ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ‘ಮಾಧವ ಗಾಡ್ಗೀಳ್ ಅವರ ಆತ್ಮಕಥೆ ಕನ್ನಡ ಅವತರಣಿಕೆ’ ಹಾಗೂ ‘ಪಶ್ಚಿಮಘಟ್ಟ ಅಧ್ಯಯನದ ವರದಿಗಳ ಸಂಕ್ಷಿಪ್ತ ಮಾಹಿತಿ’ ಪುಸ್ತಕಗಳನ್ನು ಗಣ್ಯರು ಬಿಡುಗಡೆಗೊಳಿಸಿದರು
ಶಿವಮೊಗ್ಗ: ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅವಸರದಲ್ಲಿ ಅನುಮೋದನೆ ನೀಡಿದರೆ ಅದು ಸರ್ಕಾರದ ಸಾಂವಿಧಾನಿಕ, ಕಾನೂನು ಮತ್ತು ನೈತಿಕ ಕರ್ತವ್ಯದ ಉಲ್ಲಂಘನೆಯಾಗುತ್ತದೆ’ ಎಂದು ಪರಿಸರ ತಜ್ಞಶಂಕರ ಶರ್ಮಹೇಳಿದರು.
ಶಿವಮೊಗ್ಗ ಮತ್ತು ಉತ್ತರ ಕನ್ನಡದ ಶರಾವತಿ ಪಂಪ್ಡ್ ಸ್ಟೋರೇಜ್ ಹೋರಾಟ ಸಮಿತಿ, ಪರ್ಯಾವರಣ ಟ್ರಸ್ಟ್, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮತ್ತು ಪರಿಸರಾಸಕ್ತರ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಜನಾಗ್ರಹ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
‘ಪಶ್ಚಿಮಘಟ್ಟದ ಹೃದಯಭಾಗದಲ್ಲಿ ಪ್ರಸ್ತಾವಿತ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಅದು ಶ್ರೀಮಂತ ಜೀವವೈವಿಧ್ಯದ ತಾಣವಾಗಿರುವುದರಿಂದ ಅಲ್ಲಿನ ಪರಿಸರದ ಸಮಗ್ರತೆಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಮಹತ್ತರ ಜವಾಬ್ದಾರಿಯಾಗಿದೆ. ₹10,300 ಕೋಟಿ ಹೂಡಿಕೆ ಮಾಡಿ 400 ಎಕರೆ ಸ್ವಾಭಾವಿಕ ಅರಣ್ಯ ಭೂಮಿ ನಾಶಪಡಿಸಲು ಮುಂದಾಗಿರುವ ಈ ಆಘಾತಕಾರಿ ನಿರ್ಧಾರವನ್ನು ಪ್ರಶ್ನಿಸಲೇಬೇಕಿದೆ’ ಎಂದರು.
‘ಗ್ರೀನ್ ಕ್ರಿಮಿನಾಲಜಿ ಎಂಬುದು ಜಾಗತಿಕ ಮಟ್ಟದಲ್ಲಿ ಚಾಲ್ತಿಗೆ ಬಂದಿದೆ. ಚುನಾಯಿತ ಸರ್ಕಾರಗಳೇ ಪರಿಸರ-ಅರಣ್ಯ ಜೀವ ವೈವಿಧ್ಯ ಕಾಯ್ದೆಗಳ ತೀವ್ರ ಉಲ್ಲಂಘನೆಗೆ ಮುಂದಾಗುತ್ತಿವೆ. ಇದನ್ನು ನ್ಯಾಯಾಲಯಗಳೇ ತಪ್ಪಿಸಬೇಕಿದೆ’ ಎಂದು ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
‘ಯೋಜನೆಯಿಂದ ಬರೀ ನೂರು ಅಲ್ಲ ಸಾವಿರ ಎಕರೆ ಅರಣ್ಯ ನಾಶವಾಗಲಿದೆ. ಶರಾವತಿ ಕಣಿವೆಯನ್ನು ನಾಶ ಮಾಡುವ ಈ ಭೂಗತ ಯೋಜನೆಯ ಅನುಷ್ಠಾನವನ್ನು ಕೆಪಿಸಿ ಕೈಬಿಡಬೇಕು. ಜನಪ್ರತಿನಿಧಿಗಳು ಶಾಸನ ಸಭೆಗಳಲ್ಲಿ ಈ ಯೋಜನೆಯನ್ನು ವಿರೋಧಿಸಬೇಕು’ ಎಂದು ಒತ್ತಾಯಿಸಿದರು.
