ADVERTISEMENT

ಭಾರಿ ಪ್ರಮಾಣದ ಮರಳು ತುಂಬಿದ ಲಾರಿ ಓಡಾಟ; ಪಾರದಕಂಡಿ ಸೇತುವೆಗೆ ಕುಸಿತದ ಭೀತಿ

ಶತಮಾನದಂಚಿನ ಸೇತುವೆಗೆ ಹಾನಿ

ರವಿ ನಾಗರಕೊಡಿಗೆ
Published 29 ನವೆಂಬರ್ 2021, 5:14 IST
Last Updated 29 ನವೆಂಬರ್ 2021, 5:14 IST
ಹೊಸನಗರ ತಾಲ್ಲೂಕು ತ್ರಿಣಿವೆ ಗ್ರಾಮದ ಪಾರದಕಂಡಿ ಸೇತುವೆ ಕುಸಿತದ ಭೀತಿ ಎದುರಾಗಿದೆ.
ಹೊಸನಗರ ತಾಲ್ಲೂಕು ತ್ರಿಣಿವೆ ಗ್ರಾಮದ ಪಾರದಕಂಡಿ ಸೇತುವೆ ಕುಸಿತದ ಭೀತಿ ಎದುರಾಗಿದೆ.   

ಹೊಸನಗರ: ತಾಲ್ಲೂಕಿನ ಕಾರ್ಗಡಿ-ಬಿಳ್ಳೋಡಿ ಸಂಪರ್ಕದ ತ್ರಿಣಿವೆ ಸಮೀಪದ ಪಾರದಕಂಡಿ ಬಳಿ ಇರುವ ಸೇತುವೆ ಅಪಾಯದ ಅಂಚಿನಲ್ಲಿದೆ. ಕಿರಿದಾದ ಶತಮಾನದ ಇತಿಹಾಸ ಹೊಂದಿರುವ ಈ ಸೇತುವೆ ಮೇಲೆ ಭಾರಿ ಪ್ರಮಾಣದ ಮರಳು ತುಂಬಿದ ಲಾರಿಗಳು ಓಡಾಡುತ್ತಿದ್ದು, ಸೇತುವೆ ಕುಸಿತದ ಭೀತಿ ಎದುರಾಗಿದೆ.

ಲಾರಿಗಳ ಸಂಚಾರದಿಂದ ಸೇತುವೆಯ ಇಕ್ಕೆಲಗಳಲ್ಲಿ ರಸ್ತೆಯ ಮಧ್ಯ ಭಾಗದಿಂದಲೇ ಬಿರುಕು ಬಿಟ್ಟಿದೆ. ಸೇತುವೆಗೆ ಹೊಂದಿಕೊಂಡಿರುವ ರಸ್ತೆ ಭಾಗದಲ್ಲಿ ಹೊಂಡ ಬಿದ್ದಿದೆ. ರಸ್ತೆಯಲ್ಲಿ ದಿನದಿಂದ ದಿನಕ್ಕೆ ಬಿರುಕು ಹೆಚ್ಚುತ್ತಿದ್ದು, ಕುಸಿದು ಬೀಳುವ ಆತಂಕ ಎದುರಾಗಿದೆ. ರಸ್ತೆ ಅಂಚಿನಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲವಾಗಿದ್ದು, ಪಕ್ಕದ ಮಣ್ಣಿನ ಜಾಗವು ಕುಸಿದು ಜರಿಯುತ್ತಿದೆ.

ತ್ರಿಣಿವೆ ಗ್ರಾಮದ ಸುತ್ತಿನಬೀಸು, ನಾಗರಕೊಡಿಗೆ ಮತ್ತಿತರ ಕಡೆಗಳಲ್ಲಿ ಶರಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಣೆ ಜೋರಾಗಿ ನಡೆದಿದೆ. ದಿನವೂ ಹಗಲು ರಾತ್ರಿ ಎನ್ನದೇ ಭಾರಿ ಪ್ರಮಾಣದ ಮರಳು ತುಂಬಿದ ಲಾರಿಗಳು ಸೇತುವೆ ಮೇಲೆ ಸಂಚರಿಸುತ್ತಿರುವುದರಿಂದ ಸೇತುವೆಯ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ.

ADVERTISEMENT

ಶತಮಾನದ ಸೇತುವೆ: ಪಾರದಕಂಡಿ ಸೇತುವೆ ಶತಮಾನದ ಇತಿಹಾಸ ಹೊಂದಿದೆ. ಬಿದನೂರು ನಾಯಕರ ಆಡಳಿತದಲ್ಲಿ ಪಹರೆಕಂಡಿ ಆಗಿದ್ದ ಈ ಭಾಗದಲ್ಲಿ ಹರಿಯುತ್ತಿದ್ದ ಹಳ್ಳಕ್ಕೆ ಸೇತುವೆ ಕಟ್ಟಲಾಗಿದ್ದು, ತ್ರಿಣಿವೆ ಗ್ರಾಮ ಸೇರಿ ನಾಲ್ಕಾರು ಗ್ರಾಮಗಳಿಗೆ ಸಂಪರ್ಕ ಸೇತುವಾಗಿದೆ. ಕಾರ್ಗಡಿ-ಬಿಳ್ಳೋಡಿ ಮಾರ್ಗದ ತ್ರಿಣಿವೆ ಸಮೀಪದ ಈ ಸೇತುವೆ ಈ ಭಾಗದ ಏಕೈಕ ಸಂಪರ್ಕ ಕೊಂಡಿಯಾಗಿದೆ. ಒಮ್ಮೆ ಈ ಸೇತುವೆ ಕುಸಿದು ಬಿದ್ದರೆ ತ್ರಿಣಿವೆ, ನಾಗರಕೊಡಿಗೆ, ಬೆಣಕಿ, ಬಿಳ್ಳೋಡಿ ಮತ್ತಿತರ ಗ್ರಾಮಗಳು ಸಂಪರ್ಕ ವಂಚಿತವಾಗುತ್ತವೆ. ಈ ಭಾಗದ ಜನರು ಆಸ್ಪತ್ರೆ, ಶಾಲೆ, ಕಾಲೇಜುಗಳಿಗೆ ಹೋಗಲು ಈ ಸೇತುವೆಯೊಂದೇ ಸಂಪರ್ಕ ಕೊಂಡಿಯಾಗಿದೆ. ಈ ಮಾರ್ಗ ಬಿಟ್ಟರೆ ಬಿಳ್ಳೋಡಿಯಿಂದ ಸುತ್ತಿ ಬಳಸಿ ಸೊನಲೆ ಮಾರ್ಗದ ಮೂಲಕ 45 ಕಿ.ಮೀ. ಸುತ್ತಾಡಿ ಹೊಸನಗರ ತಲುಪಬೇಕಾಗುತ್ತದೆ.

