ADVERTISEMENT

ಸಕಾಲ ಸೇವೆ: ಮತ್ತೆ ಮೊದಲ ಸ್ಥಾನಕ್ಕೇರಿದ ಶಿವಮೊಗ್ಗ ಜಿಲ್ಲೆ

ವಿವಿಧ ಇಲಾಖೆಗಳ ಮಧ್ಯೆ ಸಮನ್ವಯದ ಕೊಂಡಿಯಾದ ಜಿಲ್ಲಾಧಿಕಾರಿ ದಯಾನಂದ, ಎಡಿಸಿ ಅನುರಾಧ

ಚಂದ್ರಹಾಸ ಹಿರೇಮಳಲಿ
Published 13 ಡಿಸೆಂಬರ್ 2018, 16:30 IST
Last Updated 13 ಡಿಸೆಂಬರ್ 2018, 16:30 IST
ಶಿವಮೊಗ್ಗ ಜಿಲ್ಲಾಡಳಿತ ಭವನ.
ಶಿವಮೊಗ್ಗ ಜಿಲ್ಲಾಡಳಿತ ಭವನ.   

ಶಿವಮೊಗ್ಗ:ಲೋಕಸಭಾ ಉಪ ಚುನಾವಣೆ ಪರಿಣಾಮ ಸಕಾಲ ಸೇವೆ ರ್‍ಯಾಂಕಿಂಗ್‌ನಲ್ಲಿ ಭಾರಿ ಕುಸಿತ ಕಂಡಿದ್ದ ಶಿವಮೊಗ್ಗ ಜಿಲ್ಲೆ ಫಿನೀಕ್ಸ್‌ನಂತೆ ಚೇತರಿಸಿಕೊಂಡು ಮತ್ತೆ ಪ್ರಥಮ ಸ್ಥಾನ ಪಡೆದಿದೆ.

ಸಕಾಲ ಸೇವೆಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ನಿಗದಿತ ಅವಧಿಯ ಒಳಗೆ ಇತ್ಯರ್ಥ ಮಾಡುವ ಮೂಲಕ ಡಿ. 12ರಿಂದ ಮೊದಲ ಸ್ಥಾನಕ್ಕೆ ಜಿಗಿದಿದೆ.

ಆಯಾ ಜಿಲ್ಲೆಗಳಲ್ಲಿ ವಿವಿಧ ಇಲಾಖೆಗಳು ಕಾಲಮಿತಿಯ ಒಳಗೆ ನಿರ್ವಹಿಸುವ ಸಕಾಲ ಸೇವೆಗಳ ಆಧಾರದ ಮೇಲೆ ‘ಸಕಾಲ ಮಿಷನ್’ ಕಾಲಕಾಲಕ್ಕೆ ರ್‍ಯಾಂಕಿಂಗ್ ನೀಡುತ್ತದೆ. ಅರ್ಜಿ ಸ್ವೀಕೃತಿ, ನಿಗದಿತ ಅವಧಿಯ ಒಳಗೆ ಮಾಡುವ ವಿಲೇವಾರಿ ಅಂಶಗಳನ್ನು ಕ್ರೂಢೀಕರಿಸಿ ಅಂಕಗಳನ್ನು ನೀಡಲಾಗುತ್ತದೆ.

ADVERTISEMENT

ರಾಜ್ಯದ 73 ಇಲಾಖೆಗಳು, ಸಂಸ್ಥೆಗಳು ಒಟ್ಟು 852 ಸೇವೆಗಳನ್ನು ಸಕಾಲ ಯೋಜನೆ ಅಡಿ ನೀಡುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲಿ 43 ಇಲಾಖೆಗಳಿಂದ 704 ಸೇವೆಗಳನ್ನು ನೀಡಲಾಗುತ್ತಿದೆ. ಸಕಾಲ ಯೋಜನೆಯಲ್ಲಿ ಶೇ 80ರಷ್ಟು ಸೇವೆಗಳನ್ನು ಕಂದಾಯ ಇಲಾಖೆಯೇ ನೀಡುತ್ತಿರುವುದು ವಿಶೇಷ. ಕೆಎಸ್‌ಆರ್‌ಟಿಸಿ, ಆಹಾರ ಇಲಾಖೆ, ಪೊಲೀಸ್‌ ಸೇರಿದಂತೆ ಎಲ್ಲ ಇಲಾಖೆಗಳು ನಿಗದಿತ ಅವಧಿಯ ಒಳಗೆ ಈ ಬಾರಿ ಎಲ್ಲ ಅರ್ಜಿಗಳನ್ನೂ ಇತ್ಯರ್ಥ ಮಾಡಿವೆ.

2014ರಲ್ಲಿ ಜಿಲ್ಲೆ 29 ಸ್ಥಾನದಲ್ಲಿತ್ತು. 2016ರ ಆರಂಭದಲ್ಲಿ 14ನೇ ಸ್ಥಾನ ಪಡೆದಿತ್ತು. 2016ರ ಅಕ್ಟೋಬರ್‌ನಲ್ಲಿ ಮೊದಲ ಬಾರಿ ಪ್ರಥಮ ಸ್ಥಾನದ ಶ್ರೇಯಕ್ಕೆ ಪಾತ್ರವಾಗಿತ್ತು. ಈ ಮತ್ತೊಮ್ಮೆ ಅಂತಹ ಶ್ರೇಯ ದೊರೆತಿದೆ. ವಿಳಂಬ ಮಾಡುವ ವಿವಿಧ ಇಲಾಖೆಗಳಿಗೆ 50ಕ್ಕೂ ಹೆಚ್ಚು ಬಾರಿ ಜಿಲ್ಲಾಡಳಿತ ಷೋಕಾಸ್‌ ನೋಟಿಸ್‌ ನೀಡಿತ್ತು. ನಿಗದಿತ ಸಮಯದ ಒಳಗೆ ಅರ್ಜಿ ಇತ್ಯರ್ಥ ಮಾಡಿದ ಅಧಿಕಾರಿಗಳು, ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಪ್ರೋತ್ಸಹಿಸುವ ಕೆಲಸವನ್ನು ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ಹೆಚ್ಚುವರಿ ಜಿಲ್ಲಾಧಿಕಾರಿ ಜೆ. ಅನುರಾಧ ಮಾಡುತ್ತಿದ್ದಾರೆ.

