ಶಿವಮೊಗ್ಗ: ಮಲೆನಾಡು ಪ್ರದೇಶವಾಗಿರುವ ಶಿವಮೊಗ್ಗ ಜಿಲ್ಲೆ ಹೊಸ ವರ್ಷದ ನವ ಮನ್ವಂತರಕ್ಕೆ ಕಾಲಿಡುತ್ತಿದೆ. ಈ ಹೊತ್ತಿನಲ್ಲಿ, 2024ರಲ್ಲಿ ಜಿಲ್ಲೆಯಲ್ಲಿ ನಡೆದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ದೈನಂದಿನ ಸಂಗತಿಗಳತ್ತ ಇಣುಕು ನೋಟ ಬೀರಿದರೆ ಹತ್ತಾರು ಬದಲಾವಣೆಗಳನ್ನು ಇಲ್ಲಿಯ ಜನರು ಸಾಕ್ಷೀಕರಿಸಿದ್ದಾರೆ. 2025ಕ್ಕೆ ಹೆಜ್ಜೆ ಇಡುವ ಈ ಸಂಕ್ರಮಣ ಘಟ್ಟದಲ್ಲಿ ನಡೆದು ಬಂದ ಹಾದಿಯಲ್ಲಿ ಮೂಡಿದ ಗುರುತುಗಳನ್ನು ಅವಲೋಕಿಸುವ ಕಾರ್ಯವನ್ನು ‘ಪ್ರಜಾವಾಣಿ’ ಮಾಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಸಂತ್ರಸ್ತರ ಭೂಮಿ ಹಕ್ಕಿನ ಸಮಸ್ಯೆ, ಕಸ್ತೂರಿ ರಂಗನ್ ವರದಿ ಜಾರಿ, ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶದ ಮಾತು 2024ರಲ್ಲಿ ಹೆಚ್ಚು ಸದ್ದು ಮಾಡಿದವು. ಕಸ್ತೂರಿ ರಂಗನ್ ವರದಿಯನ್ನು ಸರ್ಕಾರ ತಿರಸ್ಕರಿಸಿರುವ ಕಾರಣ ಸಂತ್ರಸ್ತರ ಹಕ್ಕಿನ ಸಮಸ್ಯೆ ಹಾಗೂ ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಮಾತು ಹೊಸ ವರ್ಷದಲ್ಲೂ ಮುಂದುವರೆಯಲಿವೆ. ಅದರ ಮಧ್ಯೆ ಕಳೆದ 12 ತಿಂಗಳಲ್ಲಿ ಘಟಿಸಿದ ಕೆಲವು ಸಂಗತಿಗಳತ್ತ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ (ವಿಜೆಎನ್‌ಎಲ್) ಮುಂದಾಗಿತ್ತು. ಮಲೆನಾಡಿನಲ್ಲಿ ವಿರೋಧ ವ್ಯಕ್ತವಾದ ಕಾರಣ ಸರ್ಕಾರ ಆ ಪ್ರಸ್ತಾವದಿಂದ ಹಿಂದಕ್ಕೆ ಸರಿಯಿತು. ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನದ ನಂತರ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ನೀರಿನಲ್ಲಿ ಬೆಂಗಳೂರು ನಗರಕ್ಕೆ ಪಾಲು ಲಭಿಸುವುದಿಲ್ಲ. ಪ್ರಸ್ತುತ ಅಲ್ಲಿನ ಜಲಮಂಡಳಿಯು ಬೆಂಗಳೂರಿನ ಬೇಡಿಕೆಯ ಶೇ 62ರಷ್ಟು ನೀರನ್ನು (ಗೃಹ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಸೇರಿ ನಿತ್ಯ 145 ಕೋಟಿ ಲೀಟರ್) ಒದಗಿಸುತ್ತಿದೆ. 2031ರ ಹೊತ್ತಿಗೆ ಈ ಬೇಡಿಕೆ 354 ಕೋಟಿ ಲೀಟರ್‌ಗಳಷ್ಟಾಗಲಿದೆ ಎಂಬ ಅಂದಾಜು ಇರುವುದರಿಂದ ಸರ್ಕಾರ ಪರ್ಯಾಯ ನೀರಿನ ಮೂಲ ಅರಸಲು ಮುಂದಾಗಿತ್ತು.
ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿನ ನದಿಮಟ್ಟದ ಸ್ಲುಸ್ ಗೇಟ್‌ನಲ್ಲಿ ಆಗಿದ್ದ ನೀರಿನ ಸೋರಿಕೆ ರಾಜ್ಯದ ಗಮನ ಸೆಳೆದಿತ್ತು. ನೀರು ಜಲಾಶಯದ ಕ್ರಸ್ಟ್‌ಗೇಟ್‌ಗಿಂತ ಕೆಳಗೆ ಇದ್ದುದ್ದರಿಂದ ನದಿ ಮಟ್ಟದಲ್ಲಿನ ಸ್ಲುಸ್ ಗೇಟ್ ತೆರೆಯಲಾಗಿತ್ತು. 15 ವರ್ಷಗಳ ನಂತರ ಆಪರೇಟ್ ಆಗಿದ್ದರಿಂದ ಗೇಟ್ ತೆರೆಯುವಾಗ ಹಾನಿಗೀಡಾಗಿತ್ತು. ಸೋರಿಕೆ ತಡೆಗೆ ನೀರಿನ ಆಳದಲ್ಲಿ ಕಾರ್ಯಾಚರಣೆ ನಡೆಸಿದ್ದ ಕರ್ನಾಟಕ ನೀರಾವರಿ ನಿಗಮದ ಜೊತೆ ಕೇಂದ್ರದ ಡ್ಯಾಂ ಸೇಫ್ಟಿ ರಿವೀವ್ ಪ್ಯಾನಲ್ (ಡಿಎಸ್‌ಆರ್‌ಪಿ) ಹಾಗೂ ಡ್ಯಾಂ ಸೇಫ್ಟಿ ಆರ್ಗನೈಸೇಷನ್‌ನ (ಡಿಎಸ್‌ಒ) ತಜ್ಞರು ಕೈ ಜೋಡಿಸಿ ಗೇಟ್ ಸರಿಪಡಿಸಿದ್ದರು.
ಅಕ್ಕಪಕ್ಕದಲ್ಲಿ ಹೆಣ್ಣಾನೆಗಳ ಸಾಂಗತ್ಯ ಇಲ್ಲದೇ ಗಂಡಾನೆ ಸಾಗರನ ಹೆಗಲ ಮೇಲೆ ಅಂಬಾರಿ ಹೊರಿಸುವ ಸಾಹಸಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದರಿಂದ ಈ ಬಾರಿಯ ಶಿವಮೊಗ್ಗ ದಸರಾದ ಅಂಬಾರಿ ಮೆರವಣಿಗೆ ನಾಡಿನ ಗಮನ ಸೆಳೆದಿತ್ತು.
ಪ್ರತೀ ವರ್ಷ ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಸಾಗರನ ಅಕ್ಕಪಕ್ಕದಲ್ಲಿ ಹೆಣ್ಣಾನೆಗಳಾದ ನೇತ್ರಾವತಿ, ಭಾನುಮತಿ ಇಲ್ಲವೇ ಕುಂತಿ ಹೆಜ್ಜೆ ಹಾಕುತ್ತಿದ್ದವು. ಆದರೆ, ಈ ಬಾರಿ ಆ ಮೂರು ಆನೆಗಳ ಹೆರಿಗೆ ಆಗಿದ್ದರಿಂದ ದಸರಾ ಮೆರವಣಿಗೆಗೆ ಕಳುಹಿಸಲು ಅರಣ್ಯ ಇಲಾಖೆ ಅನುಮತಿ ಕೊಟ್ಟಿರಲಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾಲಿ ಸಂಸದ ಬಿ.ವೈ.ರಾಘವೇಂದ್ರ ದಾಖಲೆಯ ಅಂತರದೊಂದಿಗೆ ಸತತ ನಾಲ್ಕನೇ ಬಾರಿಗೆ ಗೆಲುವಿನ ನಗೆ ಬೀರಿದ್ದರು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜಕುಮಾರ್ ಅವರನ್ನು 2,43,715 ಮತಗಳ ಅಂತರದಿಂದ ಸೋಲಿಸಿದ್ದರು. ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯ ಅಭಿವೃದ್ಧಿ, ಕಾಂಗ್ರೆಸ್‌ನ ಗ್ಯಾರಂಟಿ ಹಾಗೂ ಕೆ.ಎಸ್.ಈಶ್ವರಪ್ಪ ಅವರ ಹಿಂದುತ್ವದ ನಡುವಿನ ಪೈಪೋಟಿ ಇಡೀ ರಾಜ್ಯದ ಗಮನ ಸೆಳೆದಿತ್ತು. ಕೊನೆಗೆ ಮಲೆನಾಡಿನ ಮತದಾರ ‘ಅಭಿವೃದ್ಧಿ’ ಮಂತ್ರಕ್ಕೆ ಭರ್ಜರಿ ಗೆಲುವಿನ ಮುದ್ರೆ ಒತ್ತಿದ್ದ. ಆ ಮೂಲಕ ಶಿವಮೊಗ್ಗ ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿತ್ತು.
