ADVERTISEMENT

ಶಿವಮೊಗ್ಗ: ಸೇವಾ ಭದ್ರತೆಗೆ ಆಗ್ರಹಿಸಿ 20ಕ್ಕೆ ವಿಧಾನಸೌಧ ಚಲೋ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 10:17 IST
Last Updated 17 ಸೆಪ್ಟೆಂಬರ್ 2021, 10:17 IST

ಶಿವಮೊಗ್ಗ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು. ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಸೆ. 20 ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ಡಾ.ಎಚ್.ಸೋಮಶೇಖರ್ ಶಿಮೊಗ್ಗಿ ಹೇಳಿದರು.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆ ತಡೆಹಿಡಿದು ಅತಿಥಿ ಉಪನ್ಯಾಸಕರ ಸೇವೆಯಲ್ಲಿ ವಿಲೀನಗೊಳಿಸುವ ಪ್ರಸ್ತಾಪವನ್ನು ಅಧಿವೇಶನದಲ್ಲಿ ಮಂಡಿಸಬೇಕು. ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕು ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಸೆ.20ರಂದು ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆ ಕುರಿತು ಚರ್ಚೆ ನಡೆಯಲಿದೆ. ಸರ್ಕಾರದ ಗಮನ ಸೆಳೆಯಲು ಅಂದು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ 14,564 ಅತಿಥಿ ಉಪನ್ಯಾಸರು ಸೇವೆ ಸಲ್ಲಿಸುತ್ತಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳುತ್ತಿದೆ. ಗುಣಮಟ್ಟದ ಪಾಠ ಪ್ರವಚನಕ್ಕೆ ಸೇವಾ ಅನುಭವ ಹಾಗೂ ಬೋಧನಾ ಕೌಶಲ್ಯ ಹೊಂದಿರುವ ಅತಿಥಿ ಉಪನ್ಯಾಸಕರ ಸೇವಾ ವಿಲೀನ ಅಗತ್ಯ ಎಂದು ಪ್ರತಿಪಾದಿಸಿದರು.

ADVERTISEMENT

ಅತಿಥಿ ಉಪನ್ಯಾಸಕರಿಗೆ ಸೇವೆಗೆ ತಕ್ಕಂತೆ ವೇತನ, ಇಎಸ್ಐ, ಪಿಎಫ್ ನೀಡುತ್ತಿಲ್ಲ. ಸೇವಾ ಭದ್ರತೆ ಬಗ್ಗೆ ಸರ್ಕಾರ ಧ್ವಂಧ್ವ ನಿಲುವು ಅನುಸರಿಸುತ್ತಿದೆ. ವಿಧಾನಪರಿಷತ್ ಸದಸ್ಯರು ಅತಿಥಿ ಉಪನ್ಯಾಸಕರ ಪರವಾಗಿ ಸದನದಲ್ಲಿ ಪ್ರಶ್ನೆಯನ್ನೇ ಕೇಳಿಲ್ಲ. ಕಾನೂನಾತ್ಮಕವಾಗಿ ಶಾಶ್ವತ ಪರಿಹಾರ ನೀತಿ ರೂಪಿಸುವ ಕುರಿತು ಸರ್ಕಾರ ಅಧಿವೇಶನದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ರಾಜೇಶ್‌ ಕುಮಾರ್, ಎಸ್.ಸರ್ವಜ್ಞಮೂರ್ತಿ, ಡಾ.ಪ್ರಶಾಂತ್ ಶರ್ಮಾ, ನಾಗರಾಜ್ ಕಾಗಿನೆಲೆ, ಡಿ.ಟಿ.ಶಿವಪ್ರಸಾದ್, ಹೇಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.