‘ತುಂಗಭದ್ರಾ ನದಿ ಉಳಿಸಲು, ಶರಾವತಿ ನದಿ ಉಳಿವಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಪರಿಸರ, ನದಿ, ಅರಣ್ಯ ರಕ್ಷಣೆಯ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದರೆ ಪರಿಸರ ನಾಶ ಆಗುವುದಿಲ್ಲ. ರಾಜ್ಯದಲ್ಲಿ ಕೆಲವೇ ಗ್ರಾಮ ಪಂಚಾಯಿತಿಗಳು ಪರಿಸರ ರಕ್ಷಣೆಗೆ ಒತ್ತು ನೀಡುತ್ತಿವೆ’ ಎಂದು ಗಂಗಾವತಿ ಶ್ರೀ ರಂಗದೇವರಾಯಲು ಆನೆಗುಂದಿ ಆಸ್ಥಾನದ ಲಲಿತಾರಾಣಿ ತಿಳಿಸಿದರು.
ಲೇಖಕಿ ಶಾರದಾ ಗೋಪಾಲ ಮತ್ತು ನಾಗೇಶ್ ಹೆಗಡೆ ಕನ್ನಡಕ್ಕೆ ಅನುವಾದಿಸಿರುವ ಮಾಧವ ಗಾಡ್ಗೀಳ್ ಅವರ ಆತ್ಮಕತೆಯ ಕನ್ನಡ ಅವತರಣಿಕೆ ಹಾಗೂ ಎಲ್.ಕೆ.ಶ್ರೀಪತಿ ಬರೆದಿರುವ ಪಶ್ಚಿಮಘಟ್ಟ ಅಧ್ಯಯನ ವರದಿಗಳ ಸಂಕ್ಷಿಪ್ತ ಮಾಹಿತಿ ಪುಸ್ತಕವನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ.ಕುಮಾರಸ್ವಾಮಿ, ನೀರಾವರಿ ತಜ್ಞ ಯೋಗೇಂದ್ರ, ರಂಗಕರ್ಮಿ ಕಾಂತೇಶ ಕದರಮಂಡಲಗಿ, ತ್ಯಾಗರಾಜ ಮಿಥ್ಯಾಂತ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಪ್ರಕಾಶ ಕೋಳಿವಾಡ, ಡಿ.ಎಸ್.ಅರುಣ್, ಮಾಜಿ ಶಾಸಕ ಮಹಿಮಾ ಪಟೇಲ್ ಪಾಲ್ಗೊಂಡಿದ್ದರು.
ಈ ಯೋಜನೆಯನ್ನು ವಿರೋಧಿಸಲು, ಅದರಿಂದ ಆಗುವ ಅನಾಹುತಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು. ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್ ನಿರ್ಣಯ ಮಂಡಿಸಿದರು.
ಯೋಜನೆಯು ಶರಾವತಿ ವನ್ಯಧಾಮದ ಗಣನೀಯ ಭಾಗವನ್ನು ನಾಶಪಡಿಸಿ, ಅಳಿವಿನಂಚಿನಲ್ಲಿರುವ ಸಿಂಹಬಾಲದ ಸಿಂಗಳೀಕಗಳ ನೆಲೆಯನ್ನು ನುಂಗಿ ಹಾಕಲಿದೆ. ಶರಾವತಿ ಕೊಳ್ಳದಲ್ಲಿ ಈಗಾಗಲೇ 18 ಸಾವಿರ ಎಕರೆ ನೈಸರ್ಗಿಕ ಅರಣ್ಯವನ್ನು ಕರ್ನಾಟಕ ವಿದ್ಯುತ್ ನಿಗಮ ನಾಶ ಮಾಡಿದೆ. ಈಗ ಅಳಿದುಳಿದ ಅರಣ್ಯಭೂಮಿಯನ್ನು ನಾಶಪಡಿಸಲು ಮುಂದಾಗುತ್ತಿರುವುದನ್ನು ವಿರೋಧಿಸುವ ನಿರ್ಣಯವನ್ನೂ ಸಭೆ ಕೈಗೊಂಡಿತು.
