ADVERTISEMENT

ಶಿವಮೊಗ್ಗ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ, ಸಹ ಪ್ರಾಧ್ಯಾಪಕ ಅಮಾನತು

ಸಿಮ್ಸ್: ಇಲಾಖಾ ವಿಚಾರಣೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:23 IST
Last Updated 22 ಜುಲೈ 2022, 5:23 IST

ಶಿವಮೊಗ್ಗ: ವೈದ್ಯಕೀಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆಇಲ್ಲಿನ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್) ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆ ಗುರುವಾರ ಆದೇಶಿಸಿದೆ.

ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಪ್ರಕರಣವನ್ನು ಸಿಮ್ಸ್ ಆಡಳಿತ ಮುಚ್ಚಿ ಹಾಕುತ್ತಿದೆ ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ಸದಸ್ಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಹೀಗಾಗಿ, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ವಿರುದ್ಧದ ಜಿಲ್ಲಾ ಮಟ್ಟದ ಸ್ಥಳೀಯ ದೂರು ನಿವಾರಣಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಸಿಮ್ಸ್‌ ಕ್ಯಾಂಪಸ್‌ಗೆ ತೆರಳಿ ಸಂತ್ರಸ್ತೆಯನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದರು. ಪ್ರಕರಣದ ಬಗ್ಗೆ ಬುಧವಾರ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್ ಅವರಿಗೆ ವರದಿ ಸಲ್ಲಿಸಿದ್ದರು.

‘ಆರೋಪಕ್ಕೆ ಸಂಬಂಧಿಸಿದಂತೆ ಸಹ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್‌ ಅವರನ್ನು ಅಮಾನತು ಮಾಡಿ ಇಲಾಖೆ ವಿಚಾರಣೆಗೆ ಸೂಚಿಸಿ ಇಲಾಖೆಯಿಂದ ಆದೇಶಿಸಲಾಗಿದೆ’ ಎಂದು ಸಿಮ್ಸ್ ಕಾರ್ಯದರ್ಶಿ ಕೆ.ಎಚ್.ಶಿವಕುಮಾರ್ ‘ಪ್ರಜಾವಾಣಿ’ಗೆ
ಖಚಿತಪಡಿಸಿದರು.

ADVERTISEMENT

ವೈದ್ಯಕೀಯ ವ್ಯಾಸಂಗ ಪೂರ್ಣಗೊಂಡಿರುವುದರಿಂದ ಜುಲೈ 15ರಂದು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯಲು ಸಹ ಪ್ರಾಧ್ಯಾಪಕರ ಬಳಿ ತೆರಳಿದ್ದಾಗ, ಅವರು ಅಸಭ್ಯವಾಗಿ ವರ್ತಿಸಿ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದರು ಎಂದು ವಿದ್ಯಾರ್ಥಿನಿಯು ದೂರು ಸಲ್ಲಿಸಿದ್ದರು. ಈ ಬಗ್ಗೆ ಜುಲೈ 16ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ?
‘ಲೈಂಗಿಕ ಕಿರುಕುಳ ನಡೆದಿಲ್ಲ. ತಪ್ಪು ಗ್ರಹಿಕೆಯಿಂದ ವಿವಾದ ಉಂಟಾಗಿತ್ತು. ಹೀಗಾಗಿ, ವಿದ್ಯಾರ್ಥಿನಿ ಬೇಷರತ್ತಾಗಿ ದೂರು ವಾಪಸ್ ಪಡೆದಿದ್ದಾರೆ’ ಎಂದು ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಅವರು ಸೋಮವಾರ ಪತ್ರಿಕಾ ಪ್ರಕಟಣೆ ನೀಡಿದ್ದರು.

‘ಕಿರುಕುಳ ನೀಡಿದ ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಂಡಿರುವ ವೈದ್ಯಕೀಯ ಶಿಕ್ಷಣ ಇಲಾಖೆಯು, ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಸಿಮ್ಸ್ ನಿರ್ದೇಶಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್‌ನ ಕೆ.ಪಿ.ಶ್ರೀಪಾಲ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

***

ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಇಲಾಖೆ ವಿಚಾರಣೆಗೆ ಆದೇಶಿಸಲಾಗಿದೆ
–ಡಾ.ಆರ್. ಸೆಲ್ವಮಣಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.