ADVERTISEMENT

ಶಿವಮೊಗ್ಗ: ತವರಿನ ಬಾಗಿನದಿಂದ ಬಾಂಧವ್ಯ ಗಟ್ಟಿ

ಜಯಕರ್ನಾಟಕ ಮಹಿಳಾ ಘಟಕದಿಂದ ‘ತವರ ನೆನಪು’ ಬಾಗಿನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 2:48 IST
Last Updated 26 ಸೆಪ್ಟೆಂಬರ್ 2025, 2:48 IST
ಶಿವಮೊಗ್ಗದಲ್ಲಿ ಗುರುವಾರ ಆಯೋಜಿಸಿದ್ದ ‘ತವರ ನೆನಪು’ ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಮಹಿಳೆಯರಿಗೆ ಬಾಗಿನ ನೀಡಿದರು
ಶಿವಮೊಗ್ಗದಲ್ಲಿ ಗುರುವಾರ ಆಯೋಜಿಸಿದ್ದ ‘ತವರ ನೆನಪು’ ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಮಹಿಳೆಯರಿಗೆ ಬಾಗಿನ ನೀಡಿದರು   

ಶಿವಮೊಗ್ಗ: ‘ತವರಿನ ಹೃದಯ ಸ್ಪರ್ಶವು ಬಾಗಿನದಿಂದ ದೊರೆಯುತ್ತದೆ. ತಲ್ಲಣಗಳೇ ತುಂಬಿರುವ ಸಮಾಜದಲ್ಲಿ ಪ್ರೀತಿಯನ್ನು ಹರಿಸುವ ಇಂತಹ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಲಿ’ ಎಂದು ಶಿವಮೊಗ್ಗ– ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು. 

ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಮಹಿಳಾ ಘಟಕದಿಂದ ಇಲ್ಲಿನ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ತವರ ನೆನಪು’ ಬಾಗಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಬಾಂಧವ್ಯಗಳು ಮರೆಯಾಗುತ್ತಿರುವ ಈಗಿನ ಸಂದರ್ಭಗಳಲ್ಲಿ ತವರಿನ ಬಾಗಿನವು ಸಹೋದರ ಸಂಬಂಧವನ್ನು ಗಟ್ಟಿಗೊಳಿಸಿ ಕೌಟುಂಬಿಕ ಪ್ರೇಮವನ್ನು ಮೆರೆಯುತ್ತದೆ ಎಂದರು.  

ADVERTISEMENT

‘ಬಾಗಿನ ಅರ್ಪಿಸುವುದು ಕೇವಲ ಸಾಂಕೇತಿಕ ಕಾರ್ಯಕ್ರಮ ಅಲ್ಲ. ಮಹಿಳೆಯರಲ್ಲಿ ಸಂಚಲನ ಮತ್ತು ಸಿಂಚನ ಮೂಡಿಸುವ ಕಾರ್ಯಕ್ರಮ. ಇದು ತಾಯ್ತನ, ಪ್ರೀತಿ, ಬಾವೈಕ್ಯ, ಮಾನವೀಯ ಮೌಲ್ಯಗಳನ್ನು ಬೆಸೆಯುವ ಕಾರ್ಯಕ್ರಮ’ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎನ್. ಜಗದೀಶ್ ಹೇಳಿದರು. 

‘ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಅಭಿವೃದ್ಧಿಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಕೂಡ ಮಹಿಳೆಯರ ಸಂಘಟನೆಗೆ, ಸೇವೆಗೆ ಸಹಾಯಕವಾಗುತ್ತವೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಮಟ್ಟದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ಹೇಳಿದರು.

ಸಮಾಜದ ವಿವಿಧ ವರ್ಗದ, ವಿವಿಧ ಧರ್ಮದ 120ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ನೀಡಲಾಯಿತು.  

ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಮುನಿಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಜತ್, ಡಿವೈಎಸ್‌ಪಿ ಬಾಬು ಅಂಜನಪ್ಪ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಖಲೀಂ ಪಾಶಾ, ಸೌಗಂದಿಕಾ ರಘುನಾಥ್, ಅನಿಲ್ ಬೆಂಗಳೂರು, ಮೋಹನ್ ದೇವರಾಜ್, ಭಾರತಿ ರಾಮಕೃಷ್ಣ, ರೇಖಾ, ಜಯಂತಿ, ಮಂಜುಳಾ, ಪುಷ್ಪಾ, ರೇಖಮ್ಮ, ನಿರ್ಮಲಾ, ಆಶಾ, ಪ್ರದೀಪ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.