ADVERTISEMENT

ಈಡೇರದ ಲಾರಿ ಚಾಲಕರ ಕನಸು

ಟ್ರಕ್ ಟರ್ಮಿನಲ್: ರಸ್ತೆ ಬದಿಯಲ್ಲೇ ಸಮಯ ಕಳೆಯುವ ಅನಿವಾರ್ಯತೆ, ವಾಹನಗಳಲ್ಲೇ ನಿದ್ದೆ, ವಿಶ್ರಾಂತಿ

ಚಂದ್ರಹಾಸ ಹಿರೇಮಳಲಿ
Published 13 ಮೇ 2022, 2:35 IST
Last Updated 13 ಮೇ 2022, 2:35 IST
ಶಿವಮೊಗ್ಗದ ಶೇಷಾದ್ರಿಪುರಂ ಬಳಿ ರಸ್ತೆ ಬದಿಯಲ್ಲೇ ಸಾಲಾಗಿ ನಿಂತಿರುವ ಲಾರಿಗಳು. –ಪ್ರಜಾವಾಣಿ ಚಿತ್ರ/ ಶಿವಮೊಗ್ಗ ನಾಗರಾಜ್‌
ಶಿವಮೊಗ್ಗದ ಶೇಷಾದ್ರಿಪುರಂ ಬಳಿ ರಸ್ತೆ ಬದಿಯಲ್ಲೇ ಸಾಲಾಗಿ ನಿಂತಿರುವ ಲಾರಿಗಳು. –ಪ್ರಜಾವಾಣಿ ಚಿತ್ರ/ ಶಿವಮೊಗ್ಗ ನಾಗರಾಜ್‌   

ಶಿವಮೊಗ್ಗ: ಜಿಲ್ಲೆಯಲ್ಲಿ ಸುಸಜ್ಜಿತವಾದ ಟ್ರಕ್ ಟರ್ಮಿನಲ್ ನಿರ್ಮಿಸುವ ಕನಸು ದಶಕಗಳು ಕಳೆದರೂ ನನಸಾಗಿಲ್ಲ. ಜಿಲ್ಲೆಗೆ ಸರಕು ಹೊತ್ತು ತರುವ ಲಾರಿಗಳ ಚಾಲಕರು ರಸ್ತೆ ಬದಿಯಲ್ಲೇ ಸಮಯ ಕಳೆಯುತ್ತಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ ಅವರು 2008–11ರ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಟ್ರಕ್ ಟರ್ಮಿನಲ್ ನಿರ್ಮಿಸುವ ಪ್ರಸ್ತಾಪಕ್ಕೆ ಮತ್ತೆ ಜೀವ ಬಂದಿತ್ತು. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಸಾಗರ ರಸ್ತೆ, ಸೋಮಿನಕೊಪ್ಪ ರಸ್ತೆಯಲ್ಲಿ ಸ್ಥಳ ಹುಡುಕಾಟವೂ ನಡೆದಿತ್ತು. ಆದರೆ, ಯೋಜನೆ ನನೆಗುದಿಗೆ ಬಿದಿತ್ತು.

ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷರಾಗಿ ಡಿ.ಎಸ್. ವೀರಯ್ಯ ಅಧಿಕಾರ ವಹಿಸಿಕೊಂಡ ನಂತರ ಶಿವಮೊಗ್ಗಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳ ಸಭೆ ನಡೆಸಿದ್ದರು. ಶಿವಮೊಗ್ಗ ಸುತ್ತಮುತ್ತ ಸೂಕ್ತ ಜಾಗ ಗುರುತಿಸಿದರೆ ಟರ್ಮಿನಲ್ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿಗೆ ಅನುದಾನ ಒದಗಿಸುವ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿ, ಆರ್‌ಐ, ಗ್ರಾಮ ಲೆಕ್ಕಿಗರು ಸೇರಿ ತಳಮಟ್ಟದ ಅಧಿಕಾರಿಗಳ ಸಭೆ ಕರೆದು
ಶಿವಮೊಗ್ಗ ಸುತ್ತಮುತ್ತ ಜಾಗ ಗುರುತಿಸುವಂತೆ ಸೂಚಿಸಿದ್ದರು. ಸರ್ಕಾರಿ ಜಮೀನು ಗುರುತಿಸುವುದು ಉತ್ತಮ. ಅದು ಲಭ್ಯವಿಲ್ಲದಿದ್ದರೆ ನಗರೋತ್ಥಾನ
ಅಥವಾ ಕೆಐಎಡಿಬಿ ಜಾಗವನ್ನು ಗುರುತಿಸಬೇಕು. ರಾಷ್ಟ್ರೀಯ ಹೆದ್ದಾರಿ ಸುತ್ತಮುತ್ತ 2ರಿಂದ 5 ಕಿ.ಮೀ. ಒಳಗೆ ಜಾಗವಿರಬೇಕು. ತಹಶೀಲ್ದಾರರು, ನಗರಾಭಿವೃದ್ಧಿ ಮತ್ತು ಕೆಎಐಡಿಬಿ ಅಧಿಕಾರಿಗಳು ಜಾಗ ಗುರುತಿಸಲು ಸಹಕರಿಸಬೇಕು ಎಂದು ಸೂಚಿಸಿದ್ದರು.

