ADVERTISEMENT

ಸಾಗರ: ಒತ್ತುವರಿ ತೆರವಿಗೆ ಒತ್ತಾಯಿಸಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 7:09 IST
Last Updated 22 ಅಕ್ಟೋಬರ್ 2021, 7:09 IST
ಸಾಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು
ಸಾಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು   

ಸಾಗರ: ತಾಲ್ಲೂಕಿನ ಬಳಸಗೋಡು ಗ್ರಾಮದ ಸ.ನಂ. 36ರಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಗುರುವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು.

ಬಹಿರಂಗ ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ‘ಬಳಸಗೋಡು ಗ್ರಾಮದ ಸ.ನಂ.36ರಲ್ಲಿ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಬಲಾಢ್ಯರು ಅತಿಕ್ರಮಿಸಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ’ ಎಂದು ಆರೋಪಿಸಿದರು.

ಕಳೆದ ವರ್ಷ ಬಳಸಗೋಡು ಗ್ರಾಮದಲ್ಲಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವವರ ಕುಮ್ಮಕ್ಕಿನಿಂದ ಸರ್ಕಾರಿ ಭೂಮಿಯ ಒತ್ತುವರಿಯಾಗಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಸಂಚಾಲಕ ಮಂಜುನಾಥ ಬಳಸಗೋಡು ನಡೆಸಿದ ಉಪವಾಸ ಸತ್ಯಾಗ್ರಹದ ಕಾರಣಕ್ಕೆ ಒತ್ತುವರಿ ತೆರವುಗೊಳಿಸಲಾಗಿತ್ತು. ಈಗ ಮತ್ತೆ ಒತ್ತುವರಿ ನಡೆದಿದೆ ಎಂದು ದೂರಿದರು.

ADVERTISEMENT

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಮಂಜುನಾಥ ಬಳಸಗೋಡು ಮಾತನಾಡಿ, ‘ಸಾಗರ ನಗರಕ್ಕೆ ಬಳಸಗೋಡು ಗ್ರಾಮ ಹತ್ತಿರದಲ್ಲಿರುವುದರಿಂದ ಇಲ್ಲಿನ ಸರ್ಕಾರಿ ಭೂಮಿಯ ಮೇಲೆ ರಿಯಲ್ ಎಸ್ಟೇಟ್ ಮಾಫಿಯಾದ ಕಣ್ಣುಬಿದ್ದಿದೆ. ಬೇನಾಮಿ ವ್ಯಕ್ತಿಗಳನ್ನು ಸರ್ಕಾರಿ ಭೂಮಿಯಲ್ಲಿ ಕೂರಿಸಿ ಅವರಿಂದ ಬೆಲೆ ಬಾಳುವ ಭೂಮಿಯನ್ನು ಲಪಟಾಯಿಸುವ ಹುನ್ನಾರ ನಡೆದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಡಾ.ನಾಗರಾಜ್ ಎಲ್., ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, 15 ದಿನಗಳೊಳಗೆ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನಕಾರರು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾ ಸಂಚಾಲಕ ರಾಮಣ್ಣ ಹಸಲರು, ಲಕ್ಷ್ಮಮ್ಮ ಹಿರೇಮನೆ, ಕೃಷ್ಣಪ್ಪ, ಕಮಲಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.