ADVERTISEMENT

ಹಿರಿಯ ಪ್ರಾಥಮಿಕ ಶಾಲೆಗಳಲ್ಲೂ ಮಕ್ಕಳ ಕಲರವ

ಸರ್ಕಾರಿ ಶಾಲೆಗಳಿಗೆ ಹೆಚ್ಚು ಹಾಜರಾತಿ, ಹೂ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 3:08 IST
Last Updated 7 ಸೆಪ್ಟೆಂಬರ್ 2021, 3:08 IST
ತೀರ್ಥಹಳ್ಳಿ ತಾಲ್ಲೂಕು ಕೋಡುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಲೋಕೇಶಪ್ಪ ಅವರು ವಿದ್ಯಾರ್ಥಿಗಳಿಗೆ ಮಾಸ್ಕ್‌ ನೀಡಿ ಬರಮಾಡಿಕೊಂಡರು.
ತೀರ್ಥಹಳ್ಳಿ ತಾಲ್ಲೂಕು ಕೋಡುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಲೋಕೇಶಪ್ಪ ಅವರು ವಿದ್ಯಾರ್ಥಿಗಳಿಗೆ ಮಾಸ್ಕ್‌ ನೀಡಿ ಬರಮಾಡಿಕೊಂಡರು.   

ಶಿವಮೊಗ್ಗ: ಜಿಲ್ಲೆಯ ಶಾಲೆಗಳ ಆವರಣಗಳು ತಳಿರು–ತೋರಣ, ರಂಗೋಲಿಯಿಂದ ಕಂಗೊಳಿಸಿದ್ದವು. ವರ್ಷದ ನಂತರ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಕಲರವ ಕಂಡು ಬಂತು.

ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಂಡರು. ಇದುವರೆಗೆ ಆನ್‌ಲೈನ್‌ನಲ್ಲಿ ಪಾಠ ಕೇಳಿದ್ದ
ಮಕ್ಕಳು, ಖುಷಿಯಿಂದಲೇ ಶಾಲೆಗೆ ಬಂದಿದ್ದರು.

ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆರಂಭದ ದಿನಕ್ಕೆ ಶಿಕ್ಷಣ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು.ಶಾಲೆಗಳಿಗೆ ಸ್ಯಾನಿಟೈಸ್‌ ಮಾಡಲಾಗಿತ್ತು. ಮಾಸ್ಕ್ ಧರಿಸುವುದನ್ನು ಕಡ್ಡಾಯ ಗೊಳಿಸಲಾಗಿತ್ತು. ತಪಾಸಣೆ ನಂತರ ಶಾಲೆಗೆ ಬರಮಾಡಿಕೊಳ್ಳಲಾಯಿತು. ಪೋಷಕರ ಅನುಮತಿ ಪತ್ರ ಕಡ್ಡಾಯಗೊಳಿಸಲಾಗಿತ್ತು.

ADVERTISEMENT

ಕೆಲ ಶಾಲೆಗಳನ್ನುತಳಿರು ತೋರಣಗಳಿಂದ ಸಿಂಗರಿಸಿ, ಮಕ್ಕಳಿಗೆ ಹೂವು ಕೊಡುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಇನ್ನು ಕೆಲ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಮಾಸ್ಕ್‌ ನೀಡುವ ಮೂಲಕ ಬರಮಾಡಿಕೊಂಡರು. ವಿವಿಧ ಶಾಲೆಗಳಿಗೆ ಡಿಡಿಪಿಐ ಎನ್‌.ಎಂ.ರಮೇಶ್‌ ಭೇಟಿ ಕೊಟ್ಟು, ಮಕ್ಕಳ ಸುರಕ್ಷತೆಗೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು.

ಅಕ್ಟೋಬರ್ 31ರವರೆಗೆ ದಾಖಲಾತಿ: ಮೊದಲ ದಿನ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿತ್ತು. ಸರ್ಕಾರಿ ಶಾಲೆಯಲ್ಲಿ ಶೇ 75 ಹಾಗೂ ಖಾಸಗಿ ಶಾಲೆಯಲ್ಲಿ ಶೇ 65ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದರು. ಅ. 31ರವರೆಗೆ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಶಾಲೆಗಳಿಗೆ ದಾಖಲಾಗದ ಮಕ್ಕಳನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣದ ಜತೆಗೆ ಆರೋಗ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಡಿಡಿ‍ಪಿಐ ತಿಳಿಸಿದರು.

ಪ್ರೌಢಶಾಲೆಗಳಲ್ಲಿ ಕೊಠಡಿಗಳ ಕೊರತೆ: ಪ್ರೌಢಶಾಲೆಗಳಲ್ಲಿ 8,9 ಹಾಗೂ ಎಸ್ಸೆಸ್ಸೆಲ್ಸಿಯವರೆಗಿನ ಎಲ್ಲ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದ ಕಾರಣ ಬಹುತೇಕ ಶಾಲೆಗಳಲ್ಲಿ ಕೊಠಡಿಗಳ ಸಮಸ್ಯೆ ಎದುರಾಗಿತ್ತು. ಒಂದು ಬೆಂಚ್‌ಗೆ ಇಬ್ಬರು ಮಕ್ಕಳನ್ನು ಮಾತ್ರ ಕೂರಿಸಬೇಕಿರುವುದರಿಂದ ಹೊಸ ಸಮಸ್ಯೆ ಎದುರಾಗಿದೆ. ಕೆಲವು ಶಾಲೆಗಳಲ್ಲಿ ಒಂದು ತರಗತಿಯ ಮಕ್ಕಳನ್ನು ಆಟಕ್ಕೆ ಕರೆದುಕೊಂಡು ಹೋಗಿ, ಉಳಿದ ಮಕ್ಕಳಿಗೆ ಪಾಠ ಮಾಡಲಾಯಿತು.

6ರಿಂದ 10ನೇ ತರಗತಿಯ ಮಕ್ಕಳು ಶಾಲೆಗೆ ಬರುವ ಕಾರಣ ನಿರ್ದಿಷ್ಟ ಮಾರ್ಗಗಳ ಮೂಲಕ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿತ್ತು. ಬಸ್‌ನಲ್ಲಿ ಮಕ್ಕಳನ್ನು ಅಂತರವಿಟ್ಟು ಕೂರಿಸಲು ವಾಹನಗಳ ಸಿಬ್ಬಂದಿ ಪರದಾಡಿದರು. ನಗರ ಪ್ರದೇಶಗಳಲ್ಲಿ ಕೆಲವು ಮಕ್ಕಳು ಬಸ್‌ಗಳಲ್ಲಿ ನಿಂತುಕೊಂಡೇ ಪ್ರಯಾಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.