ADVERTISEMENT

ಭರವಸೆಯ ನಂತರ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘ ಜಾಗ ಗುರುತಿಸಲು ಸಾಕಷ್ಟು ಕಾಳಜಿ ವಹಿಸಿತ್ತು. ಮಲವಗೊಪ್ಪ ಬಳಿಯ ತುಂಗಭದ್ರಾ ಸಕ್ಕರೆ ಕಾರ್ಖಾನೆಯ 50 ಎಕರೆಯಲ್ಲಿ ಟರ್ಮಿನಲ್‌ ನಿರ್ಮಿಸಲು ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಹಲವು ಕಾರಣಗಳಿಗಾಗಿ ಆ ಜಾಗ ಸಿಗುವುದೂ ಅನುಮಾನವಾಗಿದೆ.

ಬೆಂಗಳೂರು, ಮೈಸೂರು ಸೇರಿ ರಾಜ್ಯದಲ್ಲಿ ಕೆಲವೆಡೆ ಈಗಾಗಲೇ ಸುಸಜ್ಜಿತವಾದ ಟ್ರಕ್ ಟರ್ಮಿನಲ್‍ಗಳ ಸ್ಥಾಪನೆಯಾಗಿದೆ.ಹೊಸಪೇಟೆ, ಹುಬ್ಬಳ್ಳಿ, ಧಾರವಾಡ, ಬೆಂಗಳೂರಿನ ಯಶವಂತಪುರ ಸೇರಿ ಹಲವೆಡೆ ಸುಸಜ್ಜಿತ ಟರ್ಮಿನಲ್‍ಗಳು ಇವೆ. ಹಲವೆಡೆ ಇನ್ನೂ ಆಗಬೇಕಿದೆ. ಟ್ರಕ್ ಟರ್ಮಿನಲ್‍ಗಳ ಸ್ಥಾಪನೆಯಿಂದ ಅಪಘಾತಗಳು ಕಡಿಮೆ ಯಾಗುತ್ತದೆ. ವಾಯು ಮಾಲಿನ್ಯ ಮತ್ತು ದಟ್ಟಣೆ ಕೂಡ ಕಡಿಮೆ ಆಗುತ್ತದೆ. ಜತೆಗೆ, ಉದ್ಯೋಗಾವಕಾಶದೊಂದಿಗೆ ಮಿನಿ ಟೌನ್‍ಶಿಪ್ ನಿರ್ಮಾಣ ಆಗುತ್ತದೆ. ಟ್ರಕ್ ಟರ್ಮಿನಲ್‍ನಿಂದ ಇಂತಹ ಹಲವು ಅನುಕೂಲಗಳು ದೊರಕಲಿವೆ. ಟರ್ಮಿನಲ್ ಇಲ್ಲದಿದ್ದರೆ ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ಚಾಲಕರು ರಸ್ತೆ ಬದಿ ಲಾರಿಗಳನ್ನು ನಿಲ್ಲಿಸುತ್ತಾರೆ. ಮುಂಜಾವಿನಲ್ಲಿ ಟ್ರಕ್ ತೆರವುಗೊಳಿಸುವ ಅನಿವಾರ್ಯತೆಯಿಂದ ಬೇಗ ಹೊರಡುವುದರಿಂದ ಅಪಘಾತಗಳ ಸಂಖ್ಯೆ ಸಹ ಹೆಚ್ಚುತ್ತದೆ.