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಭರ್ಜರಿ ಗೆಲುವು ಸಾಧಿಸಿದ್ದರು. ಕರಾವಳಿ–ಮಲೆನಾಡು ಭಾಗದ ಆರು ಜಿಲ್ಲೆಗಳನ್ನು ಒಳಗೊಂಡಿರುವ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಕಾಂಗ್ರೆಸ್‌ನ ಆಯನೂರು ಮಂಜುನಾಥ್, ರಾಷ್ಟ್ರಭಕ್ತರ ಬಳಗದ ಬೆಂಬಲದಿಂದ ಸ್ಪರ್ಧಿಸಿದ್ದ ರಘುಪತಿ ಭಟ್ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ ತೀವ್ರ ನಿರಾಸೆ ಅನುಭವಿಸಬೇಕಾಯಿತು. ರಘುಪತಿ ಭಟ್ ಬಂಡಾಯದ ಬಿಸಿ, ಆಯನೂರು ಮಂಜುನಾಥ್ ಅವರ ಅನುಭವ, ಮತದಾರರೊಂದಿಗೆ ಎಸ್.ಪಿ.ದಿನೇಶ್ ಹೊಂದಿದ್ದ ಆಪ್ತತೆ ಇವ್ಯಾವುದೂ ಫಲ ನೀಡಿರಲಿಲ್ಲ.
ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ‘ಯುವನಿಧಿʼ ಯೋಜನೆಗೆ ಶಿವಮೊಗ್ಗದಲ್ಲಿ ಭರ್ಜರಿ ಚಾಲನೆ ನೀಡಲಾಗಿತ್ತು. ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ಫ್ರೀಡಂ ಪಾರ್ಕ್‌ನ (ಹಳೆ ಜೈಲು ಆವರಣ) ಬೃಹತ್ ವೇದಿಕೆಯಲ್ಲಿ ಡಿಪ್ಲೊಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಉದ್ಯೋಗಭತ್ಯೆ ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದರು.
ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್– ಕೆಎಫ್‌ಡಿ)ಯಿಂದ ಬಳಲುತ್ತಿದ್ದ ಹೊಸನಗರ ತಾಲ್ಲೂಕಿನ ಅರಮನೆ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರ 18 ವರ್ಷದ ಯುವತಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಮಲೆನಾಡನ್ನು ಬೆಚ್ಚಿಬೀಳಿಸಿತ್ತು. ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ 13 ಮಂದಿ ಸೋಂಕಿಗೆ ತುತ್ತಾಗಿದ್ದರು. ಕೆಎಫ್‌ಡಿಗೆ ಕೊಡುವ ಲಸಿಕೆ ಉತ್ಪಾದನೆ ಸ್ಥಗಿತಗೊಂಡಿರುವ ಸಂಗತಿಯೂ ಈ ವೇಳೆ ರಾಜ್ಯದಲ್ಲಿ ಸದ್ದು ಮಾಡಿತು.
ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್‌ಎಲ್) ಪುನಶ್ಚೇತನದ ವಿಚಾರವಾಗಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರ್ಖಾನೆಗೆ ಭೇಟಿ ನೀಡಿ ಸಾಧಕ–ಬಾಧಕಗಳನ್ನು ಪರಿಶೀಲಿಸಿದ್ದು ಉಕ್ಕಿನ ನಗರಿಯಲ್ಲಿ ಸಂಚಲನ ಮೂಡಿಸಿತ್ತು. ಕಾರ್ಖಾನೆಯ ಸದ್ಯದ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿದ್ದ ಅವರು, ಕಾರ್ಖಾನೆಯ ಅಧಿಕಾರಿ ವರ್ಗ, ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರೊಂದಿಗೆ ಸಭೆ ನಡೆಸಿದ್ದರು. ಮುಂದಿನ ದಿನಗಳಲ್ಲಿ ಭದ್ರಾವತಿಯ ಜನರಿಗೆ ಒಳ್ಳೆಯದು ಮಾಡುವೆ. ಕಾರ್ಖಾನೆ ಆರಂಭದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದು ಭರವಸೆ ನೀಡಿದ್ದರು.
ಸಂಘ, ಸಂಘಟನೆ, ಪಕ್ಷ, ಹೋರಾಟ ಸೇರಿ ಸಾರ್ವಜನಿಕ ಬದುಕಿಗೆ ಸುದೀರ್ಘ ಐದು ದಶಕಗಳನ್ನು ಸಮರ್ಪಿಸಿಕೊಂಡು ಬಂದಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ನಾಯಕ ಎಂ.ಬಿ.ಭಾನುಪ್ರಕಾಶ್, ಗೋಪಿ ವೃತ್ತದಲ್ಲಿ ನಡೆದಿದ್ದ ಪಕ್ಷದ ಹೋರಾಟದ ವೇದಿಕೆಯಲ್ಲಿಯೇ ಜೀವಬಿಟ್ಟಿದ್ದರು. ಸಂಸ್ಕೃತ ಗ್ರಾಮವೆಂದೇ ಖ್ಯಾತಿ ಪಡೆದಿರುವ ಮತ್ತೂರಿನ ನಿವಾಸಿಯಾಗಿದ್ದ ಇವರು ಮಲೆನಾಡಿನ ರಾಜಕಾರಣದಲ್ಲಿ ತಮ್ಮ ‘ಜೆಂಟಲ್‌ಮನ್’ ವ್ಯಕ್ತಿತ್ವದಿಂದ ಅಜಾತಶತ್ರು ಎನಿಸಿಕೊಂಡಿದ್ದರು. ಬಾಲ್ಯದಿಂದ ಆರ್‌ಎಸ್‌ಎಸ್ ನಂಟಿನಲ್ಲಿಯೇ ಬೆಳೆದುಬಂದ ಇವರು, ಜನಸಂಘದಲ್ಲೂ ಸಕ್ರಿಯರಾಗಿದ್ದರು. ಮತ್ತೂರಿನ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸಕ್ರಿಯ ರಾಜಕಾರಣಕ್ಕೆ ಬಂದಿದ್ದರು. 2001ರಲ್ಲಿ ಗಾಜನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿದ್ದರು. 2013ರಿಂದ 19ರವರೆಗೆ ಒಂದು ಅವಧಿಗೆ ವಿಧಾನಪರಿಷತ್ ಸದಸ್ಯರಾಗಿದ್ದರು.
