
ಶಿವಮೊಗ್ಗ: ‘ವನ್ಯಜೀವಿ ಸಂರಕ್ಷಣೆ ಕಾಯ್ದೆ 1972 ಸೆಕ್ಷನ್ 29ರ ಅನ್ವಯ ಅಭಯಾರಣ್ಯಗಳನ್ನು ಅರಣ್ಯೇತರ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಾಶ ಆಗುತ್ತಿರುವ 54 ಹೆಕ್ಟೇರ್ ಅರಣ್ಯ ಪ್ರದೇಶ ಸಿಂಗಳೀಕ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ಬರುತ್ತದೆ. ಅದನ್ನು ಮುಚ್ಚಿಟ್ಟು ಯೋಜನೆಯ ವಿಚಾರದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಸಾರ್ವಜನಿಕರಿಗೆ ಪುಂಖಾನುಪುಂಖವಾಗಿ ಸುಳ್ಳು ಹೇಳುತ್ತಿದೆ. ಅದಕ್ಕೆ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದೆ’ ಎಂದು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಈಚೆಗೆ ಮಾಧ್ಯಮ ಸಂವಾದದಲ್ಲಿ ನೀಡಿದ್ದ ಮಾಹಿತಿ ಸುಳ್ಳು ಎಂದು ಹೇಳಿದ ಚಿಪ್ಪಳಿ, ಅದಕ್ಕೆ ಪೂರಕವಾಗಿ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
‘ಹಾಲಿ ನಡೆಯುತ್ತಿರುವ ಮಾನವ– ಪ್ರಾಣಿ ಸಂಘರ್ಷಕ್ಕೆ ಅರಣ್ಯ ಇಲಾಖೆಯ ಧೋರಣೆಯೇ ಕಾರಣ. ಶರಾವತಿ ಪಂಪ್ಡ್ ಸ್ಟೋರೇಜ್ ಅಡಿ ಅರಣ್ಯೇತರ ಉದ್ದೇಶಗಳಿಗೆ ಅರಣ್ಯ ಪ್ರದೇಶ ಬಳಸಲು ಅನುಮತಿ ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ವಿನಂತಿಸಿದೆ. ಆದರೆ, ಈ ವಿಚಾರವನ್ನು ಮುಚ್ಚಿಟ್ಟಿದೆ’ ಎಂದರು.
‘ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಪರಿಸರ ಸಚಿವಾಲಯ ಸೇರಿ 13 ವಿವಿಧ ಇಲಾಖೆಗಳ ಅನುಮತಿ ಪಡೆಯಲಾಗಿದೆ ಎಂದು ಕೆಪಿಸಿಎಲ್ ಅಧಿಕಾರಿಗಳು ಹೇಳುತ್ತಾರೆ. ವಾಸ್ತವವಾಗಿ ಆ ಅನುಮತಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಮಾತ್ರವೇ ಹೊರತು ಯೋಜನೆಯ ಅನುಷ್ಠಾನಕ್ಕೆ ಅಲ್ಲ’ ಎಂದು ಹೇಳಿದರು.
ಪಂಪ್ಡ್ ಸ್ಟೋರೇಜ್ ಯೋಜನೆಗೆ ಯಾವುದೇ ಕೃಷಿ ಭೂಮಿ ಬಳಸಿಕೊಳ್ಳುವುದಿಲ್ಲ ಎಂದು ಕೆಪಿಸಿಎಲ್ ಅಧಿಕಾರಿಗಳು ಹೇಳುತ್ತಾರೆ. ಆದರೆ ಹೊನ್ನಾವರ ಭಾಗದಲ್ಲಿ ತಹಶೀಲ್ದಾರ್ ಮೂಲಕ 46 ರೈತರಿಗೆ ನೋಟಿಸ್ ನೀಡಿ ಭೂಸ್ವಾಧೀನದ ವಿಚಾರ ಪ್ರಸ್ತಾಪಿಸಿದ್ದಾರೆ. ಇದು ಕೆಪಿಸಿಎಲ್‌ನ ಇಬ್ಬಂದಿತನಕ್ಕೆ ಸಾಕ್ಷಿ ಎಂದು ದೂರಿದರು.
‘ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಭೂಮಿಯಡಿ 10 ಮೀಟರ್ ವ್ಯಾಸದ ಸುರಂಗ ನಿರ್ಮಾಣಕ್ಕೆ 18,000 ಟನ್ ಸ್ಫೋಟಕ ಬಳಸಲಾಗುತ್ತಿದೆ ಎಂದು ಪ್ರಸ್ತಾವಿತ ಯೋಜನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಮಾಧ್ಯಮ ಸಂವಾದದ ವೇಳೆ ಕೇವಲ 1,008 ಟನ್ ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ’ ಎಂದು ಹರಿಹಾಯ್ದರು.
‘ಸುರಂಗ ನಿರ್ಮಾಣದ ವೇಳೆ ಬಳಸುವ ಸ್ಫೋಟಕದಿಂದ ಉಂಟಾಗುವ 12 ದಶಲಕ್ಷ ಟನ್ ವಿಷಕಾರಿ ಪದಾರ್ಥವನ್ನು ನದಿಯ ಪಕ್ಕ ಶೇಖರಿಸಲಾಗುತ್ತದೆ. ಕ್ರಮೇಣ ಇದು ನದಿ ಮೂಲಕ ಸಮುದ್ರ ಸೇರುತ್ತದೆ. ಇದರಿಂದ ಉಂಟಾಗುವ ಮಾನವ ಹಾಗೂ ಪರಿಸರ ಹಾನಿಯ ಬಗ್ಗೆ ಅಧಿಕಾರಿಗಳು ಚಕಾರ ಎತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.
