ಶಿವಮೊಗ್ಗ: ಪಿಇಎಸ್ ಐಟಿಎಂ ಕಾಲೇಜಿನಲ್ಲಿ 19ನೇ ಬ್ಯಾಚ್‌ನ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ‘ಶಿಷ್ಯೋಪನಯನ’ ಪ್ರೇರಣಾ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದ ಧಾರವಾಡದ ಐಐಟಿ ನಿರ್ದೇಶಕ ಪ್ರೊ.ಮಹದೇವ ಪ್ರಸನ್ನ, ‘ಕಳೆದೊಂದು ದಶಕದಲ್ಲಿ ಎಐ ಜಾಗತಿಕವಾಗಿ ಪರಿಣಾಮ ಬೀರಿದೆ. ಉದ್ಯೋಗಾವಕಾಶದ ಮೇಲೂ ತನ್ನ ಪ್ರಭಾವ ಬೀರಿದೆ. ಕಳೆದ ನಾಲ್ಕು ದಶಕದಿಂದ ನಾವು ಕಂಪ್ಯೂಟರ್ ಹಿಂದೆ ಬಿದ್ದಿದ್ದೇವೆ. ಎಂಜಿನಿಯರ್‌ಗಳು ದೇಶದ ನಿರ್ಮಾತೃಗಳು. ಈಗಿನ ಅನಿಶ್ಚಿತತೆ ಅವಕಾಶವಾಗಿ ಬಳಸಿಕೊಳ್ಳಿ. ಪದವಿ, ಉದ್ಯೋಗದ ಜೊತೆಗೆ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
‘ಈಗ ಮಾಹಿತಿ ಎಲ್ಲರ ಕೈಯಲ್ಲಿದೆ. ಎಲ್ಲಾ ಸಿಲಬಸ್ ಹೇಳಿಕೊಡಬೇಕಿಲ್ಲ. ಮಾರ್ಗದರ್ಶನ ಮಾಡಿದರೆ ಸಾಕು. ವಿಕಸಿತ ಭಾರತ ನಿರ್ಮಾಣ ನಿಮ್ಮ ಕೈಯಲ್ಲಿ ಇದೆ. ಯೋಚನೆ ನಿಮ್ಮ ಮಾತೃಭಾಷೆಯಲ್ಲಿ ಇರಲಿ. ಸಂವಹನ ಮಾಡಲು ಮಾತ್ರ ಇಂಗ್ಲಿಷ್ ಅಗತ್ಯ. ನೀವು ಪಡೆದಿರುವ ಸಿಇಟಿ ರ‍್ಯಾಂಕ್, ಸ್ಥಳ ಇವೆಲ್ಲವನ್ನೂ ಮರೆತು ನಿಮ್ಮ ಸಮಯವನ್ನು ಕಲಿಕೆಗಾಗಿ ವಿನಿಯೋಗಿಸಿ’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜನಶಿಕ್ಷಣ ಸಂಸ್ಥಾನದ ನಿರ್ದೇಶಕಿ ಎಸ್.ವೈ. ಅರುಣಾದೇವಿ, ‘ಅಂಕಗಳಷ್ಟೇ ಬದುಕಿನ ಮಾನದಂಡಗಳಲ್ಲ, ಉತ್ತಮ ಸಂಸ್ಕಾರ ಮತ್ತು ದೇಶ ನಿರ್ಮಾಣದ ಸಂಕಲ್ಪವೂ ಸಹ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳಿಗೆ ಬಲಿಯಾಗದಿರಿ. ಉತ್ತಮವಾದ ಶಿಕ್ಷಣವನ್ನು ಪಡೆದು ಅತ್ಯುತ್ತಮ ಸಾಧನೆಯ ಮೂಲಕ ತಂದೆ ತಾಯಿ ಹಾಗೂ ಶಿಕ್ಷಣ ಸಂಸ್ಥೆಗೆ ಗೌರವ ತರುವ ಕೆಲಸ ಮಾಡಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಿಇಎಸ್ ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜಕ ಆರ್. ನಾಗರಾಜ, ಸಂಸ್ಥೆಯು ಬೆಳೆದು ಬಂದ ಸಾಧನೆಯ ಮೈಲಿಗಲ್ಲುಗಳನ್ನು ವಿವರಿಸಿದರು.
‘ಪಿಇಎಸ್ ಸಂಸ್ಥೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸೇವೆಯ ಮೂಲಕ ಗುರುತಿಸಿಕೊಂಡಿದೆ. ಸುಸಜ್ಜತವಾದ ಮೂಲ ಸೌಕರ್ಯಗಳು, ಅನುಭವಿ ಹಾಗೂ ಸಮರ್ಪಣಾ ಮನೋಭಾವದ ಅಧ್ಯಾಪಕ ವೃಂದ ಇಲ್ಲಿದೆ. ಇನ್ಫೋಸಿಸ್, ಟಾಟಾ, ಟಿಸಿಎಸ್ ಕ್ಯಾಂಪಸ್ ಆಯ್ಕೆ ಮಾಡುತ್ತಿವೆ’ ಎಂದು ಮಾಹಿತಿ ನೀಡಿದರು.
ಪಿಇಎಸ್ ಟ್ರಸ್ಟ್‌ನ ಸಿಇಒ ಬಿ.ಆರ್. ಸುಭಾಷ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.