ಕಳೆದ ವರ್ಷ ವಿಧಾನಸಭೆ ಚುನಾವಣೆ ನಡೆದಿದ್ದರೂ 2024ರಲ್ಲಿ ಕಾಂಗ್ರೆಸ್ ಸರ್ಕಾರವು ನಿಗಮ-ಮಂಡಳಿಗಳಿಗೆ ನೇಮಕಾತಿ ಮಾಡುವ ಮೂಲಕ ಎರಡನೇ ಹಂತದ ನಾಯಕರಿಗೆ ಅವಕಾಶ ನೀಡಿತು. ಎಚ್.ಎಸ್.ಸುಂದರೇಶ್ ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ, ಆರ್.ಎಂ.ಮಂಜುನಾಥ ಗೌಡ ಡಿಸಿಸಿ ಬ್ಯಾಂಕ್, ಜಿ.ಪಲ್ಲವಿ ಅಲೆಮಾರಿ ಅಭಿವೃದ್ಧಿ ನಿಗಮ, ಎಸ್.ರವಿಕುಮಾರ್ ಭೋವಿ ಅಭಿವೃದ್ಧಿ ನಿಗಮಕ್ಕೆ ನೇಮಕಗೊಂಡರು. ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ್ವರ ಮಡಿಲಿಗೆ ನಿಗಮದ ಅಧ್ಯಕ್ಷ ಸ್ಥಾನದ ಜತೆಗೆ ಕ್ಯಾಬಿನೆಟ್ ಸ್ಥಾನಮಾನವೂ ದೊರೆತಿತ್ತು. ಅಚ್ಚರಿ ಎಂಬಂತೆ ಜಿ.ಪಂ ಮಾಜಿ ಅಧ್ಯಕ್ಷೆ ಬಲ್ಕಿಷ್ ಬಾನು ಅವರನ್ನು ವಿಧಾನ ಪರಿಷತ್‌ಗೆ ನಾಮಕರಣ ಮಾಡಿ ಕಾಂಗ್ರೆಸ್ ಸಂಚಲನ ಮೂಡಿಸಿತು.
ಹಾವೇರಿ ಬಳಿ ನಸುಕಿನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಭದ್ರಾವತಿ ತಾಲ್ಲೂಕಿನ ಎಮ್ಮೇಹಟ್ಟಿಯ 13 ಜನ ಸಾವಿಗೀಡಾಗಿದ್ದು ನಾಡಿನ ವರ್ಷದ ದೊಡ್ಡ ದುರಂತಗಳಲ್ಲಿ ಒಂದಾಗಿದೆ. ಪುತ್ರ ಆದರ್ಶ ಟೆಂಪೊ ಟ್ರಾವೆಲರ್ (ಟಿ.ಟಿ) ವಾಹನ ಖರೀದಿಸಿದ್ದ ಕಾರಣ ಎಮ್ಮೇಹಟ್ಟಿಯ ನಿವಾಸಿ, ನೀರಾವರಿ ಇಲಾಖೆಯಲ್ಲಿ ನೀರುಗಂಟಿಯಾಗಿರುವ ನಾಗೇಶರಾವ್ ಅವರು ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಸೇರಿದಂತೆ 17 ಜನರನ್ನು ಮನೆ ದೇವರಾದ ಬೆಳಗಾವಿ ಜಿಲ್ಲೆ ಚಿಂಚಲಿಯ ಮಾಯಮ್ಮನ ದರ್ಶನಕ್ಕೆ ಕರೆದೊಯ್ದಿದ್ದರು. ಎಲ್ಲರೂ ಜೂನ್ 24ರ ಮಧ್ಯರಾತ್ರಿ ತೆರಳಿದ್ದರು. ವಾಪಸ್ ಊರಿಗೆ ಮರಳುವಾಗ ಅಪಘಾತ ಸಂಭವಿಸಿತ್ತು. ದುರಂತದಲ್ಲಿ ಸಾವಿಗೀಡಾದವರ ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿಸಿದ್ದ ಎಮ್ಮೇಹಟ್ಟಿಯ ಗ್ರಾಮಸ್ಥರು ಮಮ್ಮಲ ಮರುಗಿದ್ದರು.