ಟರ್ಮಿನಲ್‌ಗೆ ಕನಿಷ್ಠ 25 ಎಕರೆ ಅಗತ್ಯ

ಸಂಚಾರ ದಟ್ಟಣೆ, ಮಾಲಿನ್ಯ ನಿಯಂತ್ರಣ ಹಾಗೂ ಅಪಘಾತ ನಿಯಂತ್ರಿಸುವಲ್ಲಿ ಟ್ರಕ್ ಟರ್ಮಿನಲ್‌ಗಳ ಪಾತ್ರ ಮಹತ್ವದ್ದಾಗಿದೆ. ಟ್ರಕ್‍ ಟರ್ಮಿನಲ್‌ ನಿರ್ಮಿಸಲು ನಗರಕ್ಕೆ ಹೊಂದಿಕೊಂಡ 25–30 ಎಕರೆ ಜಾಗ ಅಗತ್ಯವಿದೆ. ಗೋಮಾಳ, ಕಂದಾಯ ಭೂಮಿ ದೊರೆಯದಿದ್ದಲ್ಲಿ ಖಾಸಗಿ ವ್ಯಕ್ತಿಗಳಿಂದ ಭೂಮಿ ಖರೀದಿಸಬೇಕಿದೆ. ಖಾಸಗಿ ಮಾಲೀಕರು ಅಥವಾ ಹೂಡಿಕೆದಾರರ ಮಧ್ಯೆ ಒಪ್ಪಂದ ಮಾಡಿಕೊಂಡು ಯೋಜನೆ ಕಾರ್ಯಗತಗೊಳಿಸಬಹುದು. ವಾಹನ ಚಾಲಕರ ವಿಶ್ರಾಂತಿ ಕೊಠಡಿ, ವೇ ಬ್ರಿಡ್ಜ್, ಕ್ಯಾಂಟೀನ್, ಆಟೊಮೊಬೈಲ್, ಶೌಚಾಲಯ, ಪೆಟ್ರೋಲ್ ಬಂಕ್, ಔಷಧ ಅಂಗಡಿಗಳು, ಲಾಜಿಸ್ಟಿಕ್ ಸೆಂಟರ್, ಥಿಯೇಟರ್ ಇತ್ಯಾದಿ ಸೌಲಭ್ಯಗಳು ಟರ್ಮಿನಲ್‍ ಒಳಗೆ ಇರಲಿವೆ. ಕಟ್ಟಡ ನಿರ್ಮಾಣ, ಮೂಲಸೌಕರ್ಯಗಳಿಗೆ ನಿಗಮದಲ್ಲಿ ಸಾಕಷ್ಟು ಅನುದಾನವಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಟ್ರಕ್‍ ಟರ್ಮಿನಲ್‍ಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲೂ ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ ಎನ್ನುತ್ತಾರೆ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್. ವೀರಯ್ಯ.

ವಿಶ್ರಾಂತಿ, ಶೌಚಾಲಯಕ್ಕೂ ಪರದಾಟ

ಜಿಲ್ಲೆಗೆ ಪ್ರತಿ ನಿತ್ಯ ಸರಾಸರಿ 500ಕ್ಕೂ ಹೆಚ್ಚು ಲಾರಿಗಳು ಬಂದು ಹೋಗುತ್ತವೆ. ಸರಕು ಇಳಿಸಿದ ನಂತರ ರೈಲ್ವೆ ನಿಲ್ದಾಣದ ಸಮೀಪ, ಸಾಗರ ರಸ್ತೆ, ಭದ್ರಾವತಿ ರಸ್ತೆ ಮತ್ತಿತರ ಸ್ಥಳಗಳಲ್ಲಿ ನಿಲುಗಡೆ ಮಾಡಿ ಬಹುತೇಕ ಚಾಲಕರು ವಿಶ್ರಾಂತಿ ಪಡೆಯುತ್ತಾರೆ. ದೂರದ ಜಿಲ್ಲೆ, ಹೊರ ರಾಜ್ಯಗಳಿಂದ ಬಂದ ಚಾಲಕರು ಸ್ನಾನ ಮಾಡಲು, ಮುಖ ತೊಳೆಯಲು, ಶೌಚದ ಬಳಕೆಗೂ ಪರದಾಡಬೇಕಿದೆ. ರಸ್ತೆ ಬದಿಗಳಲ್ಲಿ ನಿಲ್ಲಿಸುವ ಕಾರಣ ಸಂಚಾರ ಕಿರಿಕಿರಿ ಅನುಭವಿಸುವಂತಾಗಿದೆ. ಪೊಲೀಸರಿಗೆ ಎಷ್ಟೋ ಬಾರಿ ದಂಡ ಕಟ್ಟಿದ್ದಾರೆ.