‘ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರಕ್ಕೆ ಧಕ್ಕೆ ತರುವ ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯೋಜನೆಯನ್ನು ತಕ್ಷಣ ಹಿಂಪಡೆಯದಿದ್ದರೆ ಶಿವಮೊಗ್ಗ ಮತ್ತು ಉತ್ತರ ಕನ್ನಡದ ಜನರು ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಅಜಯ್‌ಕುಮಾರ್ ಶರ್ಮಾ ಮಾತನಾಡಿ, ‘ಯೋಜನಾ ಪ್ರದೇಶದಲ್ಲಿ ಇತಿಹಾಸ ಪ್ರಸಿದ್ಧ ಚನ್ನಭೈರಾದೇವಿಯ ರಾಜಧಾನಿ ಪ್ರದೇಶವಿದೆ. ಅನೇಕ ಸ್ಮಾರಕಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ (ಎಎಸ್‌ಐ) ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿವೆ. ಈ ಸಂರಕ್ಷಿತ ಪ್ರದೇಶದೊಳಗೆ ಕೆಪಿಸಿಎಲ್ ಅಧಿಕಾರಿಗಳು ಯೋಜನೆಯ ಅನುಷ್ಠಾನಕ್ಕೆ ಗುರುತು ಮಾಡಿದರೂ ಎಎಸ್‌ಐ ಅಧಿಕಾರಿಗಳು ಅದನ್ನು ತಡೆಯದೇ ನಿದ್ದೆ ಹೊಡೆಯುತ್ತಿದ್ದಾರೆ’ ಎಂದು ಕುಟುಕಿದರು.
ಟ್ರೀ ಕೆನಾಪಿ ವಿಚಾರವೇ ಅವೈಜ್ಞಾನಿಕ: ಶ್ರೀಪತಿ ಧಾರವಾಡ ಐಐಟಿಯ ಪರಿಸರ ಸಲಹಾ ಮಂಡಳಿ ಸದಸ್ಯ ಎಲ್.ಕೆ. ಶ್ರೀಪತಿ ಮಾತನಾಡಿ ‘ಅಭಯಾರಣ್ಯದಲ್ಲಿ ಕಾಡು ಕಡಿದು ರಸ್ತೆ ಮಾಡುವ ಸ್ಥಳದಲ್ಲಿ ಸಿಂಗಳೀಕಗಳ ಮುಕ್ತ ಸಂಚಾರಕ್ಕೆ ಟ್ರೀ– ಕೆನಾಪಿ ನಿರ್ಮಿಸುವುದಾಗಿ ಕೆಪಿಸಿಎಲ್ ಅಧಿಕಾರಿಗಳು ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ. ಆದರೆ ಯಾವ ಪ್ರಾಣಿಗಳು ಈ ಟ್ರೀ– ಕೆನಾಪಿಯಲ್ಲಿ ಸಂಚರಿಸುತ್ತವೆ ಎಂಬುದನ್ನು ಕೆಪಿಸಿಎಲ್ ಅಧ್ಯಯನ ನಡೆಸಿದೆಯೇ ಎಂದು ಪ್ರಶ್ನಿಸಿದರು.
ಜಗತ್ತಿನ ಯಾವುದೇ ಸ್ಥಳದಲ್ಲಿ ಅಂತಹ ಟ್ರೀ ಕೆನಾಪಿ ಇಲ್ಲ. ಇದು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ’ ಎಂದು ಬೇಸರ ವ್ಯಕ್ತಪಡಿಸಿದರು. ‘ಈಗ ಇರುವ ವಿದ್ಯುತ್ ಪ್ರಸರಣ ಮಾರ್ಗದಲ್ಲಿಯೇ ಆಧುನಿಕ ತಂತ್ರಜ್ಞಾನ ಬಳಸಿ ಪಂಪ್ಡ್ ಸ್ಟೋರೇಜ್‌ನ ವಿದ್ಯುತ್ ಕೊಂಡೊಯ್ಯಲಾಗುವುದು ಎಂದು ಕೆಪಿಟಿಸಿಎಲ್ ಹೇಳುತ್ತಿದೆ. ಅದು ಕೂಡ ಸುಳ್ಳಿನ ಕಂತೆ. ವಾಸ್ತವವಾಗಿ ಈಗಿರುವ ಮಾರ್ಗದಲ್ಲಿಯೇ ಹೆಚ್ಚುವರಿ ವಿದ್ಯುತ್ ಸಾಗಿಸಬೇಕೆಂದರೆ ಸುರಕ್ಷತಾ ದೃಷ್ಟಿಯಿಂದ ಸಾಗಾಣಿಕೆ ಕಾರಿಡಾರನ್ನು ವಿಸ್ತರಿಸಲೇಬೇಕು. ಆದರೆ ಅದನ್ನು ಅಧಿಕಾರಿಗಳು ಮುಚ್ಚಿಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.