2020ರ ನಂತರ ಲಿಂಗನಮಕ್ಕಿ ಜಲಾಶಯ ಮೊದಲ ಬಾರಿಗೆ ಭರ್ತಿಯಾಗಿತ್ತು. ಆದ್ದರಿಂದ ಜಲಾಶಯದ 11 ಕ್ರಸ್ಟ್ ಗೇಟ್‌ಗಳ ಪೈಕಿ ಮೂರು ಗೇಟ್ ತೆಗೆದು ನೀರು ಹರಿಸಲಾಯಿತು. ಇದರಿಂದ ಜೋಗ ಜಲಪಾತದಲ್ಲಿ ಶರಾವತಿಯ ದೃಶ್ಯ ವೈಭವ ಸೃಷ್ಟಿಯಾಗಿತ್ತು. ಜೋಗದ ಸಿರಿ ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ದಾಂಗುಡಿ ಇಟ್ಟಿದ್ದರು. ಈ ಬಾರಿ ಮಳೆಯ ಸಮೃದ್ಧಿಯಿಂದ ಶರಾವತಿ ಕಣಿವೆಯಲ್ಲಿ ಮುಂಗಾರಿನ ವೈಭವ ಕಳೆಗಟ್ಟಿತ್ತು. ಇಳೆ-ಮಳೆಯ ನಡುವೆ ಪ್ರೇಮ ರಾಗದ ಉತ್ಕಟತೆಯ ನವಿರು ಭಾವ ಚಾಲ್ತಿಯಲ್ಲಿತ್ತು. ಕಾರ್ಗಲ್ ಪಟ್ಟಣ, ಜೋಗ ಜಲಪಾತದ ಪರಿಸರ, ಚೈನಾ ಗೇಟ್, ಬ್ರಿಟಿಷ್ ಬಂಗ್ಲೊ, ರಾಜಾಕಲ್ಲು, ಮಾವಿನಗುಂಡಿ, ಸೀತಾಕಟ್ಟೆ, ಬಿದರೂರು, ಮಳಲಿ, ಶಿರೂರು ಕೆರೆ, ಲಿಂಗನಮಕ್ಕಿ, ತಳಕಳಲೆ ಹೀಗೆ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ವ್ಯಾಪ್ತಿಯ ಶರಾವತಿ ಕೊಳ್ಳದಲ್ಲಿ ದಿನವಿಡೀ ಮೋಡ-ಮಳೆ, ಮಂಜು, ಸುಳಿರ್ಗಾಳಿಯ ದಿಬ್ಬಣವನ್ನು ಪ್ರವಾಸಿಗರು ಆಗಾಗ ಕಣ್ತುಂಬಿಕೊಂಡಿದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಕಳೆದ ವರ್ಷ (2023) ರಾಜ್ಯಮಟ್ಟದಲ್ಲಿ 28ನೇ ಸ್ಥಾನ ಪಡೆದು ಕಳಪೆ ಸಾಧನೆ ಮಾಡಿದ್ದ ಶಿವಮೊಗ್ಗ ಜಿಲ್ಲೆ ಈ ಬಾರಿ ಶೇ 88.67ರಷ್ಟು ಫಲಿತಾಂಶದೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದಿತ್ತು. ವರ್ಷದೊಳಗೆ ನಡೆದ ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಾಧನೆ ಪೋಷಕರ ವಲಯದಲ್ಲಿ ಭಾರಿ ಮೆಚ್ಚುಗೆಗೆ ಕಾರಣವಾಗಿತ್ತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆ ಆಗಿರುವುದರಿಂದ ಶಿವಮೊಗ್ಗದ ಫಲಿತಾಂಶ ಇಡೀ ರಾಜ್ಯದ ಗಮನ ಸೆಳೆದಿತ್ತು. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 23,028 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 20,420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
ಡಿಸಿಸಿ ಬ್ಯಾಂಕ್‌ನಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಿದ ಆರ್.ಎಂ.ಮಂಜುನಾಥ ಗೌಡ, ಸಹಕಾರ ವಲಯದಲ್ಲಿ ನಾನಿನ್ನೂ ಪ್ರಬಲ ಎಂಬುದನ್ನು ನಿರೂಪಿಸಿದ್ದರು. ಅತ್ತ ಶಿಮುಲ್ ಚುನಾವಣೆಯಲ್ಲೂ ಮೊದಲ ಬಾರಿಗೆ ಗೆದ್ದ ಮಂಜುನಾಥ ಗೌಡರು ಅಲ್ಲಿಗೆ ತಮ್ಮ ಬೆಂಬಲಿಗ ವಿದ್ಯಾಧರ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿ ಸಫಲರಾದರು. ಎಂಎಡಿಬಿ, ಡಿಸಿಸಿ, ಶಿಮುಲ್ ಹೀಗೆ ಮೂರು ದೋಣಿಯಲ್ಲಿ ಏಕಕಾಲಕ್ಕೆ ಗೌಡರ ಪಯಣ ಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.