ಶಿವಮೊಗ್ಗ: ಲಕ್ಕವಳ್ಳಿಯ ಭದ್ರಾ ಜಲಾಶಯದ ಹೊಸ್ತಿಲಲ್ಲಿನ ಬಲದಂಡೆ ನಾಲೆಯಿಂದ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 1,236 ಗ್ರಾಮಗಳಿಗೆ ಹಾಗೂ ಹೊಸದುರ್ಗ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಜಲಜೀವನ್ ಮಿಷನ್ ಅಡಿ ಕೈಗೆತ್ತಿಕೊಂಡಿರುವ ಕಾಮಗಾರಿ ಈಗ ವಿವಾದಕ್ಕೆ ಕಾರಣವಾಗಿದೆ.
‘ಬಲದಂಡೆಯನ್ನು ಸೀಳಿ ನೀರು ಒಯ್ಯಲಾಗುತ್ತಿದೆ. ಇದರಿಂದ ಕಾಲುವೆಯ ನೀರಿನ ಸಹಜ ಹರಿವಿಗೆ ಅಡ್ಡಿಯಾಗಲಿದೆ. ಆರಂಭದಲ್ಲಿಯೇ ನೀರಿನ ಹರಿವಿನ ವೇಗ ಕಡಿಮೆ ಆದಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ, ಹೊನ್ನಾಳಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕೊನೆಯ ಭಾಗದವರೆಗೆ ನೀರು ಸರಾಗವಾಗಿ ಹರಿಯುವುದಿಲ್ಲ’ ಎಂಬುದು ರೈತ ಮುಖಂಡರ ಆರೋಪ.
ಹೀಗಾಗಿ ಲಕ್ಕವಳ್ಳಿಯ ನೀರಾವರಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಕಚೇರಿ ಎದುರು ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಧರಣಿ ಆರಂಭಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ಜಲಾಶಯದಿಂದ ಹೊಸದುರ್ಗ, ಕಡೂರು, ಚಿಕ್ಕಮಗಳೂರು, ತರೀಕೆರೆ ತಾಲ್ಲೂಕು ಸೇರಿದಂತೆ ಬಯಲು ಸೀಮೆಯ ಹಳ್ಳಿಗಳಿಗೆ ನಿತ್ಯ 30 ಕ್ಯುಸೆಕ್‌ನಂತೆ ವರ್ಷವಿಡೀ ಕುಡಿಯುವ ನೀರು ಕೊಡಲು 1 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ.
ಭದ್ರಾ ಜಲಾಶಯದ ಮುಂಭಾಗದ ಪವರ್‌ಹೌಸ್ ಬಳಿ ಬಲದಂಡೆ ಕಾಲುವೆಯಿಂದ ಅಷ್ಟು ಪ್ರಮಾಣದ ನೀರು ಪಡೆದು ಅಲ್ಲಿಯೇ ಸ್ವಲ್ಪ ದೂರದಲ್ಲಿ ಎಂಟು ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುತ್ತದೆ. ಅಲ್ಲಿಂದ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಪೈಪ್‌ಲೈನ್ ಮೂಲಕ ನೀರು ಕೊಡುವುದು ಈ ಯೋಜನೆಯ ಉದ್ದೇಶ. ₹1,600 ಕೋಟಿ ವೆಚ್ಚದ ಈ ಯೋಜನೆಗೆ 2020ರಲ್ಲಿ ಮಂಜೂರಾತಿ ಸಿಕ್ಕಿದೆ. ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾಮಗಾರಿ ಕೈಗೆತ್ತಿಕೊಂಡಿದೆ.
‘ನೀರಾವರಿ ಉದ್ದೇಶಕ್ಕೆ ಜಲಾಶಯದಿಂದ ಸದ್ಯ 61.5 ಟಿಎಂಸಿ ಅಡಿ ನೀರು ಕೊಡಲಾಗುತ್ತಿದೆ. ಅದರಲ್ಲಿ ಬಲದಂಡೆ ನಾಲೆಗೆ ನಿತ್ಯ 2,650 ಕ್ಯುಸೆಕ್ ನೀರು ಹರಿಯುತ್ತಿದೆ. ಈಗ ಅದರೊಂದಿಗೆ ಕುಡಿಯುವ ನೀರಿನ ಉದ್ದೇಶದ 30 ಕ್ಯುಸೆಕ್ ಸೇರಿಸಿ ಹರಿಸಲಾಗುತ್ತದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಯೊಬ್ಬರು ಹೇಳುತ್ತಾರೆ.
ಬಲದಂಡೆ ನಾಲೆ ನಿತ್ಯ 3,100 ಕ್ಯುಸೆಕ್‌ವರೆಗೂ ನೀರು ಒಯ್ಯುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಕೊನೆಯ ಭಾಗದ ರೈತರಿಗೆ ತೊಂದರೆ ಆಗುವುದಿಲ್ಲ. ಬಿಆರ್‌ಪಿಯಲ್ಲಿ ಮಾತ್ರವಲ್ಲ ಮುಂದೆ ಇದೇ ನಾಲೆಯಿಂದ ನೀರು ಪಡೆದು 15 ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸಲಾಗಿದೆ. ಆಗಲೂ ಕೊನೆಯ ಭಾಗದವರಿಗೆ ತೊಂದರೆ ಆಗಿಲ್ಲ. ಈಗಲೂ ಆಗುವುದಿಲ್ಲ. ಅನಗತ್ಯ ಆತಂಕ ಬೇಡ ಎನ್ನುತ್ತಾರೆ.
