ADVERTISEMENT

ಶಿಮುಲ್ | ₹ 11.39 ಕೋಟಿ ಲಾಭ; ಸಂಘಗಳಿಗೆ ಡಿವಿಡೆಂಡ್‌

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 5:52 IST
Last Updated 26 ಸೆಪ್ಟೆಂಬರ್ 2025, 5:52 IST
ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಶಿಮುಲ್ ವಾರ್ಷಿಕ ಸಾಮಾನ್ಯ ಸಭೆಯ ಉದ್ಘಾಟನೆಯ ನೋಟ
ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಶಿಮುಲ್ ವಾರ್ಷಿಕ ಸಾಮಾನ್ಯ ಸಭೆಯ ಉದ್ಘಾಟನೆಯ ನೋಟ   

ಶಿವಮೊಗ್ಗ: ಇಲ್ಲಿನ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಶಿಮುಲ್) ₹11.39 ಕೋಟಿ ನಿವ್ವಳ ಲಾಭ ಗಳಿಸಿದ್ದು, ನಿಯಮಾನುಸಾರ ಸದಸ್ಯ ಸಂಘಗಳಿಗೆ ಬೋನಸ್ ಹಾಗೂ ಡಿವಿಡೆಂಡ್‌ ಕೊಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಎಚ್.ಎನ್.ವಿದ್ಯಾಧರ ತಿಳಿಸಿದರು. 

ಇಲ್ಲಿನ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಗುರುವಾರ ನಡೆದ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಒಕ್ಕೂಟದಲ್ಲಿ ನಿತ್ಯ 8.50 ಲಕ್ಷ ಲೀಟರ್ ಉತ್ತಮ ಗುಣಮಟ್ಟದ ಹಾಲಿನ ಶೇಖರಣೆಗೆ ನೆರವಾಗುತ್ತಿರುವ ಹಾಲು ಉತ್ಪಾದಕ ರೈತರಿಗೆ, ಸಂಘಗಳ ಕಾರ್ಯಕಾರಿ ಮಂಡಳಿ ಸದಸ್ಯರಿಗೆ, ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿ/ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು.

ಒಕ್ಕೂಟವು 2025-26 ನೇ ಸಾಲಿಗೆ ಹಮ್ಮಿಕೊಂಡಿರುವ ಕಾರ್ಯ ಚಟುವಟಿಕೆ ಹಾಗೂ ಯೋಜನೆಯ ವಿವರಗಳನ್ನು ಶಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಸಭೆಗೆ ಮಂಡಿಸಿದರು.

ADVERTISEMENT

‘2025-26ನೇ ಸಾಲಿನಲ್ಲಿ ಒಕ್ಕೂಟದಿಂದ ಸದಸ್ಯ ಸಂಘಗಳಿಗೆ/ ಉತ್ಪಾದಕರಿಗೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಶು ಆಹಾರ ಮತ್ತು ಮೇವು ಅಭಿವೃದ್ಧಿ ಕಾರ್ಯಕ್ರಮ, ಕೃತಕಾ ಗರ್ಭಧಾರಣಾ ಕಾರ್ಯಕ್ರಮ, ಪಶು ಆರೋಗ್ಯ ಕಾರ್ಯಕ್ರಮ, ತರಬೇತಿ/ ಶಿಬಿರ, ಸಹಕಾರ ಸೇವಾ ಹಾಗೂ ಶುದ್ಧ ಹಾಲು ಉತ್ಪಾದನಾ ಕಾರ್ಯಕ್ರಮ, ಮಾರುಕಟ್ಟೆ ಅಭಿವೃದ್ಧಿಗೆ ಪ್ರೋತ್ಸಾಹ ಧನ ನೀಡಲು ಹಾಗೂ ಪರಿಕರಗಳಿಗೆ ₹4.25 ಕೋಟಿ ಅನುದಾನವನ್ನು ನೀಡಲು ಯೋಜಿಸಲಾಗಿದೆ. ಶೇಖರಿಸುವ ಪ್ರತಿ ಕೆ.ಜಿ ಹಾಲಿಗೆ ₹1.49 ಅನುದಾನ ನೀಡಲಾಗುತ್ತಿದೆ’ ಎಂದು ತಿಳಿಸಿದರು. 

ಉಪಾಧ್ಯಕ್ಷ ಚೇತನ್ ಎಸ್.ನಾಡಿಗರ, ನಿರ್ದೇಶಕರಾದ ಆರ್.ಎಂ.ಮಂಜುನಾಥ ಗೌಡ, ಎಚ್.ಬಿ.ದಿನೇಶ್, ಡಿ.ಆನಂದ, ಜಗದೀಶಪ್ಪ ಬಣಕಾರ್, ಟಿ.ಶಿವಶಂಕರಪ್ಪ, ಎಚ್.ಕೆ.ಬಸಪ್ಪ, ಬಿ.ಜಿ.ಬಸವರಾಜಪ್ಪ, ಬಿ.ಆರ್.ರವಿಕುಮಾ‌ರ್, ಬಿ.ಸಿ.ಸಂಜೀವ ಮೂರ್ತಿ, ಟಿ.ಎಸ್.ದಯಾನಂದ ಗೌಡ್ರು, ಜಿ.ಬಿ.ಶೇಖರಪ್ಪ, ಬಿ.ಸಿ.ಸಂಜೀವಮೂರ್ತಿ, ನಾಮನಿರ್ದೇಶಿತ ನಿರ್ದೇಶಕ ಎಸ್.ಕುಮಾರ್,  ವ್ಯವಸ್ಥಾಪಕ ಸುರೇಶ್ ಹುಳ್ಳಿ ಉಪಸ್ಥಿತರಿದ್ದರು.