ಕೋಟ್‌...

ಸರಕು ಹೊತ್ತು ತರುವ ಲಾರಿಗೆ ನಿಲುಗಡೆ, ಲಾರಿ ಚಾಲಕರ ವಿಶ್ರಾಂತಿಗೆ ಸುಸಜ್ಜಿತ ಟರ್ಮಿನಲ್‌ ಬೇಕಿದೆ. ಹಲವು ವರ್ಷಗಳಿಂದ ಬೇಡಿಕೆ ಇದ್ದರೂ, ಈಡೇರಿಲ್ಲ. ನಿಗಮದಲ್ಲಿ ಸಾಕಷ್ಟು ಹಣವಿದ್ದರೂ ಜಾಗವಿಲ್ಲ. ಜಿಲ್ಲೆಗೆ ಹಲವು ಯೋಜನೆಗಳನ್ನು ತಂದ ಸಂಸದ ರಾಘವೇಂದ್ರ ಅವರು ಇತ್ತ ಗಮನಹರಿಸಬೇಕು.

ಎನ್‌. ಗೋಪಿನಾಥ್‌, ಅಧ್ಯಕ್ಷರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ

ಟ್ರಕ್‌ ಟರ್ಮಿನಲ್‌ ನಗರ ಪ್ರದೇಶದಿಂದ ದೂರದಲ್ಲಿ ನಿರ್ಮಿಸಿದರೆ ಪ್ರಯೋಜನವಿಲ್ಲ. ಹೆದ್ದಾರಿ ಇಲ್ಲವೇ, ನಗರಕ್ಕೆ ಹೊಂದಿಕೊಂಡು ಇರಬೇಕು. ನಗರದ ಒಳಗೆ ಸೂಕ್ತ ಜಾಗದ ಕೊರತೆಯ ಕಾರಣ ನಿರ್ಮಾಣ ವಿಳಂಬವಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆಯಲ್ಲಿ ಹರಿಗೆ ಬಳಿ ಸ್ಥಳ ಗುರುತಿಸಲಾಗಿದೆ. ಶೀಘ್ರ ಅನುಷ್ಠಾನಗೊಳ್ಳುವ ಭರವಸೆ ಇದೆ.

ಎಸ್‌.ಎಸ್‌. ಜ್ಯೋತಿಪ್ರಕಾಶ್, ಗೌರವಾಧ್ಯಕ್ಷ, ಜಿಲ್ಲಾ ಲಾರಿ ಮಾಲಿಕರ ಸಂಘ

ಟ್ರಕ್‌ ಟರ್ಮಿನಲ್‌ ನಿರ್ಮಾಣದ ಜತೆಗೆ ಲಾರಿ ಮಾಲೀಕರು ಅನುಭವಿಸುತ್ತಿರುವ ಹಲವು ಸಮಸ್ಯೆಗಳ ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಎಲ್ಲ ಬೇಡಿಕೆಗಳನ್ನೂ ಕಾಲಮಿತಿಯ ಒಳಗೆ ಈಡೇರಿಸಬೇಕು.

ತಲ್ಕಿನ್ ಅಹಮದ್, ಭೋಜರಾಜ್, ಇಜಾಜ್ ಅಹಮದ್, ಜಗದೀಶ್, ಸಮೀವುಲ್ಲಾ. ಲಾರಿ ಮಾಲೀಕರ ಒಕ್ಕೂಟದ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.