಮಹತ್ವ ಸಾರುವ ದೃಶ್ಯಗಳ ಪ್ರದರ್ಶನ ಮಾಡುವ ಮೂಲಕ ಮಕ್ಕಳ ಗಮನ ಸೆಳೆಯಲಾಗುತ್ತಿದೆ. ಪ್ರತಿ ಶಾಲೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಎಚ್.ಟಿ. ರಮೇಶ್, ಉಪಾಧ್ಯಕ್ಷೆ ಅಶ್ವಿನಿ ರಮೇಶ್, ಮುಖ್ಯಶಿಕ್ಷಕ ಸುಧಾಕರ ಜಿ, ಶಿಕ್ಷಕರಾದ ಸವಿತಾ ಎಂ.ಆರ್, ವೆಂಕಟೇಶ್ ಜಿ, ವೈದ್ಯ ಶೇಖರ ನಾಯ್ಕ, ಸೌಮ್ಯ, ಅಕ್ಷಯ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.