ADVERTISEMENT

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ನಿಂದ ಸಂಕಲ್ಪ ಸತ್ಯಾಗ್ರಹ

ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 6:19 IST
Last Updated 28 ಮಾರ್ಚ್ 2023, 6:19 IST
ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹಗೊಳಿಸಿದ್ದನ್ನು ಖಂಡಿಸಿ ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ನಗರದ ಗಾಂಧಿ ಪಾರ್ಕ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಸಂಕಲ್ಪ ಸತ್ಯಾಗ್ರಹ ನಡೆಸಲಾಯಿತು.
ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹಗೊಳಿಸಿದ್ದನ್ನು ಖಂಡಿಸಿ ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ನಗರದ ಗಾಂಧಿ ಪಾರ್ಕ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಸಂಕಲ್ಪ ಸತ್ಯಾಗ್ರಹ ನಡೆಸಲಾಯಿತು.   

ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರು ಸೋಮವಾರ ನಗರದ ಗಾಂಧಿ ಪಾರ್ಕ್ ಆವರಣದ ಗಾಂಧಿ ಪ್ರತಿಮೆ ಎದುರು ಸಂಕಲ್ಪ ಸತ್ಯಾಗ್ರಹ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಸರ್ವಾಧಿಕಾರಿ ವ್ಯವಸ್ಥೆ ಹುಟ್ಟು ಹಾಕುತ್ತಿದ್ದಾರೆ. ಭ್ರಷ್ಟ ಬಿಜೆಪಿ ಆಡಳಿತದ ವಿರುದ್ಧ ಸತ್ಯ ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ ವ್ಯವಸ್ಥೆ ಬುಡಮೇಲು ಮಾಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ ಆಕ್ರೋಶ ವ್ಯಕ್ತ ಪಡಿಸಿದರು.

ಕೇಂದ್ರ ಸರ್ಕಾರ ಅದಾನಿ, ಅಂಬಾನಿಯ ಬೆಂಬಲಕ್ಕೆ ನಿಂತು, ದೇಶದ ಸಂಪನ್ಮೂಲಗಳನ್ನು ನಾಶ ಪಡಿಸುತ್ತಿದೆ. ದೇಶದಲ್ಲಿ ಬಡವರಿಗೆ ಸಲ್ಲಬೇಕಿದ್ದ ಮೂಲಸೌಕರ್ಯಗಳು ಹಾಗೂ ಆರ್ಥಿಕ ಸವಲತ್ತುಗಳನ್ನು ಪ್ರಶ್ನಿಸಿ, ವಿರೋಧ ಪಕ್ಷಗಳು ಐಕ್ಯತೆಯಿಂದ ಸಂಸತ್ತಿನಲ್ಲಿ ಹೋರಾಟ ನಡೆಸಿದ್ದನ್ನು ಹತ್ತಿಕ್ಕುವ ಸಲುವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ADVERTISEMENT

ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿ, ಎರಡು ವರ್ಷ ಜೈಲು ಶಿಕ್ಷೆಗೆ ಗುರಿ ಮಾಡಿದ್ದಾರೆ. ಅವರನ್ನು ಶಿಕ್ಷೆಗೆ ಗುರಿ ಪಡಿಸಲು ಒಂದು ತಿಂಗಳ ಕಾಲ ತಡೆ ಆಜ್ಞೆ ಇದ್ದರೂ ತರಾತುರಿಯಲ್ಲಿ ಸದಸ್ಯತ್ವ ಸ್ಥಾನ ಅನರ್ಹಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲಾಗಿದೆ ಎಂದು ದೂರಿದರು.

ಹಿಟ್ಲರ್ ಸಂಸ್ಕೃತಿಯ ಬಿಜೆಪಿ ಸರ್ಕಾರ ದೇಶಕ್ಕೆ ಮಾರಕ. ಈ ಬಾರಿಯ ಚುನಾವಣೆಯಲ್ಲಿ ಮತದಾರರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಗಿರೀಶ್ ಹೇಳಿದರು.

‘ಮೋದಿ ತೊಲಗಿಸಿ’, ‘ದೇಶ ಉಳಿಸಿ’, ‘ಅಂಬಾನಿ, ಅದಾನಿ ಏಜೆಂಟ್ ನರೇಂದ್ರ ಮೋದಿಗೆ ಧಿಕ್ಕಾರ’, ‘ಮೋದಿ ಹಠಾವೊ, ದೇಶ್ ಬಚಾವೊ’, ‘ಬ್ರಿಟಿಷ್‌ ಸಂಸ್ಕೃತಿಯ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’ ಇತ್ಯಾದಿ ಘೋಷಣೆಗಳನ್ನು ಪ್ರತಿಭಟನಕಾರರು ಕೂಗಿದರು.

ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಬೋಪಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಪಾಷಾ, ದೀಪಕ್ ಸಿಂಗ್, ಇಸ್ಮಾಯಿಲ್ ಖಾನ್, ಸತ್ಯನಾರಾಯಣ, ಕೆ. ರಂಗನಾಥ್, ಎಸ್.ಪಿ. ಶೇಷಾದ್ರಿ, ಗೋಪಿ, ರಾಜಶೇಖರ್, ಶಿವಾನಂದ್, ರಂಗೇಗೌಡ, ಉಮೇಶ್, ಸುವರ್ಣ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.