ಶಿವಮೊಗ್ಗ: ಈಗಾಗಲೇ ಹತ್ತು-ಹಲವು ಯೋಜನೆಗಳಿಂದ ಪಶ್ಚಿಮಘಟ್ಟ ಪ್ರದೇಶ ತತ್ತರಿಸಿ ಹೋಗಿದೆ. ಈ ಹೊತ್ತಿನಲ್ಲಿ ರಾಜ್ಯ ಸರ್ಕಾರದ ಪ್ರಸ್ತಾವಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪರಿಸರಕ್ಕೆ ಮಾರಕವಾಗಿದ್ದು, ಅದು ಬೇಡವೇ ಬೇಡ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಜಗದ್ಗುರು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಇಲ್ಲಿನ ಶೃಂಗೇರಿ ಶಂಕರಮಠದಲ್ಲಿ ಪರ್ಯಾವರಣ ಟ್ರಸ್ಟ್, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಮತ್ತು ನಿರ್ಮಲ ತುಂಗಾಭದ್ರಾ ಅಭಿಯಾನದ ಪದಾಧಿಕಾರಿಗಳೊಡನೆ ಗುರುವಾರ ಚಿಂತನಾ ಸಭೆ ನಡೆಸಿ ಮಾತನಾಡಿದರು.
ಸಾಧಕ–ಬಾಧಕಗಳ ಲೆಕ್ಕಾಚಾರವಿಲ್ಲದೇ ಈಗಾಗಲೇ ಸರ್ಕಾರ ಜಾರಿಗೊಳಿಸಿರುವ ಹಲವು ಯೋಜನೆಗಳು ಪಶ್ಚಿಮಘಟ್ಟಕ್ಕೆ ವಿನಾಶಕಾರಿಯಾಗಿ ಪರಿಣಮಿಸಿವೆ. ಭೂಕುಸಿತ, ಅರಣ್ಯನಾಶದಂತಹ ಅವಘಡ ನಿರಂತರವಾಗಿ ಜರುಗುತ್ತಿವೆ. ಈಗ ಮತ್ತೆ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ನೆಲದೊಳಗೆ ಸುರಂಗಮಾರ್ಗ ತೋಡುವುದರಿಂದ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು.
ವಿಶೇಷವಾಗಿ ಬೇಡ್ತಿ-ಅಘನಾಶಿನಿ, ಅಘನಾಶಿನಿ-ವೇದಾವತಿ ಯೋಜನೆಗಳಲ್ಲಿ ಈ ಲೆಕ್ಕಾಚಾರಗಳಿಲ್ಲದ ಯೋಚನೆಯನ್ನು ಕಾಣಬಹುದು. ಎತ್ತಿನಹೊಳೆ ಯೋಜನೆಯಲ್ಲಿ ಇಂತಹುದೇ ಲೆಕ್ಕಾಚಾರಗಳಿಲ್ಲದ ಕೆಲಸವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಆಹಾರ ಬೆಳೆ ಬೆಳೆಯುವ ಜಾಗದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಭವಿಷ್ಯದಲ್ಲಿ ಮನುಕುಲದ ಆಹಾರ ವ್ಯವಸ್ಥೆಗೆ ಇದರಿಂದ ಪೆಟ್ಟುಬೀಳುವ ಸಂಭವವಿದೆ. ಅಡಿಕೆ ಆಹಾರ ಬೆಳೆಯಲ್ಲ, ಅದಕ್ಕೆ ನೀರಿನ ಬಳಕೆ ಹೆಚ್ಚಿದೆ. ಇದರಿಂದ ಅಂತರ್ಜಲಮಟ್ಟ ಕುಸಿಯುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಸರ ಹೋರಾಟಗಾರ ಎಲ್.ಕೆ.ಶ್ರೀಪತಿ, ವಿಜ್ಞಾನಿಗಳ ಪ್ರಕಾರ ಶರಾವತಿ ಕಣಿವೆಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ ಪರಿಸರಕ್ಕೆ ಮಾರಕವಾಗಿದೆ. ಈಗಾಗಲೇ ಅದಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.
ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಕೇಳಿದರೆ ರಾಷ್ಟ್ರೀಯ ಹಿತಾಸಕ್ತಿಯ ನೆಪ ಹೇಳಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ನಿರಾಕರಣೆ ಮಾಡುತ್ತಿದೆ. ಕಾರ್ಯಸಾಧ್ಯತಾ ವರದಿಯಲ್ಲಿ ವಿದ್ಯುತ್ ಉತ್ಪಾದನೆಗೆ ತಗುಲುವ ವೆಚ್ಚದ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಆರ್ಥಿಕವಾಗಿಯೂ ಈ ಯೋಜನೆಯಿಂದ ಯಾವ ಪ್ರಯೋಜನ ಆಗುವುದಿಲ್ಲ ಎಂದು ವಿವರಿಸಿದರು.
ಜಗತ್ತಿನ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಶರಾವತಿ ಕೊಳ್ಳದಲ್ಲಿ ಅಳಿವಿನಂಚಿಗಿರುವ ಸಿಂಗಳೀಕ, ಮಂಗಟ್ಟೆ ಹಕ್ಕಿಗಳ ಆವಾಸಸ್ಥಾನ ಇದೆ. ಪಂಪ್ಡ್ ಸ್ಟೋರೇಜ್ ಜಾರಿಗೊಂಡರೆ ಅದು ಬರಿದಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿರ್ಮಲ ತುಂಗಾಭದ್ರಾ ಅಭಿಯಾನದ ಸಂಚಾಲಕ ಎಂ. ಶಂಕರ್, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ದಕ್ಷಿಣ ಭಾರತದ ಪ್ರಮುಖ ವಿ.ಪಿ. ಮಾಧವನ್, ಮಾಜಿ ಶಾಸಕ ಮಹಿಮಾ ಪಟೇಲ್, ಪರ್ಯಾವರಣ ಟ್ರಸ್ಟಿನ ಬಾಲಕೃಷ್ಣ ನಾಯ್ಡು, ಬಾಲಕೃಷ್ಣ ಹೆಗಡೆ, ವರದರಾಜ್, ದಿನೇಶ್‌ಕುಮಾರ್, ಲೋಕೇಶ್ವರಪ್ಪ, ಭಾಗೀರಥಿ ಬಾಯಿ, ಭಾರತೀಯ ಕೃಷಿಕ ಸಮಾಜದ ವಾಸುದೇವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.