ADVERTISEMENT

ಶಿಕಾರಿಪುರ: ಹುಚ್ಚುರಾಯಸ್ವಾಮಿ ರಥೋತ್ಸವ 

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:59 IST
Last Updated 12 ಏಪ್ರಿಲ್ 2025, 15:59 IST
ಶಿಕಾರಿಪುರದಲ್ಲಿ ಹುಚ್ಚುರಾಯಸ್ವಾಮಿ ರಥೋತ್ಸವ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿರುವುದು
ಶಿಕಾರಿಪುರದಲ್ಲಿ ಹುಚ್ಚುರಾಯಸ್ವಾಮಿ ರಥೋತ್ಸವ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿರುವುದು   

ಶಿಕಾರಿಪುರ: ಕ್ಷೇತ್ರ ದೇವತೆ ಹುಚ್ಚುರಾಯಸ್ವಾಮಿ ಜಾತ್ರಾ ಮಹೋತ್ಸವ ದವನದ ಹುಣ್ಣಿಮೆಯಾದ ಶನಿವಾರ ಸಾವಿರಾರು ಭಕ್ತರ ಜಯಘೋಷ, ಹಷೋದ್ಗಾರದೊಂದಿಗೆ ಶನಿವಾರ ನೆರವೇರಿತು.

ಪ್ರಾತಃಕಾಲ ಗಣಪತಿ ಪೂಜೆ, ಅಷ್ಟ ದಿಕ್ಪಾಲಕರಿಗೆ ಮಹಾಬಲಿ, ಮಂತ್ರ ಘೋಷಗಳೊಂದಿಗೆ ಬ್ರಹ್ಮ ರಥೋತ್ಸವ ಆರಂಭಗೊಂಡಿತು. 8.30ರ ವೃಷಭ ಲಗ್ನದಲ್ಲಿ ಶ್ರೀಸ್ವಾಮಿ ರಥಾರೋಹಣ, ಫಲ ಸಮರ್ಪಣೆ, ಮಹಾಮಂಗಳಾರತಿ ನಂತರ ವಾದ್ಯಗೋಷ್ಠಿಗಳ ನಡುವೆ ರಥಬೀದಿಯಲ್ಲಿ ತೇರು ಸಂಚರಿಸಲು ಆರಂಭಿಸಿತು. ಭಕ್ತರು ಬಾಳೆಹಣ್ಣು, ದವನ ಸೊಪ್ಪನ್ನು ತೇರಿಗೆ ಎಸೆದರು. ಮಾರಿಕಾಂಬ ಗದ್ದುಗೆ ಬಳಿ ನೆಲೆ ನಿಂತ ನಂತರ ಭಕ್ತರಿಗೆ ಹಣ್ಣು ಕಾಯಿ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಯಿತು.

ತೇರು ಎಳೆಯುವ ಮುನ್ನ ಆಗಸದಲ್ಲಿ ಗರುಡ ಆಗಮಿಸಿ ದೇವಸ್ಥಾನದ ಮೇಲೆ ಮೂರು ಸುತ್ತು ಪ್ರದಕ್ಷಿಣೆ ಹಾಕುವ ವಿದ್ಯಮಾನ ಪ್ರತಿವರ್ಷ ನಡೆಯುತ್ತದೆ. ಈ ವರ್ಷವೂ ಗರುಡ ಪ್ರದಕ್ಷಿಣೆ ಸಮಯದಲ್ಲಿ ಭಕ್ತರು ಹರ್ಷೋದ್ಗಾರ ಮಾಡಿದರು. ಸಾಗರ, ಸೊರಬ, ಆನವಟ್ಟಿ, ತೀರ್ಥಹಳ್ಳಿ ಭಾಗದ ಸಾವಿರಾರು ಭಕ್ತರಿಗೆ ಮನೆದೇವರಾಗಿದ್ದು ಅವರೆಲ್ಲರೂ ಆಗಮಿಸಿ ಶಂಖ, ಜಾಗಟೆ, ಗೋಪಾಲಭವಸಿ ಇಟ್ಟು, ಸಿಹಿ ಅಡುಗೆ ನೈವೇದ್ಯ ಇರಿಸಿ ದಾಸಯ್ಯನ ಕರೆಯಿಸಿ ಸಂಪ್ರದಾಯಿಕ ಪೂಜೆ ಸಲ್ಲಿಸಿದರು.

ADVERTISEMENT

ಪುರಸಭೆ ವತಿಯಿಂದ ತರಳಬಾಳು ಸಮುದಾಯ ಭವನದಲ್ಲಿ ಶುಕ್ರವಾರ ರಾತ್ರಿ, ಶನಿವಾರ ಬೆಳಿಗ್ಗೆ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ದೇವಸ್ಥಾನ ಪಕ್ಕದ ಭ್ರಾಂತೇಶ ಸಮುದಾಯ ಭವನದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರು ಮಜ್ಜಿಗೆ, ಪಾನಕ ವಿತರಿಸಿ ಭಕ್ತ ಸಮರ್ಪಿಸಿದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪುರಸಭೆ ಅಧ್ಯಕ್ಷೆ ಸುನಂದ, ಮುಖಂಡರುಗಳಾದ ನಾಗರಾಜಗೌಡ, ಗೋಣಿ ಮಾಲತೇಶ್, ತಹಸೀಲ್ದಾರ್ ಮಲ್ಲೇಶ ಬೀರಪ್ಪ ಪೂಜಾರ್ ಕುಟುಂಬ ಸಮೇತ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.