ADVERTISEMENT

ಮಾದರಿಯಾದ ತುಡಿನೀರ ಸರ್ಕಾರಿ ಶಾಲೆ

ಗ್ರಾಮಸ್ಥರು, ಶಿಕ್ಷಕರು, ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರ ಶ್ರಮ

ರವಿ ಆರ್.ತಿಮ್ಮಾಪುರ
Published 26 ಜುಲೈ 2022, 5:32 IST
Last Updated 26 ಜುಲೈ 2022, 5:32 IST
ಆನವಟ್ಟಿ ಸಮೀಪದ ಕನ್ನಡ ಹಾಗೂ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು
ಆನವಟ್ಟಿ ಸಮೀಪದ ಕನ್ನಡ ಹಾಗೂ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು   

ಆನವಟ್ಟಿ: ಶಾಲೆಯ ಆವರಣದಲ್ಲಿ ನಳನಳಿಸುವ ಕೈತೋಟ. ಕಟ್ಟಡದ ಗೋಡೆಗಳಲ್ಲಿ ತ್ರಿ-ಡಿ ಚಿತ್ರ. ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುವ ಹಸಿರು ಹಾಸು.

ಇದು ಯಾವುದೋ ಖಾಸಗಿ ಶಾಲೆಯ ಚಿತ್ರಣವಲ್ಲ. ಬದಲಿಗೆ, ಸಮೀಪದ ತುಡಿನೀರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೋಟ.

ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ತಗ್ಗು–ದಿಣ್ಣೆಯಿಂದ ಕೂಡಿದ್ದ ಶಾಲೆಯ ಆವರಣ ಈಗ ಹಸಿರು ಹೊದ್ದಿದೆ. ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಸೇರಿ ಶ್ರಮದಾನ ಮಾಡಿ ಶಾಲೆಯನ್ನು ಸುಂದರವಾಗಿಸಿದ್ದಾರೆ.

ADVERTISEMENT

ನಳನಳಿಸುತ್ತಿರುವ ಕೈತೋಟ: ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕೊಳವೆಬಾವಿ ಕೊರೆಯಿಸಿ, ಶಾಲೆಯ ಆವರಣದಲ್ಲಿ ನಿರ್ಮಿಸಲಾಗಿರುವ ಕೈತೋಟ ನಳನಳಿಸುತ್ತಿದೆ.10 ತೆಂಗಿನ ಮರಗಳು ಫಲ ನೀಡುತ್ತಿದ್ದು, ಬಿಸಿಯೂಟಕ್ಕೆ ತೆಂಗಿನಕಾಯಿಯ ಖರೀದಿಯ ಗೋಜಿಲ್ಲ ಎನ್ನುತ್ತಾರೆ ಎಸ್‌ಡಿಎಂಸಿ ಸದಸ್ಯರು.

ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ, ಉರ್ದು ಶಾಲೆ, ಹಾಗೂ ಅಂಗನವಾಡಿಗಳು ಇದೇ ಆವರಣದಲ್ಲಿದ್ದು, ಕೊಠಡಿಗಳ ಸಮಸ್ಯೆ ಕಾರಣ ಒಂದೆಡೆ ಬಿಸಿಯೂಟ ತಯಾರಿಸಲಾಗುತ್ತಿದೆ. ಎರಡೂ ಶಾಲೆ ಶಿಕ್ಷಕರು ಸಹಕಾರದಿಂದ ಕಲಿಕೆಗೆ ನೆರವಾಗುವ ಮೂಲಕ ಸಿಬ್ಬಂದಿ ಕೊರೆತ ನೀಗಿಸುತ್ತಿದ್ದಾರೆ.

ಗ್ರಾಮ ಹಾಗೂ ತಾಲ್ಲೂಕು ಪಂಚಾಯಿತಿ ಅನುದಾನ ಬಳಸಿ, ಗೋಡೆಗಳಲ್ಲಿ ಚಿತ್ತಾರ ಬಿಡಿಸಿ, ತಗಡಿನ ಶೆಡ್ ನಿರ್ಮಿಸಲಾಗಿದೆ.ಆನೆ, ಜಿರಾಫೆ, ಚಿಟ್ಟೆಗಳ ತ್ರಿ–ಡಿ ಚಿತ್ರಗಳು ಆಕರ್ಷಿಸುತ್ತಿವೆ.

ನಲಿ–ಕಲಿ ಪಠ್ಯಕ್ಕೆ ಅನುಕೂಲವಾಗುವಂತೆ ಮಾನವನ ಶರೀರ, ಮರ-ಗಿಡ, ಪ್ರಾಣಿ-ಪಕ್ಷಿ, ಗಣಿತ, ವಿಜ್ಞಾನಕ್ಕೆ ಸಂಬಂಧಿತ ಚಿತ್ರಗಳನ್ನು ಬಿಡಿಸಲಾಗಿದೆ. ಸ್ಮಾರ್ಟ್‌ ಕ್ಲಾಸ್‌ ಸಹ ಇದ್ದು, ಕಲಿಕೆಗೆ ಪೂರಕವಾಗಿದೆ.

1952ರಲ್ಲಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆರಂಭವಾಗಿದ್ದ ಈ ಶಾಲೆಗೆ 1974ರಲ್ಲಿ ಚನ್ನಮ್ಮ ಮುದ್ದಪ್ಪ ಗೌಡ ಅವರು ದಾನವಾಗಿ ನೀಡಿದ 20 ಗುಂಟೆ ನಿವೇಶನದಲ್ಲಿ ಎರಡು ಕಟ್ಟಡ ನಿರ್ಮಿಸಲಾಗಿದೆ. 2007ರಲ್ಲಿ ಉರ್ದು ಶಾಲೆ ಮಂಜೂರಾಗಿದ್ದು ಇದೇ ಆವರಣದಲ್ಲಿ ಶಾಲೆ ಶುರುವಾಗಿದೆ.

ಶಿಕ್ಷಕರು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಶಿಕ್ಷಣ ಇಲಾಖೆಯಿಂದ ‘ಮಾದರಿ ಶಾಲೆ’ ಪ್ರಶಂಸೆ ದೊರೆತಿದೆ. ಮುಖ್ಯಶಿಕ್ಷಕ ಶಂಕರಪ್ಪ ಅವರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷರಾದ ಚಂದ್ರಪ್ಪ, ಖುರ್ಷಿದ್ ಅಹ್ಮದ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.