ಭಾರಿ ಪ್ರಮಾಣದ ಮರಳು ಸಾಗಣೆ: ತ್ರಿಣಿವೆ ಗ್ರಾಮದಲ್ಲಿನ ಶರಾವತಿ ನದಿ ಪಾತ್ರದಲ್ಲಿ ವ್ಯಾಪಕ ಮರಳು ಲಭ್ಯವಿದೆ. ಮಳೆಗಾಲ ಕಡಿಮೆ ಆಗುತ್ತಿದ್ದಂತೆ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ಶರಾವತಿ ನದಿ ನೀರು ಇಳಿಯುವುದನ್ನೂ ಕಾಯದೆ ಮರಳು ದರೋಡೆ ನಡೆಯುತ್ತಿದೆ. ಬೋಟ್, ತೆಪ್ಪ, ಮರದದಿಮ್ಮಿ ಮೂಲಕ ನದಿ ಪಾತ್ರದಿಂದ ಮರಳು ಎತ್ತುವ ಮರಳುಗಳ್ಳರು ಭಾರಿ ಪ್ರಮಾಣದ ಲಾರಿಯಲ್ಲಿ ಮರಳು ಸಾಗಿಸುತ್ತಾರೆ. ಮರಳುಗಳ್ಳರು ಈ ಭಾಗದಲ್ಲಿ ಬೀಡು ಬಿಟ್ಟು ರಾತ್ರಿ ಹಗಲು ಎನ್ನದೆ ಮರಳು ಸಾಗಾಟದಲ್ಲಿ ತೊಡಗುತ್ತಾರೆ. ಸಾವಿರಾರು ಲೋಡ್ ಮರಳು ಸಾಗಣೆ ಆಗುತ್ತಿರುವುದರಿಂದ ಸಹಜವಾಗಿಯೇ ಸೇತುವೆ ಪಕ್ಕದ ರಸ್ತೆ ಬಿರುಕು ಬಿಟ್ಟಿದೆ. ಗುಂಡಿಗಳು ಬಿದ್ದಿವೆ. ಕಿರಿದಾದ ಸೇತುವೆ ಲಾರಿ ಓಡಾಟದಿಂದ ಘಾಸಿಗೊಂಡಿದ್ದು, ಸೇತುವೆ ಅಸ್ತಿತ್ವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಲಾರಿಗಳ ಓಡಾಟಕ್ಕೆ ಬ್ರೇಕ್ ಹಾಕಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಈ ಭಾಗದಲ್ಲಿ ದಿನವೂ ಅಕ್ರಮವಾಗಿ ಮರಳು ಲೂಟಿ ನಡೆಯುತ್ತಿದೆ. ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಮುಖ ಮಾಡುವುದಿಲ್ಲ. ಲಾರಿಗಳ ಓಡಾಟಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರಾದ ದಿಲೀಪ್‌ಗೌಡ, ಶ್ರೀಧರ್, ಮಹೇಶ್, ಉಮೇಶ್, ಮನು ಆಚಾರ್, ದೇವೇಂದ್ರ ಒತ್ತಾಯಿಸಿದ್ದಾರೆ.

***

ಲಾರಿಗಳ ಸಂಚಾರದಿಂದಾಗಿ ಸೇತುವೆ ಮತ್ತು ರಸ್ತೆಗೆ ಧಕ್ಕೆ ಎದುರಾಗಿದೆ. ಒಮ್ಮೆ ಸೇತುವೆ ಕುಸಿದರೆ ತ್ರಿಣಿವೆ ಗ್ರಾಮಕ್ಕೆ ಯಾವುದೇ ಸಂಪರ್ಕ ಇಲ್ಲವಾಗುತ್ತದೆ. ಈ ಬಗ್ಗೆ ಗ್ರಾಮಸ್ಥರ ಪ್ರತಿಭಟನೆ ಸಂಘಟಿಸಲಾಗುವುದು.

ನಾ.ಶ್ರೀ. ಶಶಿಧರ್, ಜಿ. ಮಹೇಶ್‌ಗೌಡ, ಯುವ ಮುಖಂಡರು, ತ್ರಿಣಿವೆ

***

ಪಾರದಕಂಡಿ ಸೇತುವೆ ಕುಸಿತದ ಭೀತಿ ಕುರಿತಾಗಿ ಗ್ರಾಮಸ್ಥರಿಂದ ಮಾಹಿತಿ ಬಂದಿದೆ. ಅಧಿಕಾರಿಗಳೊಂದಿಗೆ ಖುದ್ದಾಗಿ ಸ್ಥಳ ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು.

ವಿ.ಎಸ್.ರಾಜೀವ್, ತಹಶೀಲ್ದಾರ್, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.