
ಶಿವಮೊಗ್ಗ: ಕ್ರೀಡಾಂಗಣವನ್ನು ಸ್ವಚ್ಛಂದವಾಗಿಡುವಲ್ಲಿ, ಮಳೆ ಬಂದಾಗ ದೊಡ್ಡ ದೊಡ್ಡ ಟಾರ್ಪಲ್‌ಗಳನ್ನು ಧರ ಧರನೆ ಎಳೆದೊಯ್ದು ಪಿಚ್ ಹಾಗೂ ‘ರನ್ನಪ್ ಏರಿಯಾ’ ಮುಚ್ಚುವಲ್ಲಿ ಮೈದಾನದ ಸಿಬ್ಬಂದಿಯ ಶ್ರಮ ಅಪಾರ.
ಇಲ್ಲಿನ ನವುಲೆ ಕೆರೆ ತಟದಲ್ಲಿ ತಲೆ ಎತ್ತಿರುವ ಕೆಎಸ್‌ಸಿಎ ಕ್ರೀಡಾಂಗಣ ಹಸಿರಿನಿಂದ ಕಂಗೊಳಿಸುತ್ತಿದೆ. ಅಣತಿ ದೂರದಲ್ಲೇ ಮುಖ್ಯ ರಸ್ತೆ ಇದ್ದು, ಬಸ್, ಕಾರ್, ಬೈಕ್‌ಗಳಲ್ಲಿ ಸಾಗುವವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಮೈದಾನದ ಈ ಸೊಬಗಿಗೆ ಕಾರಣರಾಗಿರುವ ಇಲ್ಲಿನ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಒದ್ದೆಯಾಗಿರುವ ಹಾಗೂ ತಗ್ಗಾದ ಜಾಗಗಳಲ್ಲಿ ಆಟಗಾರರ ಓಡಾಟಕ್ಕೆ ಒಂದಿನಿತು ತೊಂದರೆಯಾಗದಂತೆ ಸಮ ಪ್ರಮಾಣದಲ್ಲಿ ಪಟ ಪಟನೆ ಮರಳು ಉದುರಿಸುವ, ರೋಲರ್ ಎಳೆದೊಯ್ದು ಪಿಚ್‌ಗೆ ಕಿಂಚಿತ್ತೂ ಹಾನಿಯಾಗದ ಹಾಗೆ ಅತ್ತಿಂದಿತ್ತ, ಇತ್ತಿಂದತ್ತ ಉರುಳಿಸುವ ಇವರ ಕೌಶಲ ಬೆರಗು ಮೂಡಿಸುತ್ತದೆ. ಇಂತಹ 10 ಜನ ಸಿಬ್ಬಂದಿ ನವುಲೆಯ ಮೈದಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ವರ್ಷಪೂರ್ತಿ ದಣಿವರಿಯದೆ ದುಡಿಯುವ ಇವರು ತಮ್ಮ ಕಾಯಕದಲ್ಲಿ ಸಾರ್ಥಕತೆ ಕಾಣುತ್ತಿದ್ದಾರೆ.
ರಣಜಿ, ಕೂಚ್ ಬಿಹಾರ್, ವಿಜಯ್ ಹಜಾರೆಯಂತಹ ಟೂರ್ನಿಗಳ ಪಂದ್ಯಗಳು ನಡೆಯುವಾಗ ಮೂರು ದಿನ ಮುಂಚಿತವಾಗಿಯೇ ಮೈದಾನದ ಸಿದ್ಧತೆಯಲ್ಲಿ ತೊಡಗುತ್ತಾರೆ. ಪಂದ್ಯಗಳು ಯಶಸ್ವಿಯಾಗಿ ನಡೆಯಲು ಇವರ ಪಾತ್ರವೂ ಬಹುಮುಖ್ಯ.