ಮೆಗಾ ಡೇರಿ ನಿರ್ಮಾಣ ಹೊಣೆ

ಎನ್‌ಡಿಡಿಬಿಗೆ  ದಾವಣಗೆರೆ ತಾಲ್ಲೂಕು ಎಚ್.ಕಲಪನಹಳ್ಳಿ ಬಳಿ 14 ಎಕರೆಯಲ್ಲಿ ₹280 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ನಿತ್ಯ 5 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ ನಿರ್ಮಾಣ ಕಾಮಗಾರಿಯನ್ನು ಟರ್ನ್ ಕೀ ಆಧಾರದ ಮೇಲೆ ನ್ಯಾಷನಲ್‌ ಡೇರಿ ಡೆವಲಪ್‌ಮೆಂಟ್‌ ಬೋರ್ಡ್‌ಗೆ (ಎನ್.ಡಿ.ಡಿ.ಬಿ) ನೀಡಿರುವುದನ್ನು ವಾರ್ಷಿಕ ಸಾಮಾನ್ಯ ಸಭೆ ಅನುಮೋದಿಸಿತು.  ₹ 22 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಡೇರಿಯಲ್ಲಿ ಪ್ರತ್ಯೇಕವಾಗಿ ಸಿಹಿ ಉತ್ಪನ್ನಗಳ ಉತ್ಪಾದನಾ ಘಟಕ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ನಿತ್ಯ 2 ಲಕ್ಷ ಲೀಟರ್ ಸಾಮರ್ಥ್ಯದ ಸುಸಜ್ಜಿತ ಹಾಲು ಶೀಥಲೀಕರಣ ಕೇಂದ್ರ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ಗಣಿ ಅಭಿವೃದ್ಧಿ ಪುನಶ್ವೇತನ ನಿಗಮದ ಅನುದಾನದೊಂದಿಗೆ ₹16 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಮತ್ತು ಸಾಗರದಲ್ಲಿ ಉಪ ಕಚೇರಿ ಹಾಗೂ ಸಭಾಂಗಣ ನಿರ್ಮಾಣ ₹1.99 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮತಿ ಪಡೆಯಲಾಯಿತು.

ಮೂರು ಸಂಘಗಳಿಗೆ ಬಹುಮಾನ ವಿತರಣೆ

ಶಿಮುಲ್‌ ವ್ಯಾಪ್ತಿಯಲ್ಲಿ ಚಾಂಪಿಯನ್‌ ಸಂಘವಾಗಿ ಹಿರಿಯೂರು ತಾಲ್ಲೂಕಿನ ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಹಾಗೂ ಅತ್ಯುತ್ತಮ ಮಹಿಳಾ ಚಾಂಪಿಯನ್ ಸಂಘವಾಗಿ ಶಿಕಾರಿಪುರ ತಾಲ್ಲೂಕಿನ ಬೇಗೂರು ಹಾಲು ಉತ್ಪಾದಕರ ಸಂಘವನ್ನು ಹಾಗೂ ಅತ್ಯುತ್ತಮ ಬಿ.ಎಂ.ಸಿ ಆಗಿ ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಸಂಘಗಳು ಆಯ್ಕೆಯಾಗಿದ್ದು ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

ಸ್ತಾವಿತ ಹೊಸ ಯೋಜನೆಗಳು..

ತಡಗಣಿ ಶೀಥಲೀಕರಣ ಕೇಂದ್ರ; ₹1.99 ಕೋಟಿ ವೆಚ್ಚದಲ್ಲಿ ರೈತರ ಸಭಾಂಗಣ ಹಾರ್ಡ್ ಪಾರ್ಕ್‌ ನಿರ್ಮಾಣ  ಶಿವಮೊಗ್ಗ ಡೇರಿ: ₹70 ಲಕ್ಷ ವೆಚ್ಚದಲ್ಲಿ 100 ಮೆ.ಟನ್ ಸಾಮರ್ಥ್ಯದ ಉಗ್ರಾಣ ಶಿವಮೊಗ್ಗ ಡೇರಿ: ₹70 ಲಕ್ಷ ವೆಚ್ಚದಲ್ಲಿ ತರಬೇತಿ ಸಭಾಂಗಣ  ಹೊನ್ನಾಳಿ ಶೀಥಲೀಕರಣ ಕೇಂದ್ರ: ₹30 ಲಕ್ಷ ವೆಚ್ಚದಲ್ಲಿ ರೈತರ ಸಭಾಂಗಣ ನಿರ್ಮಾಣ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.