ADVERTISEMENT

ಸಹಜ ಸ್ಥಿತಿಯತ್ತ ಶಿವಮೊಗ್ಗ ನಗರ- ನಿಷೇಧಾಜ್ಞೆ ತೆರವುಗೊಳಿಸುವ ಬಗ್ಗೆ ನಿರ್ಧಾರ

ಶಾಲೆ–ಕಾಲೇಜುಗಳು ಪುನರಾರಂಭ l ನಿಷೇಧಾಜ್ಞೆ ತೆರವುಗೊಳಿಸುವ ಬಗ್ಗೆ ಇಂದು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 6:23 IST
Last Updated 18 ಆಗಸ್ಟ್ 2022, 6:23 IST
ಶಿವಮೊಗ್ಗ ನಗರದಲ್ಲಿ ಸಂಜೆಯ ನಂತರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ನಗರದಲ್ಲಿ ಸಂಜೆಯ ನಂತರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಲಾಯಿತು.   

ಶಿವಮೊಗ್ಗ: ಫ್ಲೆಕ್ಸ್ ವಿವಾದದ ಕಾರಣ ಎರಡು ದಿನ ಗೌಜು–ಗದ್ದಲಗಳಿಂದ ಬೆಂದಿದ್ದ ಶಿವಮೊಗ್ಗ ನಗರ ಬುಧವಾರ ಸಹಜ ಸ್ಥಿತಿಗೆ ಮರಳಿತು. ಶಾಲಾ–ಕಾಲೇಜುಗಳು ಆರಂಭವಾಗಿದ್ದು, ಮಾರುಕಟ್ಟೆ, ಅಂಗಡಿಗಳು ಬಾಗಿಲು ತೆಗೆದವು. ಇದರಿಂದ ನಗರ ಮತ್ತೆ ಜೀವ ಪಡೆಯಿತು.

ಬಸ್, ಆಟೊಗಳು ಎಂದಿನಂತೆ ಸಂಚರಿಸಿದವು. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿ ನಿಷೇಧ ಮುಂದುವರಿದಿತ್ತು. ಮದ್ಯ ಮಾರಾಟ ನಿಷೇಧ ತೆರವುಗೊಂಡಿತ್ತು.

ಮುಂಜಾಗರೂಕತಾ ಕ್ರಮವಾಗಿ ನಗರದಾದ್ಯಂತ ಬಿಗಿ ಭದ್ರತೆ ಮಾಡಲಾಗಿದೆ. ಅಮಿರ್ ಅಹಮದ್ ವೃತ್ತ ಹಾಗೂ ಶಿವಪ್ಪ ನಾಯಕ ಪ್ರತಿಮೆ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇಲ್ಲಿಯೇ ವಾಸ್ತವ್ಯ ಹೂಡಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ನಗರದ ಸೂಕ್ಷ್ಮಪ್ರದೇಶಗಳಲ್ಲಿ ಸಂಚರಿಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದರು.

ADVERTISEMENT

ಗಲಾಟೆ ಹಿನ್ನೆಲೆಯಲ್ಲಿ ಶಿವಮೊಗ್ಗ, ಭದ್ರಾವತಿ ನಗರಗಳ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ವಿಧಿಸಿರುವ ನಿಷೇಧಾಜ್ಞೆ ಗುರುವಾರ ರಾತ್ರಿಗೆ ಮುಕ್ತಾಯವಾಗಲಿದೆ.

ಪ್ರಾಮಾಣಿಕ ಕೆಲಸ: ‘ಪ್ರೇಮ್‌ಸಿಂಗ್‌ಗೆ ಚೂರಿಯಿಂದ ಇರಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ’ ಎಂದು ಅಲೋಕ್‌ಕುಮಾರ್ ಅವರು ಮುಖ್ಯ ಆರೋಪಿ ಜಬೀ ಪತ್ನಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯ ಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಂಜೆ ವ್ಯಾಪಾರ ನಿರ್ಬಂಧ: ನಿಷೇಧಾಜ್ಞೆ ಇರುವ ಕಾರಣ ಸಂಜೆ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿದರು. ಇದರಿಂದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರು, ತಿಂಡಿ–ತಿನಿಸಿನ ಅಂಗಡಿಯವರು ಸಂಕಷ್ಟಕ್ಕೆ ಒಳಗಾದರು. ‘ಈಗ ಶ್ರಾವಣ ಮಾಸ. ಹಬ್ಬಗಳ ಸಮಯ. ಈಗ ಬಾಗಿಲು ಹಾಕಿಸಿದರೆ ಏನು ಮಾಡುವುದು’ ಎಂದು ಅಳಲು ತೋಡಿಕೊಂಡರು.

***

ಬ್ರ್ಯಾಂಡ್ ಶಿವಮೊಗ್ಗಕ್ಕೆ ಪೆಟ್ಟು: ಬೇಸರ

ಶಿವಮೊಗ್ಗ ನಗರದಲ್ಲಿ ಪದೇ ಪದೇ ಕೋಮು ಗಲಭೆ ಮರುಕಳಿಸುತ್ತಿರುವುದರಿಂದ ವ್ಯಾಪಾರ–ವಹಿವಾಟಿನ ಮೇಲೆ ಪರಿಣಾಮ ಬೀರುತ್ತಿದೆ. ಅಂದೇ ದುಡಿದು ಅಂದೇ ಊಟ ಮಾಡುವ ಜನರು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ ಎಂಬ ಅಳಲು ವರ್ತಕರ ಸಮೂಹದಿಂದ ಕೇಳಿಬರುತ್ತಿದೆ.

