ಶಿಕಾರಿಪುರ: ತಾಲ್ಲೂಕಿನ ಕುಟ್ರಳ್ಳಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ವಾಹನ ಟೋಲ್ ಸಂಗ್ರಹ ಕೇಂದ್ರ ತೆರವಿಗೆ ಒತ್ತಾಯಿಸಿ ಗುರುವಾರ ನಡೆದ ಶಿಕಾರಿಪುರ ಬಂದ್‌ಗೆ ಜನರು ಸಂಪೂರ್ಣ ಬೆಂಬಲ ನೀಡಿದರು.
ಬೆಳಿಗ್ಗೆಯಿಂದಲೇ ಯಾವುದೇ ಬಸ್ ಸಂಚಾರ ಆರಂಭಗೊಳ್ಳಲಿಲ್ಲ. ಎಲ್ಲ ಅಂಗಡಿ, ಹೋಟೆಲ್ ಸಂಜೆವರೆಗೂ ಮುಚ್ಚಿದ್ದವು, ಟ್ಯಾಕ್ಸಿ ಚಾಲಕ– ಮಾಲೀಕರು, ಖಾಸಗಿ ಬಸ್ ಸಿಬ್ಬಂದಿ ಬಸ್ ನಿಲ್ದಾಣ ವೃತ್ತದಲ್ಲಿ ಮೆರವಣಿಗೆ ನಡೆಸಿ ಟೋಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಕೀಲರು ಬೈಕ್ ರ‍್ಯಾಲಿ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಟೋಲ್ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು ಕ್ಷೇತ್ರ ದೇವತೆ ಹುಚ್ಚುರಾಯಸ್ವಾಮಿ ದೇವಸ್ಥಾನದಲ್ಲಿ ಹೋರಾಟದ ಯಶಸ್ಸಿಗೆ ಪೂಜೆ ಸಲ್ಲಿಸಿದರಲ್ಲದೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ತಮಟೆ ವಾದ್ಯ ಹೋರಾಟದಲ್ಲಿ ಗಮನ ಸೆಳೆಯಿತು.
ತಹಶೀಲ್ದಾರ್ ಕಚೇರಿ ಎದುರು ನಡೆದ ಸಭೆಯಲ್ಲಿ ಹೋರಾಟ ಸಮಿತಿ ಸಂಚಾಲಕ ವಿನಯ್ ಪಾಟೀಲ್ ಮಾತನಾಡಿ, ‘ಕುಟ್ರಳ್ಳಿ ಟೋಲ್ ಮುಚ್ಚುವುದಕ್ಕೆ ಜನತೆ ವರ್ಷದಿಂದ ಹೋರಾಟ ನಡೆಸಿದ್ದಾರೆ. ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಆದರೂ ಟೋಲ್ ಮುಚ್ಚದಿದ್ದರೆ ಜನತೆ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿಗಳಿಗೆ ಘೇರಾವ್ ಹಾಕಬೇಕು’ ಎಂದು ಕರೆ ನೀಡಿದರು.
‘ರಾಯಚೂರು ಶಾಸಕಿ ಅಲ್ಲಿನ ಟೋಲ್ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನದಲ್ಲಿ ಜಿಲ್ಲಾಧಿಕಾರಿ ಟೋಲ್ ತೆರವು ಮಾಡಿದ್ದಾರೆ. ಆದರೆ, ಇಲ್ಲಿನ ಟೋಲ್ ಜನರೇ ಮುಚ್ಚಿಸುವ ಸ್ಥಿತಿ ಬರುವಂತೆ ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡಿದ್ದಾರೆ’ ಎಂದು ನೇರವಾಗಿ ಆರೋಪಿಸಿದರು.
ಟೋಲ್ ಹೋರಾಟ ಸಮಿತಿ ಅಧ್ಯಕ್ಷ ಶಿವರಾಜ್ ಮಾತನಾಡಿ, ‘ಕುಟ್ರಳ್ಳಿ ಟೋಲ್ ಅಕ್ರಮ, ಅದು ತೆರವಾಗಬೇಕು. ರೈತರು, ಜನಸಾಮಾನ್ಯರು ಹೈರಾಣಾಗಿದ್ದಾರೆ. ಕೂಡಲೆ ಟೋಲ್ ಬಂದ್ ಆಗದಿದ್ದರೆ ಟೋಲ್ ಎದುರು ಅವಿರತ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಮುಖಂಡರುರಾದ ಪದ್ಮನಾಭ ಭಟ್, ಬಸ್ ಮಾಲೀಕರ ಸಂಘದ ಚಂದ್ರಕಾಂತ ರೇವಣಕರ್, ರೈತ ಸಂಘದ ಪ್ಯಾಟಿ ಈರಪ್ಪ, ನವೀದ್ ಶಿರಾಳಕೊಪ್ಪ, ಕನ್ನಡಪರ ಸಂಘಟನೆ, ಗೂಡ್ಸ್, ಪ್ರವಾಸಿ ವಾಹನ, ಬಸ್ ಮಾಲೀಕರು ಮಾತನಾಡಿದರು. ತಹಶೀಲ್ದಾರ್ ಮಂಜುಳಾ ಭಜಂತ್ರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಟೋಲ್ ನೀಡದೆ ಸಂಚರಿಸಿದ ವಾಹನಗಳು ಟೋಲ್ ವಿರೋಧಿ ಹೋರಾಟ ಸಮಿತಿ ಗುರುವಾರ ಶಿಕಾರಿಪುರ ಬಂದ್ ಕರೆ ನೀಡಿದ್ದ ಹಿನ್ನಲೆಯಲ್ಲಿ ಕುಟ್ರಳ್ಳಿ ಬಳಿಯ ಟೋಲ್ ಸಂಗ್ರಹ ಕೇಂದ್ರ ಸಂಜೆವರೆಗೂ ಮುಚ್ಚಲಾಗಿತ್ತು. ಎಲ್ಲ ವಾಹನಗಳು ಟೋಲ್ ಕಟ್ಟದೆ ಸಂಚರಿಸಿದವು. ಪ್ರತಿಭಟನಕಾರರು ಟೋಲ್ ಕೇಂದ್ರಕ್ಕೆ ಹಾನಿ ಉಂಟು ಮಾಡಬಾರದು ಎನ್ನುವ ಮುನ್ನೆಚ್ಚರಿಕೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.