ADVERTISEMENT

ನಗರದ ಸಮಸ್ಯೆ ಇತ್ಯರ್ಥಕ್ಕೆ ಮುಖ್ಯಮಂತ್ರಿಗೆ ಮೊರೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 4:41 IST
Last Updated 22 ಏಪ್ರಿಲ್ 2022, 4:41 IST
ಶಿವಮೊಗ್ಗದಲ್ಲಿ ಗುರುವಾರ ಪಾಲಿಕೆ ಸದಸ್ಯರು ನಗರದ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಗುರುವಾರ ಪಾಲಿಕೆ ಸದಸ್ಯರು ನಗರದ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.   

ಶಿವಮೊಗ್ಗ: ನಗರ ಹಲವು ಇಲಾಖೆಗಳಲ್ಲಿ ಬಗೆಹರಿಸಲಾಗದ ಸಮಸ್ಯೆಗಳಿವೆ. ಇಲ್ಲಿನ ಆಡಳಿತ ವ್ಯವಸ್ಥೆಗೆ ನಾಗರಿಕರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿ ನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕೊಳಚೆಪ್ರದೇಶಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗೆ 1,590 ಮನೆಗಳಿಗೆ 2018ರಲ್ಲಿ ಅನುಮೋದನೆ ನೀಡಿದ್ದು, ಯೋಜನೆಗೆ ಎರಡು ವರ್ಷಗಳ ಅವಧಿಗೆ ನಿಗದಿಪಡಿಸಲಾಗಿತ್ತು. ಈ ಪ್ರಕ್ರಿಯೆ ಅಡಿಯಲ್ಲಿ 800 ಮನೆಗಳ ಕಾಮಗಾರಿ ಪ್ರಾರಂಭವಾಗಿದೆ. 350 ಮನೆಗಳ ಕಾಮಗಾರಿಯಷ್ಟೇ ಪೂರ್ಣಗೊಂಡಿದೆ. ಸರ್ಕಾರದಿಂದ ಹಣ ಬಿಡುಗಡೆ ಆಗದೆ ಇರುವುದು ವಿಳಂಬಕ್ಕೆ ಕಾರಣ. ಸರ್ಕಾರದಿಂದ ₹ 3.20 ಕೋಟಿ ಬಿಡುಗಡೆಯಾಗಬೇಕಿದೆ. ಗುತ್ತಿಗೆದಾರರು ಮನೆ ನಿರ್ಮಿಸಿಕೊಡದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.

ಆಶ್ರಯ ಯೋಜನೆ ಅಡಿಯಲ್ಲಿ ಶಿವಮೊಗ್ಗ ನಗರದ ನಾಗರಿಕರಿಗೆ ಆಶ್ರಯ ಸಮಿತಿಯಿಂದ ಗೋವಿಂದಪುರ, ಗೋಪಿಶೆಟ್ಟಿಕೊಪ್ಪ ಗ್ರಾಮದಲ್ಲಿ 4.5 ಎಕರೆ ವಿಸ್ತೀರ್ಣದಲ್ಲಿ 4,836 ಜಿ+2 ಮಾದರಿಯ ಮನೆಗಳನ್ನು ನಿರ್ಮಾಣ ಮಾಡುವ ಯೋಜನೆ 2017ರಲ್ಲಿ ಹಮ್ಮಿಕೊಳ್ಳಲಾಗಿತ್ತು. ನಾಲ್ಕು ವರ್ಷ ಕಳೆದರೂ ಯಾರಿಗೂ ಆಶ್ರಯ ಮನೆಗಳ ಹಸ್ತಾಂತರ ಆಗಿಲ್ಲ. ವಸತಿ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಬೇಡಿಕೆ ಈಡೇರಿಲ್ಲ ಎಂದು ಆರೋಪಿಸಿದರು.

ADVERTISEMENT

ಸಾಕಷ್ಟು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಕರ್ನಾಟಕ ನಗರ ನೀರು ಸರಬರಾಜು ಮಂಡಳಿ, ಮೆಸ್ಕಾಂಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇದೆ. ಪ್ರತಿನಿತ್ಯ ನಾಗರಿಕರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಎಚ್.ಸಿ.ಯೋಗೇಶ್,ರಮೇಶ್ ಹೆಗಡೆ,
ಆರ್.ಸಿ. ನಾಯಕ್, ಶಮೀರ್ ಖಾನ್, ರಂಗೇಗೌಡರು, ಚೇತನ್, ಮಧುಸೂದನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.