ಶಿವಮೊಗ್ಗ: ‘ನಮ್ಮ ಮನೆ ಎದುರು ಕಸ ಚೆಲ್ಲಿದ್ದು ಏಕೆ?’ ಎಂದು ಪ್ರಶ್ನಿಸಿದ ವೃದ್ಧೆಯೊಬ್ಬರನ್ನು ಪಕ್ಕದ ಮನೆಯವರೇ ಕಂಬಕ್ಕೆ ಕಟ್ಟಿ ಥಳಿಸಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯ ಸಾಗರ ತಾಲ್ಲೂಕಿನ ಗೌತಮಪುರದಲ್ಲಿ ಜೂನ್ 24ರಂದು ಈ ಘಟನೆ ನಡೆದಿದೆ. ಹುಚ್ಚಮ್ಮ (76) ಕಸ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆಗೊಳಗಾದ ವೃದ್ಧೆ.
ಕಸ ತಂದು ಮನೆ ಎದುರು ಬಿಸಾಕಿದ್ದನ್ನು ಪ್ರಶ್ನಿಸಿದ್ದರಿಂದ ಕುಪಿತಗೊಂಡ ನೆರೆಮನೆಯ ಪ್ರೇಮಾ ಸಂಬಂಧಿಗಳಾದ ಮಂಜುನಾಥ್ ಹಾಗೂ ದರ್ಶನ್ ಜೊತೆ ಸೇರಿ ಸೇರಿ ಹುಚ್ಚಮ್ಮ ಅವರನ್ನು ಹಗ್ಗದಿಂದ ಕಂಬಕ್ಕೆ ಕಟ್ಟಿ ಹಾಕಿ ಕೈಗೆ, ಮುಖಕ್ಕೆ ಹೊಡೆದಿದ್ದಾರೆ. ಅವರನ್ನು ಎಳೆದಾಡಿ, ಅವಾಚ್ಯವಾಗಿ ನಿಂದಿಸಿದ್ದಾರೆ. ನಂತರ ಸ್ಥಳೀಯರು ಬಂದು ಹುಚ್ಚಮ್ಮ ಅವರನ್ನು ಬಿಡಿಸಿದ್ದಾರೆ. ಜೂನ್ 25ರಂದು ಆನಂದಪುರ ಪೊಲೀಸ್ ಠಾಣೆಯಲ್ಲಿ ಹುಚ್ಚಮ್ಮ ಅವರ ಪುತ್ರ ಕಣ್ಣಪ್ಪ ದೂರು ದಾಖಲಿಸಿದ್ದಾರೆ.
ಹಲ್ಲೆ ನಡೆಸಿದ ಆರೋಪದ ಮೇಲೆ ಆನಂದಪುರ ಠಾಣೆ ಪೊಲೀಸರು ಪ್ರೇಮಾ, ಮಂಜುನಾಥ್ ಹಾಗೂ ದರ್ಶನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವೃದ್ಧೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ವೃದ್ಧೆಯ ಮೇಲೆ ಹಲ್ಲೆ ನಡೆಸಿದ ಪ್ರೇಮಾ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಇನ್ನಿಬ್ಬರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಅವರೆಲ್ಲರೂ ಸಂಬಂಧಿಗಳೇ ಆಗಿದ್ದಾರೆ. ತನ್ನ ನಡತೆ ಬಗ್ಗೆ ಅಸಭ್ಯವಾಗಿ ಮಾತಾಡಿದ ಕಾರಣ ಹಲ್ಲೆ ನಡೆಸಿದ್ದಾಗಿ ಬಂಧಿತ ಮಹಿಳೆ ಹೇಳಿಕೆ ನೀಡಿದ್ದಾರೆ’ ಎಂದು ಎಸ್ಪಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.