ಶಿವಮೊಗ್ಗ : ನ.19ರಂದು ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ವೇತನ ಭಾಗ್ಯ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಜೆಡಿಸ್ ಮುಖಂಡ ಕಾಂತರಾಜ್ ತಿಳಿಸಿದ್ದಾರೆ.
30ವರ್ಷದಿಂದ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ, ನಾವು ಹಲವಾರು ಬಾರಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಒತ್ತಾಯಿಸುತ್ತಾ ಬಂದಿದ್ದೇವೆ ಎಲ್ಲಾ ಪಕ್ಷದ ನಾಯಕರಿಗೂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪನವರಿಗೂ ಮನವಿ ನೀಡಿದ್ದೇವೆ. ನವೆಂಬರ್ 1ರೊಳಗೆ ಸಿಹಿಸುದ್ದಿ ನೀಡುವುದಾಗಿ ಅವರು ಹೇಳಿದ್ದರು. ಆದರೆ ಅದು ಆಶ್ವಾಸನೆಯಾಗಿಯೇ ಉಳಿದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಾದ್ಯಂತ 1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ-ಕಾಲೇಜುಗಳ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಪರಿಸ್ಥಿತಿಯಂತೂ ತೀರಾ ಹದಗೆಟ್ಟಿದ್ದು, ಹಲವು ಶಿಕ್ಷಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರ ಅನುದಾನ ಘೋಷಣೆ ಮಾಡದೇ ಇರುವುದರಿಂದ ಕನ್ನಡ ಶಾಲಾ-ಕಾಲೇಜುಗಳು ಮುಚ್ಚುವ ಹಂತ ತಲುಪಿವೆ. ಈ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಯಾವುದೇ ಸೌಲಭ್ಯವಿಲ್ಲದೆ ನಿವೃತ್ತಿಯ ಅಂಚು ತಲುಪಿದ್ದಾರೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡುವ ಬಡ ಮಕ್ಕಳಿಗೂ ಕೂಡ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯದೇ ಅನ್ಯಾಯವಾಗುತ್ತಿದೆ ಎಂದರು.
2012ರ ವರೆಗೆ ಪ್ರಾರಂಭವಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕೊಡುವುದಾಗಿ ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಯಾವುದೇ ಕ್ರಮವಾಗಿಲ್ಲ. ರಾಜ್ಯದಲ್ಲಿ ಸುಮಾರು 6000ದಷ್ಟು ಅನುದಾನರಹಿತ ಶಾಲಾ-ಕಾಲೇಜುಗಳ ಶಿಕ್ಷಕರಿದ್ದು, ಬದುಕು ನಡೆಸುವುದೇ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸರ್ಕಾರದ ಗಮನ ಸೆಳೆಯಲು ಶಿಕ್ಷಣ ಸಚಿವರ ತವರಿನಲ್ಲೇ ಡಿಸಿ ಕಛೇರಿ ಮುಂಭಾಗ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಹಮ್ಮಿಕೊಳ್ಳಲಾಗಿದೆ ಸರ್ಕಾರ ಕನ್ನಡ ಶಾಲೆಗಳನ್ನು ಉಳಿಸಿ-ಬೆಳಸಬೇಕು ಎಂದು ಒತ್ತಾಯಿಸಿದರು.
ಶರತ್, ಸಂತೋಷ್‌ಕುಮಾರ್, ಪ್ರಶಾಂತ್, ಬದ್ರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.