ಮೈದಾನದೊಳಗಿನ ಹುಲ್ಲು ಹಚ್ಚ ಹಸಿರಿನಿಂದ ನಳ ನಳಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲಿದೆ. ಅದನ್ನು ಬೆಳೆಸಲು ಆಗಾಗ ಹಿತಮಿತವಾಗಿ ಗೊಬ್ಬರ ಹಾಕುತ್ತಾರೆ. ಔಷಧಿ ಸಿಂಪಡಿಸುತ್ತಾರೆ. ಮಳೆ ಇಲ್ಲದ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ಆಗಾಗ ಹುಲ್ಲಿಗೆ ನೀರು ಸಿಂಪಡಿಸುತ್ತಾರೆ. ಔಟ್ ಫೀಲ್ಡ್‌ನಲ್ಲಿ ಬೆಳೆಯುವ ಕಳೆಯನ್ನೂ ಕೀಳುತ್ತಾರೆ. ಹೀಗಾಗಿ ಇವರ ಕಾಯಕ ನಿತ್ಯ ನಿರಂತರ.
‘ಮಳೆಯ ಸಂದರ್ಭದಲ್ಲಿ ರಭಸವಾಗಿ ಬೀಸುವ ಗಾಳಿಗೆ ಎದೆಯೊಡ್ಡಿ 120 ಅಡಿ ಉದ್ದ 100 ಅಡಿ ಅಗಲದ ಟಾರ್ಪಲ್‌ಗಳನ್ನು ಎಳೆದುಕೊಂಡು ಹೋಗಬೇಕು. ತೆರೆದ ಮೈದಾನದಲ್ಲಿ ಇದು ನಿಜಕ್ಕೂ ಸವಾಲಿನ ಕೆಲಸ.
ಪಿಚ್ ಮತ್ತು ರನ್ನಪ್ ಏರಿಯಾದಲ್ಲಿ ಮಳೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಮಳೆ ನಿಂತ ಮೇಲೆ ಟಾರ್ಪಲ್‌ನಿಂದ ಟಾರ್ಪಲ್‌ಗೆ ನೀರು ಸಾಗಿಸುತ್ತಾ (ಡಂಪ್ ಮಾಡುತ್ತಾ) ಬೌಂಡರಿ ಗೆರೆಯಿಂದ ಆಚೆ ಹಾಕಬೇಕು. ಮೈಮರೆತರೆ ನಮ್ಮ ಕೆಲಸಕ್ಕೇ ಕುತ್ತು ಬರುತ್ತದೆ’ ಎಂದು ಇಲ್ಲಿ 14 ವರ್ಷಗಳಿಂದ ಕೆಲಸ ಮಾಡುತ್ತಿರುವ ಪ್ರತಾಪ್ ಹೇಳಿದರು.
‘ಕರ್ನಾಟಕ ಮತ್ತು ಗೋವಾ ನಡುವಣ ಪಂದ್ಯಕ್ಕೆಂದು 120X100 ಅಡಿಯ 5 ಹಾಗೂ 50X40 ಅಡಿಯ ಮೂರು ಟಾರ್ಪಲ್‌ಗಳನ್ನು ತರಿಸಲಾಗಿದೆ. ವರ್ಷಕ್ಕೊಮ್ಮೆ ಇವನ್ನು ಬದಲಿಸಲಾಗುತ್ತದೆ. ಚಿಕ್ಕಮಗಳೂರಿನಿಂದ ಐವರು, ಬೆಂಗಳೂರಿನಿಂದ ಮೂವರು ಸಿಬ್ಬಂದಿ ಬಂದಿದ್ದಾರೆ. ಅವರ ಜೊತೆಗೆ ನಮ್ಮೂರಿನ ನಾಲ್ಕು ಜನರನ್ನು ಕೆಲಸಕ್ಕೆ ಕರೆತಂದಿದ್ದೇವೆ’ ಎಂದರು.
