ಶಿಕಾರಿಪುರ: ‘ಪಟ್ಟಣದಲ್ಲಿ ಬೀದಿನಾಯಿ, ಹಂದಿ ಹಾವಳಿ ತಡೆಯಲು ಪುರಸಭೆಯಿಂದ ₹ 4.65 ಲಕ್ಷ ವ್ಯಯಿಸಿದರೂ ಸಮಸ್ಯೆ ಪರಿಹಾರ ಆಗಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ಪುರಸಭೆ ಬಹುತೇಕ ಸದಸ್ಯರು ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಗುರುವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ವ್ಯವಸ್ಥಾಪಕ ರಾಜ್‌ಕುಮರ್ ಖರ್ಚು ವೆಚ್ಚದ ವಿವರ ಓದುವಾಗ ಬೀದಿನಾಯಿ, ಹಂದಿ ಹಿಡಿಯುವುದಕ್ಕೆ ಹಣ ವ್ಯಯಿಸಿರುವ ವಿಷಯ ಪ್ರಸ್ತಾಪ ಆಗುತ್ತಿದ್ದಂತೆ, ‘ಸಮಸ್ಯೆ ಪರಿಹಾರ ಆಗಿಲ್ಲ. ಆದರೂ ಇಷ್ಟೊಂದು ಹಣ ವ್ಯಯಿಸಲಾಗಿದೆ’ ಎಂದು ಉಳ್ಳಿ ದರ್ಶನ್ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಸದಸ್ಯರು ಸಹಮತ ವ್ಯಕ್ತಪಡಿಸಿದರು.
‘ಹಿಡಿದಿರುವ 55 ಬೀದಿ ನಾಯಿಗಳಿಗೆ ವಂಶಾಭಿವೃದ್ಧಿ ಆಗದಂತೆ ಪಶುಸಂಗೋಪನೆ ಇಲಾಖೆ ಆಪರೇಷನ್ ಮಾಡಿದೆ. ಪ್ರತಿ ತಿಂಗಳು ಎರಡನೇ ಶನಿವಾರ ಬೀದಿನಾಯಿ ಹಿಡಿಯುವ ಕೆಲಸ ಗುತ್ತಿಗೆ ಹಿಡಿದ ಸಂಸ್ಥೆ ಮಾಡುತ್ತಿದೆ’ ಎಂದು ರಾಜ್‌ಕುಮಾರ್ ಮಾಹಿತಿ ನೀಡಿದರು.
ಸದಸ್ಯ ರೋಷನ್ ಮಾತನಾಡಿ, ‘ಶಿರಾಳಕೊಪ್ಪ ವೃತ್ತದ ಐಟಿಐ ಕಾಲೇಜಿಗೆ ಹೋಗುವುದಕ್ಕೆ ರಸ್ತೆಗಾಗಿ ಬಿ.ಎಸ್.ಯಡಿಯೂರಪ್ಪ ಮನವಿ ಮೇರೆಗೆ ಅಲ್ಲಿನ ನಿವಾಸಿಗಳು ಮನೆ ತೆರವುಗೊಳಿಸಿದ್ದರು. ಅವರಿಗೆ ಈವರೆಗೂ ಬದಲಿ ನಿವೇಶನ ನೀಡಲಾಗಿಲ್ಲ. ಅದನ್ನು ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ತಾವಾದರೂ ಸಮಸ್ಯೆ ಪರಿಹಾರ ಮಾಡಬೇಕು’ ಎಂದು ಸಭೆಯಲ್ಲಿ ಹಾಜರಿದ್ದ ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಹೇಳಿದರು. ‘ಸಮಸ್ಯೆ ಪರಿಹಾರಕ್ಕೆ ಸೂಕ್ತಕ್ರಮ ಕೈಗೊಳ್ಳುತ್ತೇನೆ’ ಎಂದು ಶಾಸಕರು ಭರವಸೆ ನೀಡಿದರು.
‘ಪುರಸಭೆಯಲ್ಲಿ ಕಾಯಂ ಸಿಬ್ಬಂದಿಗಿಂತ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರೇ ಹೆಚ್ಚಿದ್ದು, ಕೂಡಲೇ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯ ದರ್ಶನ್ ಉಳ್ಳಿ ಒತ್ತಾಯಿಸಿದರು.
‘ಪಟ್ಟಣದಲ್ಲಿ ವಾಣಿಜ್ಯ ಮಳಿಗೆ ಹಲವು ಖಾಲಿಯಿದ್ದು, ಅವುಗಳ ಹರಾಜು ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯ ಸುರೇಶ್ ಧಾರವಾಡ ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ಸುನಂದ ಮಂಜುನಾಥ್ ಬಾಳೇಕಾಯಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗುಂಡ, ಸದಸ್ಯರಾದ ಪ್ರಕಾಶ್ ಗೋಣಿ, ಶೈಲಾ, ರೇಖಾಬಾಯಿ, ಲಕ್ಷ್ಮಿ, ರೂಪಕಲಾ, ಜಯಶ್ರೀ, ಶ್ವೇತಾ, ಕಮಲಮ್ಮ, ರಾಘವೇಂದ್ರ, ಪ್ರಶಾಂತ್ ಜೀನಳ್ಳಿ, ಸಾಧಿಕ್‌ಪಾಷಾ, ರೇಣುಕಯ್ಯ, ಮುಖ್ಯಾಧಿಕಾರಿ ಭರತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.