ADVERTISEMENT

‘18ಕ್ಕೆ ಬೆಂಗಳೂರಿನಲ್ಲಿ ಶೋಷಿತರ ಸ್ವಾಭಿಮಾನ ಸಮಾವೇಶ’

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:31 IST
Last Updated 14 ಮೇ 2022, 2:31 IST
ಗುರುಮೂರ್ತಿ
ಗುರುಮೂರ್ತಿ   

ಶಿವಮೊಗ್ಗ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿಸಿತ) ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮದಿನದ ಅಂಗವಾಗಿ ಮೇ 18ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ‘ಶೋಷಿತರ ಸ್ವಾಭಿಮಾನ ಸಮಾವೇಶ’ವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ತಿಳಿಸಿದರು.

ಭಾರತ ಬಹುಧರ್ಮಗಳ, ಬಹುಸಮುದಾಯಗಳ, ಬಹು ನಂಬಿಕೆಗಳ ದೇಶವಾಗಿದೆ. ಜಾತಿ, ಧರ್ಮ, ಅಸ್ಪೃಶ್ಯತೆಯ ವಿಚಾರದಲ್ಲಿ ಇನ್ನೂ ಸಾಮಾಜಿಕ ಅಸಮಾನತೆಯನ್ನು ಎದುರಿಸುತ್ತಿದೆ. ಅಂಬೇಡ್ಕರ್‌ ಅವರು ಈ ಎಲ್ಲ ಅಸಮಾನತೆಗಳನ್ನು ಹೋಗಲಾಡಿಸಲು ಹೋರಾಡಿದವರು. ಅದರ ಸ್ಮರಣಾರ್ಥ ಶೋಷಿತರ ಸ್ವಾಭಿಮಾನ ಸಮಾವೇಶ ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತ ಇಂದು ವಿಷಮ ಸ್ಥಿತಿಯಲ್ಲಿದೆ. ಮೇಲ್ಜಾತಿಗಳ ಆಕ್ರಮಣ ಮುಂದುವರಿದಿದೆ. ಶೋಷಿತರು ಶೋಷಿತರಾಗಿಯೇ ಇದ್ದಾರೆ. ಬಂಡವಾಳಶಾಹಿಗಳು ವಿಜೃಂಭಿಸುತ್ತಿದ್ದಾರೆ. ಸಮಾನತೆಯ ಹಕ್ಕಿಗಾಗಿ ಬಡವರು, ಕಾರ್ಮಿಕರು, ದಲಿತರು ಹೋರಾಟ ನಡೆಸುತ್ತಲೇ ಇದ್ದಾರೆ. ಭ್ರಷ್ಟಾಚಾರಿಗಳ ಸಂಖ್ಯೆ ಹೆಚ್ಚಾಗಿ ಪ್ರಜಾಪ್ರಭುತ್ವವನ್ನೇ ಸ್ಫೋಟಿಸುತ್ತಿದೆ. ಅಂಬೇಡ್ಕರ್ ಕಂಡ ಕನಸಿನ ಭಾರತ, ಸಂವಿಧಾನದ ಮೇಲೆ ಆಕ್ರಮಣಗಳು ನಡೆಯುತ್ತಿವೆ. ಸಂವಿಧಾನವನ್ನೇ ಬದಲಾಯಿಸುವ, ಸುಟ್ಟುಹಾಕುವ ಕುತಂತ್ರಗಳು
ಎಗ್ಗಿಲ್ಲದೇ ನಡೆಯುತ್ತಿವೆ. ಈ ಎಲ್ಲದರ ಧ್ವನಿಯಾಗಿ, ಹೋರಾಟಕ್ಕಾಗಿ ಈ ಸಮಾವೇಶ ಎಂದು ಅವರು ವಿವರಿಸಿದರು.

ADVERTISEMENT

‌ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸುವರು. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಶಾಸಕರಾದ ರಿಜ್ವಾನ್ ಹರ್ಷದ್, ಎಚ್. ಆಂಜನೇಯ, ಸಂತೋಷ್ ಎಸ್. ಲಾಡ್, ಶಾಸಕ ದದ್ದಲ್ ಬಸನಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಆರ್. ಧರ್ಮಸೇನ, ಪ್ರಮುಖರಾದ ಹೂಡಿ ಮಂಜುನಾಥ್, ಹನುಮಂತಪ್ಪ ಕಾಕರಗಲ್, ಬಿ.ಎನ್. ಗಂಗಾಧರಪ್ಪ, ಎಸ್. ಫಕ್ಕೀರಪ್ಪ, ಮುಂಡರಗಿ ನಾಗರಾಜ್, ಆರ್. ವೆಂಕಟೇಶ್, ಬಿ.ಎ. ಕಾಟ್ಗೆ, ರತ್ನಮ್ಮ ಪಾಲ್ಗೊಳ್ಳಲಿದ್ದಾರೆ ಎಂದರು.

ವಿಶೇಷ ಆಹ್ವಾನಿತರಾಗಿ ಪ್ರೊ.ಬಿ.ಎಲ್. ರಾಜು, ಡಾ.ಕುಂಸಿ ಉಮೇಶ್, ಕೆ. ದೊರೆರಾಜು, ಶಿವಬಸಪ್ಪ, ಡಾ.ಸಣ್ಣರಾಮ, ಕರಿಯಪ್ಪ ಅತ್ತಿಗುಂದ, ಎಂ. ಶಿವಕುಮಾರ್, ಟಿಪ್ಪುಕಾಸಿಂ ಅಲಿ ಭಾಗವಹಿಸುವರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವಬಸಪ್ಪ, ಅತ್ತಿಗುಂದ ಕರಿಯಪ್ಪ, ಚಂದ್ರಪ್ಪ, ಏಳುಕೋಟಿ, ಚಿಕ್ಕಮರಡಿ ರಮೇಶ್, ಹರಿಗೆ ರವಿ ಇದ್ದರು.

ಮಹಿಳೆ ಮೇಲೆ ಅತ್ಯಾಚಾರ ಯತ್ನ : ಖಂಡನೆ

ತೀರ್ಥಹಳ್ಳಿಯ ಆರಗ ಸಮೀಪದ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಪರಿಶಿಷ್ಟ ಮಹಿಳೆ ಮೇಲಿನ ಮಾನಭಂಗ ಅತ್ಯಾಚಾರ ಯತ್ನವನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಎಂ. ಗುರುಮೂರ್ತಿ ತಿಳಿಸಿದರು.

ಇದು ಅಮಾನವೀಯ ಘಟನೆ. ರಾಜ್ಯವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಗೃಹಸಚಿವ ಆರಗ ಜ್ಞಾನೇಂದ್ರ ಅವರ ಸ್ವಂತ ಊರಿನಲ್ಲೇ ಇಂತಹ ಘಟನೆ ನಡೆದಿದೆ. ಈ ಸಂಬಂಧ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್.ಐ.ಆರ್. ಕೂಡ ದಾಖಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ತಮ್ಮ ಸ್ವಕ್ಷೇತ್ರದಲ್ಲಿಯೇ ಇಂತಹ ಹೇಯ ಕೃತ್ಯ ನಡೆದಿದ್ದರೂ ಗೃಹಸಚಿವರು ಸುಮ್ಮನಿದ್ದಾರೆ. ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ಸಂತ್ರಸ್ತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.