ADVERTISEMENT

ಶಿಮುಲ್ ಎದುರು ಏಕಮುಖ ಸಂಚಾರಕ್ಕೆ ಒತ್ತು

ಹೆದ್ದಾರಿ ಕಾಮಗಾರಿ ವೇಳೆ ಭೂಕುಸಿತ; ಸ್ಥಳ ಪರಿಶೀಲನೆ ನಡೆಸಿದ ಡಿ.ಸಿ, ಎಸ್ಪಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 4:23 IST
Last Updated 25 ಜನವರಿ 2026, 4:23 IST
ಮಾಚೇನಹಳ್ಳಿಯ ಶಿಮುಲ್ ಡೇರಿ ಎದುರು ಬಿ.ಎಚ್.ರಸ್ತೆಯ ಚತುಷ್ಪಥ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹಾಗೂ ಎಸ್ಪಿ ಬಿ.ನಿಖಿಲ್ ಭೇಟಿ ನೀಡಿ ಪರಿಶೀಲಿಸಿದರು
ಮಾಚೇನಹಳ್ಳಿಯ ಶಿಮುಲ್ ಡೇರಿ ಎದುರು ಬಿ.ಎಚ್.ರಸ್ತೆಯ ಚತುಷ್ಪಥ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹಾಗೂ ಎಸ್ಪಿ ಬಿ.ನಿಖಿಲ್ ಭೇಟಿ ನೀಡಿ ಪರಿಶೀಲಿಸಿದರು   

ಪ್ರಜಾವಾಣಿ ವಾರ್ತೆ

ಶಿವಮೊಗ್ಗ: ಮಾಚೇನಹಳ್ಳಿಯ ಶಿಮುಲ್ ಡೇರಿ ಎದುರು ಬಿ.ಎಚ್.ರಸ್ತೆಯ ಚತುಷ್ಪಥ ಕಾಮಗಾರಿ ಹಾದಿಯ ಮೇಲಿನ ಒತ್ತಡ ತಡೆಯಲು ಪರ್ಯಾಯ ಮಾರ್ಗ ನಿಗದಿಗೆ ಚಿಂತನೆ ನಡೆಸಿದ್ದೇವೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಶಿಮುಲ್ ಡೇರಿ ಎದುರು ಚತುಷ್ಪಥ ರಸ್ತೆ ಕಾಮಗಾರಿ ವೇಳೆ ಆಗಿರುವ ಭೂ ಕುಸಿತದ ಬಗ್ಗೆ ‘ಪ್ರಜಾವಾಣಿ’ ಶನಿವಾರ ವರದಿ ಪ್ರಕಟಿಸಿತ್ತು. ಹೀಗಾಗಿ ಎಸ್ಪಿ ಅವರೊಂದಿಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ಮಾಡಿದರು. ನಂತರ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

ADVERTISEMENT

ಕಾಮಗಾರಿ ನಡೆಯುವ ಸ್ಥಳದಲ್ಲಿ ಶಿವಮೊಗ್ಗದಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳಿಗೆ (ಏಕಮುಖ ಸಂಚಾರ) ಮಾತ್ರ ಅವಕಾಶ ನೀಡಿ, ಬೆಂಗಳೂರಿನಿಂದ ಶಿವಮೊಗ್ಗದ ಕಡೆಗೆ ಬರುವ ವಾಹನಗಳಿಗೆ ಪರ್ಯಾಯ ರಸ್ತೆ ಗುರುತಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಎಸ್ಪಿ ಬಿ.ನಿಖಿಲ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳೊಂದಿಗೆ ಚರ್ಚಿಸಿ ವರದಿ ನೀಡಲಿದ್ದು, ನಂತರ ಪರ್ಯಾಯ ಕ್ರಮದ ಬಗ್ಗೆ ಅಧಿಕೃತ ಆದೇಶ ಹೊರಡಿಸುವುದಾಗಿ ಹೇಳಿದರು.

ಹಾಲಿ ಕಾಮಗಾರಿ ಪೂರ್ಣಗೊಂಡಿರುವ ಬಲಭಾಗದಲ್ಲಿ ಭಾರೀ ವಾಹನಗಳ ಬದಲಿಗೆ ದ್ವಿಚಕ್ರ ವಾಹನ ಮತ್ತು ಕಾರುಗಳ ಓಡಾಟಕ್ಕೆ ಅವಕಾಶ ಕಲ್ಪಿಸುವ ಜೊತೆಗೆ ರಾತ್ರಿ ವೇಳೆ ಮಾತ್ರ ಕಾಮಗಾರಿ ನಡೆಸಿ ಹಗಲು ಹೊತ್ತಿನಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದರು.

ಈ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕಾಮಗಾರಿಯ ಗುತ್ತಿಗೆ ಕಂಪೆನಿಯ ತಜ್ಞರು ಅಲ್ಲಿನ ವಾಸ್ತವ ಚಿತ್ರಣ ನೀಡಿದರು. ಕಾಮಗಾರಿ ನಡೆಸಲು ಆಗಿರುವ ತೊಂದರೆ, ವಿಳಂಬಕ್ಕೆ ಕಾರಣ ಹಾಗೂ ಮತ್ತೊಂದು ಬದಿಯಲ್ಲಿ ಭೂ ಸ್ವಾಧೀನಕ್ಕೆ ಆಗಿರುವ ತೊಂದರೆಯ ಬಗ್ಗೆಯೂ ಜಿಲ್ಲಾಡಳಿತದ ಗಮನ ಸೆಳೆದರು. ನಂತರ ಇಬ್ಬರೂ ಅಧಿಕಾರಿಗಳು ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸಿದರು. 

ಭೂ ಕುಸಿತಕ್ಕೆ ಕಾರಣ, ದುರಸ್ತಿ ಹಾಗೂ ಸಂಚಾರ ಮಾರ್ಗ ಬದಲಾವಣೆಯ ಅಗತ್ಯತೆ ಹಾಗೂ ಅವಕಾಶಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆ, ಸೂಚನೆ ನೀಡಿದರು.

ಈ ಪ್ರದೇಶದಲ್ಲಿ ಒಂದೇ ಭಾಗದಲ್ಲಿ ಸರ್ವಿಸ್ ರಸ್ತೆ ಲಭ್ಯವಿದ್ದು, ಅಲ್ಲಿ ಪದೇ ಪದೇ ಭೂ ಕುಸಿತ ಸಂಭವಿಸುತ್ತಿರುವುದು, ಇನ್ನೊಂದು ಭಾಗದ ಸರ್ವಿಸ್ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆ ವಿಳಂಬದ ಕಾರಣದಿಂದ ಇನ್ನೂ ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ. ಈ ಭಾಗದಲ್ಲಿಯೂ ಭೂ ಕುಸಿತ ಉಂಟಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.