‘ಈಗ ನಾಲೆ ಸೀಳುತ್ತಿರುವ ಜಾಗ ಗುಡ್ಡದ ಪ್ರದೇಶ. ಎತ್ತರದಿಂದ ನೀರು ವೇಗವಾಗಿ ಕೆಳಗೆ ಹರಿಯುತ್ತದೆ. ಅಲ್ಲಿ ಸೀಳಿದರೆ ನೀರಿನ ಹರಿವಿನ ವೇಗ ಕಡಿಮೆ ಆಗುತ್ತದೆ. ಕಾಲುವೆ ಒಡೆದು ನೀರು ತೆಗೆದುಕೊಳ್ಳಲಿ ಎಂದು ಯೋಜನೆಯಲ್ಲಿ ಎಲ್ಲಿಯೂ ಹೇಳಿಲ್ಲ. ಗುತ್ತಿಗೆದಾರರ ಸೇವೆಗೆ ಇದನ್ನು ರೂಪಿಸಲಾಗಿದೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಬಲದಂಡೆ ನಾಲೆಯಲ್ಲಿ ವರ್ಷದ 9 ತಿಂಗಳು ಮಾತ್ರ ನೀರು ಹರಿಯುತ್ತದೆ. ಉಳಿದ ಮೂರು ತಿಂಗಳು ತಲಾ 700 ಎಚ್‌ಪಿ ಸಾಮರ್ಥ್ಯದ ಎರಡು ಪಂಪ್‌ಗಳನ್ನು ಬಳಸಿ ಜಲಾಶಯದಿಂದಲೇ ನೇರವಾಗಿ ಶುದ್ಧೀಕರಣ ಘಟಕಕ್ಕೆ ನೀರು ಒಯ್ಯಲಾಗುತ್ತಿದೆ. ಭದ್ರಾ ಬಲದಂಡೆ ಕಾಲುವೆ ಸೀಳುವ ಬದಲು ವರ್ಷವಿಡೀ ಜಲಾಶಯದಿಂದ ನೇರವಾಗಿ ನೀರು ಒಯ್ಯಲಿ ಎಂಬುದು ಧರಣಿ ನಿರತ ರೈತರ ಒತ್ತಾಯ.
ಪಂಪ್‌ಗಳ ಮೂಲಕ ನೇರವಾಗಿ ನೀರು ಒಯ್ಯಲು ನಿತ್ಯ ₹3 ಲಕ್ಷದಂತೆ ತಿಂಗಳಿಗೆ ₹ 90 ಲಕ್ಷ ವಿದ್ಯುತ್ ಬಿಲ್ ವೆಚ್ಚವಾಗಲಿದೆ. ಅದು ದುಬಾರಿ ಆಗುವುದರಿಂದ ಕಾಲುವೆಯಿಂದ ನೀರು ಒಯ್ಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕಾಲುವೆಯಿಂದ ನೀರು ಒಯ್ದರೆ ಕೊನೆಯ ಭಾಗದ ರೈತರಿಗೆ ತೊಂದರೆ ಆಗುವುದಿಲ್ಲ. ನೀರಾವರಿ ಇಲಾಖೆ ಎನ್‌ಒಸಿ ಕೊಟ್ಟ ನಂತರವೇ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ರೈತರು ಆತಂಕಪಡುವುದು ಬೇಡಬಸವನಗೌಡ ಆರ್‌ಡಿಪಿಆರ್ ಎಇಇ ಚಿತ್ರದುರ್ಗ
ಜಲಾಶಯದಿಂದ ಕುಡಿಯಲು 7.5 ಟಿಎಂಸಿ ಅಡಿ ನೀರು ಮೀಸಲಿಡಲಾಗಿದೆ. ಅದನ್ನು ಬಯಲು ಸೀಮೆಯ ಹಳ್ಳಿಗಳಿಗೆ ಒಯ್ಯಲು ನಮ್ಮ ಅಭ್ಯಂತರವಿಲ್ಲ. ಆದರೆ ನಾಲೆ ಸೀಳಿ ನೀರು ಒಯ್ಯುವ ವಿಧಾನಕ್ಕೆ ವಿರೋಧವಿದೆಕೆ.ಟಿ.ಗಂಗಾಧರ್ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ
ರೈತ ಸಂಘ ಹಾಗೂ ಕೊನೆಯ ಭಾಗದ ರೈತರ ವಿರೋಧದ ಹಿನ್ನೆಲೆಯಲ್ಲಿ ಗೊಂದಲ ಪರಿಹರಿಸಲು ಜಲಜೀವನ್ ಮಿಷನ್ ಅನುಷ್ಠಾನ ಸಮಿತಿಯಿಂದ ಜೂನ್ 23ರಂದು ಲಕ್ಕವಳ್ಳಿಯ ನೀರಾವರಿ ಇಲಾಖೆ ಸೂಪರಿಟೆಂಡೆಂಟ್ ಎಂಜಿನಿಯರ್ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಮೂರು ಜಿಲ್ಲೆಗಳ ಶಾಸಕರು ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.