ಪರಿಸರ ನಾಶ ಹಾಗೂ ಆರ್ಥಿಕವಾಗಿಯೂ ನಷ್ಟದಾಯಕ ಆಗಿರುವ ಈ ಯೋಜನೆಯ ಬದಲು ಸ್ಮಾರ್ಟ್ ಗ್ರಿಡ್‌ನಂತಹ ಆಧುನಿಕ ಕ್ರಮ ಕೈಗೊಳ್ಳಲು ಸಭೆ ಆಗ್ರಹಿಸಿತು. ಈ ಬಗ್ಗೆ ಮೊದಲ ಹಂತದಲ್ಲಿ ಪೋಸ್ಟ್ ಕಾರ್ಡ್ ಚಳವಳಿ ಮೂಲಕ ಸರ್ಕಾರಕ್ಕೆ ಮನದಟ್ಟು ಮಾಡಲು, ನಂತರ ನಿಯೋಗ ತೆರಳಿ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ನಿರ್ಧರಿಸಿತು.
‘ಶರಾವತಿ ಪಂಪ್ಡ್ ಸ್ಟೋರೇಜ್ ನಿರುಪಯುಕ್ತ ಯೋಜನೆ. 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 2,500 ಮೆಗಾವ್ಯಾಟ್ ಖರ್ಚಾಗುತ್ತದೆ. ಅದು ಬೇಡ ಎಂಬುದಕ್ಕೆ ಹಲವು ಕಾರಣವಿದೆ. ಚರ್ಚೆಗೆ ಬನ್ನಿ, ನಮ್ಮ ನಾಲ್ಕೈದು ಪ್ರಶ್ನೆಗಳಿಗೆ ಉತ್ತರಿಸಿ ಎಂದರೂ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ಅಧಿಕಾರಿಗಳು ಮುಂದೆ ಬರುತ್ತಿಲ್ಲ’ ಎಂದು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ದೂರಿದರು.
‘ಚೀನಾದಲ್ಲಿ ಚಂದ್ರನ ಬೆಳಕಲ್ಲಿ ವಿದ್ಯುತ್ ಉತ್ಪಾದಿಸುವ ಪ್ರಯತ್ನ ನಡೆಯುತ್ತಿದೆ. ನಾವು ಇನ್ನೂ ಜಲವಿದ್ಯುತ್ ನಂಬಿಕೊಂಡು ಅರಣ್ಯ ಹಾಳು ಮಾಡುತ್ತಿದ್ದೇವೆ. ಹೋಗಲಿ ನಾವು ಬದುಕುವುದಕ್ಕೆ ಎಷ್ಟು ವಿದ್ಯುತ್ ಬೇಕು ಎಂಬ ಪರಿಕಲ್ಪನೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ’ ಎಂದರು.
‘ಪಂಪ್ಡ್ ಸ್ಟೋರೇಜ್ ಯೋಜನೆಯಿಂದಾಗಿ ಸಾವಿರಾರು ಮರಗಳ ಕಡಿತಲೆಯಾಗಲಿದೆ. ಯೋಜನೆಗೆ ಕೇಂದ್ರದ ಅನುಮತಿ ದೊರೆತಿದೆ ಎಂದು ಹೇಳಲಾಗುತ್ತಿದೆ. ಆದರೆ ಅರಣ್ಯ ಕ್ಲಿಯರೆನ್ಸ್ ಇನ್ನೂ ಸಿಕ್ಕಿಲ್ಲ. ಅನುಮತಿಗೂ ಮೊದಲೇ ಕಂಪನಿಯೊಂದಕ್ಕೆ ಟೆಂಡರ್ ಕೊಡಲು ಮಾತುಕತೆ ನಡೆದಿದೆ. 2017ರಲ್ಲಿ ಈ ಯೋಜನೆಗೆ ₹4 ಸಾವಿರ ಕೋಟಿ ನಿಗದಿಗೊಳಿಸಲಾಗಿತ್ತು. 2020ರಲ್ಲಿ ಅದು ₹5 ಸಾವಿರ ಕೋಟಿ ಆಗಿತ್ತು. 2024ರಲ್ಲಿ ₹8,000 ಕೋಟಿ ಎನ್ನಲಾಯಿತು. ಈಗ ₹10,200 ಕೋಟಿ ಎಂದು ಹೇಳಲಾಗುತ್ತಿದೆ. ಯೋಜನೆ ಮುಗಿಯಲು ಕನಿಷ್ಠ ಐದು ವರ್ಷ ಬೇಕು. ಅಷ್ಟೊತ್ತಿಗೆ ವೆಚ್ಚ ಇನ್ನೆಷ್ಟು ಹೆಚ್ಚಲಿದೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.