ಅಕ್ಟೋಬರ್ ಹಾಗೂ ನವೆಂಬರ್ ಮಾಸದಲ್ಲಿ ಲೋಕಸಭಾ ಉಪ ಚುನಾವಣೆ ಬಂದ ಕಾರಣ ಹಲವು ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ನೀತಿ ಸಂಹಿತೆಯಿಂದಾಗಿಯೂ ಕೆಲವು ಇಲಾಖೆ ಕಾರ್ಯಗಳು ಸ್ಥಗಿತಗೊಂಡಿದ್ದವು. ಈಗ ಮತ್ತೆ ಎಲ್ಲವೂ ಹಳಿಗೆ ಬಂದಿವೆ. ಎಲ್ಲ ಇಲಾಖೆಗಳ ಸಹಕಾರದ ಫಲವಾಗಿ ಜಿಲ್ಲೆ ಮತ್ತೆ ಪ್ರಥಮ ಸ್ಥಾನ ತಲುಪಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಹರ್ಷ ವ್ಯಕ್ತಪಡಿಸಿದರು.

ಸಕಾಲ ಯೋಜನೆ ಜಾರಿಗೆ ಬಂದ ನಂತರ ಜನರು ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವ ಪ್ರಮೇಯ ತಪ್ಪಿದೆ. ರಾಜ್ಯದಲ್ಲಿ ಇದುವರೆಗೆ ಸುಮಾರು 17 ಕೋಟಿ ಅರ್ಜಿಗಳು ವಿಲೇವಾರಿಯಾಗಿವೆ. ಶೇ 80ರಷ್ಟು ಜನರು ಕಚೇರಿಗಳಿಗೆ ಅಲೆಯುವುದಕ್ಕೆ ವಿರಾಮ ದೊರೆತಿದೆ.

ಸಕಾಲ ನಿರ್ವಹಣೆಯ ಹೊಣೆ ಹೊತ್ತ ಯಾವುದೇ ಅಧಿಕಾರಿ ಕಾಲಮಿತಿಯೊಳಗೆ ಅರ್ಜಿಯನ್ನು ವಿಲೇವಾರಿ ಮಾಡದೇ ಇದ್ದಲ್ಲಿ, ಸಕಾಲದಲ್ಲಿ ದಿನವೊಂದಕ್ಕೆ ₹ 20 ದಂಡ ವಿಧಿಸಿ, ಅದನ್ನು ಪರಿಹಾರ ರೂಪದಲ್ಲಿ ಅರ್ಜಿದಾರರಿಗೆ ನೀಡಲಾಗುತ್ತಿದೆ. ರಾಜ್ಯದ 20 ಸಾವಿರ ಅಧಿಕಾರಿಗಳ ಕಚೇರಿಗಳನ್ನು ಸಕಾಲದಡಿಯಲ್ಲಿ ಗೊತ್ತು ಪಡಿಸಲಾಗಿದೆ.

ಸಕಾಲದಲ್ಲಿ ಇಷ್ಟೆಲ್ಲ ಸವಲತ್ತು ಕಲ್ಪಿಸಿದ್ದರೂ ಬಹುತೇಕ ಜಿಲ್ಲೆಗಳಲ್ಲಿ ಸಾರ್ವಜನಿಕರು ಸಕಾಲ ಕೌಂಟರ್‌ನಲ್ಲಿ ಸೇವೆ ಪಡೆಯುತ್ತಿಲ್ಲ. ಈಗಲೂ ಹಲವರು ಮಧ್ಯವರ್ತಿಗಳಿಗೆ ಹಣಕೊಟ್ಟು ಸೇವೆಗಳನ್ನು ಪಡೆಯುತ್ತಿದ್ದಾರೆ.

‘ಮೊದಲ ಸ್ಥಾನ ಪಡೆದರೆ ಸಾಲದು. ಆ ಸ್ಥಾನ ನಿರಂತರವಾಗಿ ಕಾಪಾಡಿಕೊಂಡು ಹೋಗಬೇಕು. ಅದಕ್ಕಾಗಿ ಎಲ್ಲ ಇಲಾಖೆಗಳ ಸಮನ್ವಯ, ಸಹಕಾರ ಅಗತ್ಯ. ಉಡುಪಿಯಲ್ಲಿ ಇದ್ದಾಗ ಇಂತಹ ಪ್ರಯೋಗಳಲ್ಲಿ ಯಶಸ್ಸು ದೊರಕಿತ್ತು. ಜಿಲ್ಲೆಯಲ್ಲೂ ಅಂತಹ ಮಾನದಂಡ ಅನುಸರಿಸಲಾಗುವುದು’ ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾಧಿಕಾರಿ ಜೆ. ಅನುರಾಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.