ಗಾಂಧಿ ಬಜಾರ್‌ ಶಿವಮೊಗ್ಗದ ಆರ್ಥಿಕ ಜೀವನಾಡಿ. ಇಲ್ಲಿ 500ಕ್ಕೂ ಹೆಚ್ಚು ಅಂಗಡಿಗಳಿವೆ. ದಿನಸಿ, ಬಟ್ಟೆ, ಪೂಜಾ ಸಾಮಗ್ರಿ, ತರಕಾರಿ–ಹಣ್ಣು, ಆಭರಣದ ಅಂಗಡಿಗಳು ಹೆಚ್ಚಿದ್ದು, ಹೆಚ್ಚಿನ ಸಂಖ್ಯೆಯ ನಿಷೇಧಾಜ್ಞೆಯ ಕಾರಣ ಎರಡು ದಿನ ಶೂನ್ಯ ವಹಿವಾಟು ದಾಖಲಿಸಿದೆ. ಹೆಚ್ಚಿನ ಡೀಲರ್‌ಶಿಪ್ ಕಚೇರಿಗಳು, ಡಿಸ್ಟ್ರಿಬ್ಯೂಷನ್ ನೆಟ್‌ವರ್ಕ್ ಇಲ್ಲಿಂದಲೇ ನಿರ್ವಹಣೆಯಾಗುತ್ತದೆ. ನಿತ್ಯ ಕೋಟ್ಯಂತರ ರೂಪಾಯಿ ವಹಿವಾಟಿಗೆ ಇದು ನೆಲೆಯಾಗಿದೆ. ಆದರೆ ಗಾಂಧಿ ಬಜಾರ್ ಪ್ರತೀ ಬಾರಿ ಗಲಾಟೆಯಲ್ಲೂ ಪ್ರಮುಖ ಬಾಧಿತ ಪ್ರದೇಶವಾಗುತ್ತಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಬೇಸರ ವ್ಯಕ್ತಪಡಿಸುತ್ತಾರೆ.

ಶಿವಮೊಗ್ಗಕ್ಕೆ ಮಾರುಕಟ್ಟೆ ಬರುವ ಜನರು ಇಲ್ಲಿ ಗಲಾಟೆ ಇದೆಯೇ ಎಂದು ಖಚಿತಪಡಿಸಿಕೊಂಡು ಬರುತ್ತಾರೆ. ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಾರೆ. ಎಲ್ಲಿ ಯಾವಾಗ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಇದು ಪದೇ ಪದೇ ಆದಲ್ಲಿ ಜನರು ಬೇಡಪ್ಪ ಹೋಗಲಿ ಎಂಬ ಭಾವನೆ ಮೂಡಿ ಬ್ರ್ಯಾಂಡ್ ಶಿವಮೊಗ್ಗಕ್ಕೆ ಪೆಟ್ಟು ಬೀಳುತ್ತದೆ. ಊರಿನ ಹಿರಿಯರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಸೇರಿ ಇದನ್ನು ಪರಿಹರಿಸುವ ಕಾರ್ಯ ಮಾಡಲಿ ಎಂದು ಮನವಿ ಮಾಡುತ್ತಾರೆ.

***

ವ್ಯಾಪಾರಕ್ಕೆ ನಿರ್ಬಂಧ ಬೇಡ; ಮನವಿ

ಶಿವಮೊಗ್ಗ ನಗರದಲ್ಲಿ ಬುಧವಾರದಿಂದ ಸಂಜೆಯ ನಂತರ ವ್ಯಾಪಾರ - ವಹಿವಾಟಿಗೆ ಪೊಲೀಸರು ಅವಕಾಶ ನಿರಾಕರಿಸುತ್ತಿದ್ದು, ಇದರಿಂದ ವರ್ತಕರಿಗೆ ಸಾಕಷ್ಟು ಅನಾನುಕೂಲವಾಗುತ್ತಿದೆ. ನಿಯಮಾನುಸಾರ ವ್ಯಾಪಾರ-ವಹಿವಾಟಿಗೆ ಅವಕಾಶ ನೀಡುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದೆ.

ಈ ಸಂಬಂಧ ಬುಧವಾರ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸದ್ಯ ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕಾನೂನು-ಸುವ್ಯವಸ್ಥೆ ನಿಯಂತ್ರಣದಲ್ಲಿರುವುದರಿಂದ ಸಂಜೆಯ ನಂತರವೂ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬೇಕು ಎಂದು ಸಂಘ ಮನವಿ ಮಾಡಿದೆ. ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಇದ್ದರು.

***

ಶಿವಮೊಗ್ಗ, ಭದ್ರಾವತಿಯಲ್ಲಿ ನಿಷೇಧಾಜ್ಞೆ ಮುಂದುವರಿಸಬೇಕೇ? ಬೇಡವೇ ಎಂಬುದನ್ನು ಗುರುವಾರ ಅಧಿಕಾರಿಗಳ ಸಭೆ ನಡೆಸಿ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಲಾಗುವುದು.

ಅಲೋಕ್‌ಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.