ಸಾಗರ: ‘ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಇಲ್ಲಿನ ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ವಿವಿಧ ರಾಜಕೀಯ ಪಕ್ಷಗಳ, ಸಂಘ ಸಂಸ್ಥೆಗಳ ಪ್ರಮುಖರು ಉಪ ವಿಭಾಗಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
‘ದಾನ, ಧರ್ಮಕ್ಕೆ ಹೆಸರುವಾಸಿಯಾದ, ಮದ್ಯಪಾನ, ಗುಟ್ಕಾದಂತಹ ವ್ಯಸನಗಳನ್ನು ನಿಷೇಧಿಸಿರುವ ಪರಿಶುದ್ಧ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳದ ಹೆಸರಿಗೆ ಕೆಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ಸುಳ್ಳು ಆರೋಪಗಳ ಮೂಲಕ ಕಳಂಕ ಹಚ್ಚಲು ಮುಂದಾಗಿವೆ. ಇದರ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
‘ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹುಗಿಯಲಾಗಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಡೆಸಿರುವ ತನಿಖೆಯಿಂದ ಆರೋಪಗಳು ಸುಳ್ಳು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ತನಿಖೆಯ ಹೆಸರಿನಲ್ಲಿ ನಿತ್ಯ ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರುವ ಕೆಲಸ ನಡೆಯುತ್ತಿರುವುದು ಖಂಡನೀಯ’ ಎಂದು ದೂರಿದರು.
‘ಧರ್ಮಸ್ಥಳ ಕ್ಷೇತ್ರ ಜಾತಿಗಳನ್ನು ಮೀರಿರುವ ಶ್ರದ್ಧಾ ಕೇಂದ್ರವಾಗಿದೆ. ಹಿಂದೂ, ಜೈನ ಸಮಾಜದ ಎಲ್ಲರೂ ಆ ಕ್ಷೇತ್ರಕ್ಕೆ ನಡೆದುಕೊಳ್ಳುತ್ತಾರೆ. ಕೆಲವರು ಆರೋಪ ಮಾಡುತ್ತಿದ್ದಾರೆ ಎಂದು ಇಡೀ ಕ್ಷೇತ್ರವನ್ನು ಅನುಮಾನದಿಂದ ನೋಡುವುದು ಸರಿಯಲ್ಲ’ ಎಂದು ಹೇಳಿದರು.
ನಾಗರಿಕ ಹಿತರಕ್ಷಣಾ ಸಮಿತಿ ಸಂಚಾಲಕ ಎಸ್.ವಿ. ಹಿತಕರ ಜೈನ್, ಬಿಜೆಪಿ ಮುಖಂಡರಾದ ಟಿ.ಡಿ. ಮೇಘರಾಜ್, ಗಣೇಶ್ ಪ್ರಸಾದ್, ಪ್ರಸನ್ನ ಕೆರೆಕೈ, ಮೈತ್ರಿ ಪಾಟೀಲ್, ಸವಿತಾ ವಾಸು, ಮಧುರಾ ಶಿವಾನಂದ್, ಮಲ್ಲಿಕಾರ್ಜುನ ಹಕ್ರೆ, ಪ್ರಶಾಂತ್ ಕೆ.ಎಸ್.ವಿ. ಮಹೇಶ್, ಸಂತೋಷ್ ಶೇಟ್, ಡಾ.ರಾಜನಂದಿನಿ ಕಾಗೋಡು, ಕಾಂಗ್ರೆಸ್ ಮುಖಂಡ ಕಲಸೆ ಚಂದ್ರಪ್ಪ, ಎಂ.ಪಿ. ಲೋಕರಾಜ್ ಜೈನ್, ಶ್ರುತಿ, ಬಬಿತಾ, ನಾಗರಾಜ್ ಬೊಬ್ಬಿಗೆ, ವ.ಶಂ.ರಾಮಚಂದ್ರ ಭಟ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.