ADVERTISEMENT

ಶಿವಮೊಗ್ಗ ಜಿಲ್ಲೆಯಲ್ಲಿ ‘ಗೃಹಲಕ್ಷ್ಮಿಗೆ’ ಭರ್ಜರಿ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2023, 6:34 IST
Last Updated 3 ಆಗಸ್ಟ್ 2023, 6:34 IST
ಶಿವಮೊಗ್ಗದ ವಿನೋಬನಗರದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಬುಧವಾರ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಲು ನಾಗರಿಕರು ಸರತಿ ಸಾಲಿನಲ್ಲಿ ನಿಂತಿದ್ದರು–ಪ್ರಜಾವಾಣಿ ಚಿತ್ರ/ ಶಿವಮೊಗ್ಗ ನಾಗರಾಜ್
ಶಿವಮೊಗ್ಗದ ವಿನೋಬನಗರದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಬುಧವಾರ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಲು ನಾಗರಿಕರು ಸರತಿ ಸಾಲಿನಲ್ಲಿ ನಿಂತಿದ್ದರು–ಪ್ರಜಾವಾಣಿ ಚಿತ್ರ/ ಶಿವಮೊಗ್ಗ ನಾಗರಾಜ್   

ನಾಗರಾಜ್ ಹುಲಿಮನೆ

ಶಿವಮೊಗ್ಗ: ಕುಟುಂಬದ ಯಜಮಾನಿಗೆ ನೆರವಿನ ರೂಪದಲ್ಲಿ ಮಾಸಿಕ ₹2,000 ನಗದು ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅರ್ಜಿ ಸಲ್ಲಿಸಲು ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಜಿಲ್ಲೆಯಲ್ಲಿ ಜುಲೈ 18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯಲ್ಲಿ ಸರ್ಕಾರದಿಂದ ನೀಡಲಾದ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಮುಖ್ಯಸ್ಥರೆಂದು ಗುರುತಿಸಲ್ಪಟ್ಟ 3.96 ಲಕ್ಷ ಮಹಿಳೆಯರು ಇದ್ದಾರೆ. ಅದರಲ್ಲಿ ಆಗಸ್ಟ್‌ 1ರವರೆಗೆ 2.95 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿಯೇ ಗೃಹಲಕ್ಷ್ಕ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಜಿಲ್ಲೆ 12ನೇ ಸ್ಥಾನದಲ್ಲಿದೆ‌. ಯೋಜನೆಯಡಿ ಕೇವಲ 14 ದಿನಗಳಲ್ಲಿ ಶೇ 74ರಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದಂತಾಗಿದೆ.

ADVERTISEMENT
ಸರ್ಕಾರದ ಈ ಯೋಜನೆಯಿಂದ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ. ತುರ್ತು ಸಂದರ್ಭದಲ್ಲಿ ಈ ಹಣವನ್ನು ಬಳಸಿಕೊಳ್ಳಬಹುದು.
ಅಂಡಾಳಮ್ಮ, ವಿನೋಬನಗರ ನಿವಾಸಿ

ಅರ್ಜಿ ಹಾಕಲು ಗ್ರಾಮ ಒನ್, ಕರ್ನಾಟಕ ಒನ್ ಕಚೇರಿ, ಬಾಪೂಜಿ ಸೇವಾ ಕೇಂದ್ರ ಮತ್ತು ನಾಡ ಕಚೇರಿಗಳ ಎದುರು ಮಹಿಳೆಯರು ಸಾಲುಗಟ್ಟಿರುವುದನ್ನು ಕಾಣಬಹುದು. ಜಿಲ್ಲೆಯಲ್ಲಿ ಸುಮಾರು 543 ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಚ್. ಸಂತೋಷ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅರ್ಜಿ ಸ್ವೀಕರಣಾ ಸೇವಾ ಕೇಂದ್ರಗಳಲ್ಲಿ ಬಿಸಿಲು ಹಾಗೂ ಮಳೆಯಿಂದ ರಕ್ಷಣೆ ಒದಗಿಸುವುದಕ್ಕಾಗಿ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ಅರ್ಜಿ ಸಲ್ಲಿಸಲು ಮಹಿಳೆಯರು ಹಣ ಪಾವತಿಸುವಂತಿಲ್ಲ. ಈ ಪ್ರಕ್ರಿಯೆ ಸಂಪೂರ್ಣ ಉಚಿತ. ಸೇವಾ ಕೇಂದ್ರದ ಸಿಬ್ಬಂದಿ ಅರ್ಜಿ ಸಲ್ಲಿಕೆ ವೇಳೆ ಹಣಕ್ಕೆ ಬೇಡಿಕೆ ಇಟ್ಟರೆ, ಸಂಬಂಧಿಸಿದ ಇಲಾಖೆಗೆ ದೂರು ಸಲ್ಲಿಸಬಹುದು.

ಪ್ರತಿ ದಿನ ನೂರಾರು ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಮುಂದಿನ ಇಪ್ಪತ್ತು ದಿನದಲ್ಲಿ ಶೇ 100 ಗುರಿ ಸಾಧಿಸುತ್ತೇವೆ.
ಎಚ್. ಸಂತೋಷ ಕುಮಾರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ

‘ಸರ್ಕಾರದಿಂದ ಪರವಾನಗಿ ಪಡೆದ ಸೇವಾ ಕೇಂದ್ರಗಳಿಂದ ಲಾಗಿನ್ ಐಡಿ ಪಡೆದು ನಕಲಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಕೂಡ ನಕಲಿ ಸೇವಾ ಕೇಂದ್ರಗಳ ಕುರಿತು ದೂರು ಸಲ್ಲಿಸಬಹುದು’ ಎಂದು ಸಂತೋಷ್‌ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.