ADVERTISEMENT

ಶಿವಮೊಗ್ಗ: ಆತಂಕ ಸೃಷ್ಟಿಸಿದ ಹಳೆ ಸೊರಬ

​ಪ್ರಜಾವಾಣಿ ವಾರ್ತೆ
Published 21 ಮೇ 2020, 13:23 IST
Last Updated 21 ಮೇ 2020, 13:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಹಳೇ ಸೊರಬದ 60 ವರ್ಷದ ಮಹಿಳೆಗೂ (ಪಿ–1498) ಕೊರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. ಕೆಲವು ದಿನಗಳ ಹಿಂದೆ ಅವರಿಗೆ ತೀವ್ರತರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹೃದಯ ಸಂಬಂಧಿ ಕಾಯಿಲೆಯೂ ಇದ್ದ ಕಾರಣ ನಾಲ್ಕು ದಿನ ಚಿಕಿತ್ಸೆ ನೀಡಿದ ಬಳಿಕ ಮನೆಗೆ ಕಳಹಿಸಿದ್ದರು. ಮನೆಗೆ ಕಳುಹಿಸುವಾಗ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ವರದಿ ಬರುತ್ತಿದ್ದಂತೆ ವೈದ್ಯ ಸಮೂಹ, ಆಸ್ಪತ್ರೆ ಸಿಬ್ಬಂದಿ, ಅಲ್ಲಿನ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ಅವರಿಗೆ ಕೊರೊನಾ ಇರಬಹುದು ಎಂದು ಯಾರೂ ಊಹಿಸಿರಲಿಲ್ಲ. ಮೊದಲಿನಿಂದಲೂ ಹೃದಯ ಹಾಗೂ ಉಸಿರಾಟದ ಸಮಸ್ಯೆ ಇದ್ದ ಕಾರಣ ಅಂಥ ಅನುಮಾನವೂ ಬಂದಿರಲಿಲ್ಲ. ಹಾಗಾಗಿ, ಅಲ್ಲಿನ ವೈದ್ಯರು, ಸಿಬ್ಬಂದಿ ಹೆಚ್ಚಿನ ಮುಂಜಾಗ್ರತೆ ತೆಗೆದುಕೊಂಡಿರಲಿಲ್ಲ. ಅದೇ ಕಾರಣಕ್ಕೆ ಮನೆಗೆ ಕಳುಹಿಸಿದ್ದರು. ಈಗ ಮಹಿಳೆಯ ಕುಟುಂಬದ ಎಲ್ಲ ಸದಸ್ಯರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಮನೆಯ ಸುತ್ತ 100 ಮೀಟರ್ ಲಾಕ್‌ಡೌನ್ ಮಾಡಲಾಗಿದೆ. ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯನ್ನು ನಿಗಾದಲ್ಲಿ ಇಡಲಾಗಿದೆ.

ADVERTISEMENT

ಮನೆಯಿಂದ ಎಲ್ಲೂ ಹೊರಗೆ ಹೋಗದ ಮಹಿಳೆಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ಯಕ್ಷ ಪ್ರಶ್ನೆ. ಪೊಲೀಸರು, ತಾಲ್ಲೂಕು ಆಡಳಿತ ಸೋಂಕಿನ ಮೂಲ ಹುಡುಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.