ADVERTISEMENT

ಶರಾವತಿಗೆ ಕೆಪಿಸಿಯಿಂದ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 4:19 IST
Last Updated 3 ಆಗಸ್ಟ್ 2021, 4:19 IST
ಕಾರ್ಗಲ್ ಸಮೀಪದ ಲಿಂಗನಮಕ್ಕಿ ಜಲಾಶಯದ ಶರಾವತಿ ನದಿಗೆ ಕೆಪಿಸಿ ಅಧಿಕಾರಿಗಳು ಬಾಗಿನ ಸಮರ್ಪಿಸಿದರು
ಕಾರ್ಗಲ್ ಸಮೀಪದ ಲಿಂಗನಮಕ್ಕಿ ಜಲಾಶಯದ ಶರಾವತಿ ನದಿಗೆ ಕೆಪಿಸಿ ಅಧಿಕಾರಿಗಳು ಬಾಗಿನ ಸಮರ್ಪಿಸಿದರು   

ಕಾರ್ಗಲ್: ನಾಡಿಗೆ ಬೆಳಕು ನೀಡಲು ಲಿಂಗನಮಕ್ಕಿ ಅಣೆಕಟ್ಟೆಯ ಒಡಲಿನಲ್ಲಿ ಭರ್ತಿಯಾಗುವ ಶರಾವತಿಗೆ ಸೋಮವಾರ ಕೆಪಿಸಿ ಇಲಾಖೆಯ ಪರವಾಗಿ ಬಾಗಿನ ಸಮರ್ಪಿಸಲಾಗುತ್ತಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ನಾರಾಯಣ ಗಜಕೋಶ್ ತಿಳಿಸಿದರು.

ಇಲ್ಲಿಗೆ ಸಮೀಪದ ಲಿಂಗನಮಕ್ಕಿ ಜಲಾಶಯದಲ್ಲಿ ಸೋಮವಾರ ಶರಾವತಿ ನದಿಗೆ ಬಾಗಿನ ಸಮರ್ಪಿಸಿ ಅವರು ಮಾತನಾಡಿದರು.

‘ಸಮುದ್ರ ಮಟ್ಟದಿಂದ ಗರಿಷ್ಠ 1,819 ಅಡಿ ಎತ್ತರದವರೆಗೂ ಜಲಸಂಗ್ರಹ ಸಾಮರ್ಥ್ಯವಿರುವ ಲಿಂಗನಮಕ್ಕಿ ಜಲಾಶಯದಲ್ಲಿ, 1,795 ಅಡಿ ನೀರು ಭರ್ತಿಯಾದಾಗ ಜಲಾಶಯದ ಅರ್ಧ ಭಾಗ ತುಂಬಿದಂತಾಗುತ್ತದೆ. ಈ ಮಟ್ಟವನ್ನು ಕೆಪಿಸಿ ಇಲಾಖೆಯವರು ಬೆಡ್ ಲೆವೆಲ್ ಎಂದು ಗುರುತಿಸುತ್ತಾರೆ. ಅನಾವೃಷ್ಟಿ ಸಂಭವಿಸಿ ಮಳೆ ಅಭಾವ ಉಂಟಾದಲ್ಲಿ ಜಲಾಶಯದಲ್ಲಿ ಸಂಗ್ರಹವಾಗುವ ನೀರು ಕನಿಷ್ಠ ಅರ್ಧ ಭಾಗ ತುಂಬಿದರೆ ಒಂದು ವರ್ಷ ಕಾಲ ವಿದ್ಯುತ್ ಉತ್ಪಾದನೆ ಮಾಡಿಕೊಂಡು ಹೋಗಲು ಇದರಿಂದ ಸಾಧ್ಯ. ಹಾಗಾಗಿ ಬೆಡ್ ಲೆವೆಲ್ ಮಟ್ಟ ಜಲಾಶಯದ ನೀರು ಸಂಗ್ರಹ ಕಾರ್ಯದಲ್ಲಿ ಮಹತ್ತರವಾದ ಮೈಲುಗಲ್ಲಾಗಿದೆ’ ಎಂದು ಹೇಳಿದರು.

ADVERTISEMENT

ಅಣೆಕಟ್ಟೆಯ ಮೇಲುಸ್ತುವಾರಿ ವಿಭಾಗದ ಅಧೀಕ್ಷಕ ಎಂಜಿನಿಯರ್ ಆರ್.ಶಿವಕುಮಾರ್ ಮಾತನಾಡಿ, ‘ಈಗಾಗಲೇ ಲಿಂಗನಮಕ್ಕಿಯಲ್ಲಿ ಜಲಮಟ್ಟ 1,808ರ ಅಡಿಯನ್ನು ತಲುಪಿದ್ದು, ಭರ್ತಿಯಾಗಲು 11 ಅಡಿಗಳಷ್ಟು ಮಾತ್ರ ಬಾಕಿ ಉಳಿದಿದೆ. ಇಂದು ಸಾಂಕೇತಿಕವಾಗಿ 6ನೇ ರೇಡಿಯಲ್ ಗೇಟಿನ ಮೂಲಕ ಪ್ರಾಯೋಗಿಕವಾಗಿ ಕೆಲವು ನಿಮಿಷಗಳ ಕಾಲ ನದಿ ನೀರನ್ನು ಹೊಳೆದಂಡೆಗೆ ಹಾಯಿಸಲಾಗಿದೆ. ಯಾವುದೇ ಸಂದರ್ಭದಲ್ಲೂ ಅಣೆಕಟ್ಟೆಯಿಂದ ನೀರನ್ನು ಹೊರಹಾಯಿಸ ಬಹುದಾಗಿರುವುದರಿಂದ ಕೆಳದಂಡೆ ಪ್ರದೇಶದವರಿಗೆ 3ನೇ ಪ್ರವಾಹ ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಲಾಗುವುದು’ ಎಂದು ಹೇಳಿದರು.

ಕೆಪಿಸಿ ನಿಗಮದ ಹಿರಿಯ ಅಧಿಕಾರಿಗಳಾದ ಕೆ.ಗಿರೀಶ್, ದಿನೇಶ್ ಕುಮಾರ್, ಮಾನವ ಸಂಪನ್ಮೂಲ ಅಧಿಕಾರಿ ಭಾವೀಕಟ್ಟೆ, ಹಿರಿಯ ಭದ್ರತಾಧಿಕಾರಿ ಶರಣಪ್ಪ, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಎಸ್.ಎಂ.ಗಿರೀಶ್, ವೆಂಕಟೇಶ ಹೆಗಡೆ, ಅನಿತಾ, ಕಾರ್ಮಿಕ ಮುಖಂಡರಾದ ಕೆ.ವೀರೇಂದ್ರ, ಮಿರ್ಜಾಕುಮಾರ್, ಚಂದ್ರು, ಜೋಗ ಜಲಾಶಯ ನಿರ್ವಹಣಾ ಎಂಜಿನಿಯರ್ ಜಗದೀಶ್, ಎಂ.ರಾಜು, ಸಂತೋಷ್,
ಸಿಬ್ಬಂದಿ ಅಧಿಕಾರಿ ಕೆ. ಈಶ್ವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.