‘ನಮ್ಮದು ಅತಿ ಹೆಚ್ಚು ದೈಹಿಕ ಶ್ರಮ ಬೇಡುವ ಕೆಲಸ. ಅಷ್ಟೇ ಗೌರವಯುತವಾದದ್ದು ಕೂಡ. ಇಲ್ಲಿ ಆಡಲು ಬರುವ ಎಲ್ಲಾ ಕ್ರಿಕೆಟಿಗರೂ ಪ್ರೀತಿ, ವಿಶ್ವಾಸದಿಂದ ಮಾತನಾಡಿಸುತ್ತಾರೆ. ಪಂದ್ಯ ಮುಗಿಸಿ ಹೋಗುವಾಗ ಕರೆದು ನಮ್ಮ ಕೆಲಸದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡುತ್ತಾರೆ. ಸ್ಥಳೀಯರು ಕೂಡ ನಮ್ಮೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಾರೆ. ಇದನ್ನೆಲ್ಲಾ ನೋಡಿದಾಗ ನಿಜಕ್ಕೂ ಸಂತೃಪ್ತ ಭಾವ ಮೂಡುತ್ತದೆ’ ಎಂದು ರಾಕೇಶ್ ಖುಷಿ ವ್ಯಕ್ತಪಡಿಸಿದರು.
‘ಪ್ರತಿನಿತ್ಯ ಬೆಳಿಗ್ಗೆ 9.30ರಿಂದ 5.30ರವರೆಗೆ ಕೆಲಸ ಇರುತ್ತದೆ. ಮೈದಾನದ ನಿರ್ವಹಣೆ ಜೊತೆಗೆ ಸುತ್ತಲೂ ಮರ–ಗಿಡ ಬೆಳೆಸುವ ಕಾಯಕವನ್ನೂ ಮಾಡುತ್ತೇವೆ. ಪಿಚ್ ಸಿದ್ಧಪಡಿಸುವುದು ಹಾಗೂ ಮೈದಾನದ ನಿರ್ವಹಣೆ ಬಗ್ಗೆ ನಮಗೆ ಕೆಎಸ್‌ಸಿಎ ವತಿಯಿಂದ ಬೆಂಗಳೂರಿನಲ್ಲಿ ಆಗಾಗ ತರಬೇತಿ ನೀಡುತ್ತಾರೆ. ಮಹಿಳಾ ಪ್ರೀಮಿಯರ್ ಲೀಗ್ ವೇಳೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅದು ಜೀವನದ ಸ್ಮರಣೀಯ ಗಳಿಗೆ’ ಎಂದರು.
2017ರಲ್ಲಿ ಸಿಕ್ಕಿತ್ತು
₹10 ಲಕ್ಷ ಬಹುಮಾನ ನವುಲೆಯ ಮೈದಾನದಲ್ಲಿ 2017ರಲ್ಲಿ ಹೈದರಾಬಾದ್ ಮತ್ತು ಕರ್ನಾಟಕದ ನಡುವೆ ರಣಜಿ ಪಂದ್ಯ ನಡೆದಿತ್ತು. ಆಗ ಮೈದಾನವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದ ಕಾರಣಕ್ಕೆ ಇಲ್ಲಿನ ಸಿಬ್ಬಂದಿಗೆ ಕೆಎಸ್‌ಸಿಎ ವತಿಯಿಂದ ₹10 ಲಕ್ಷ ಬಹುಮಾನ ನೀಡಲಾಗಿತ್ತು. ‘ರಣಜಿ ಹಾಗೂ ಇತರ ಪಂದ್ಯಗಳಿದ್ದಾಗ ಒಂದು ತಿಂಗಳು ಶ್ರಮ ಹಾಕಿ ಕೆಲಸ ಮಾಡುತ್ತೇವೆ. ಆಟಗಾರರು ಮತ್ತು ತಂಡಗಳ ನೆರವು ಸಿಬ್ಬಂದಿ ಮೈದಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಾಗ ಸಾರ್ಥಕ ಭಾವ ಮೂಡುತ್ತದೆ’ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.