
ಶಿವಮೊಗ್ಗ: ಇಲ್ಲಿನ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ 68 ವರ್ಷದ ವ್ಯಕ್ತಿಯೊಬ್ಬರಿಗೆ ಮೈಕ್ರೋ ವೇವ್ ಅಪ್ಲಿಕೇಷನ್ ಮೂಲಕ ಲಿವರ್ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆ ಅತ್ತಿಗುಂದದ ನಂಜಯ್ಯ ಎಂಬುವವರು ಹೊಟ್ಟೆಯ ಬಲಭಾಗದಲ್ಲಿ ನೋವು ಎಂದು ನಂಜಪ್ಪ ಲೈಕ್ ಕೇರ್ ಆಸ್ಪತ್ರೆಗೆ ಬಂದಿದ್ದರು.
ಕ್ಯಾನ್ಸರ್ ಶಸ್ತ್ರ ಚಿಕಿತ್ಸಕ ಡಾ. ಗುರುಚನ್ನ ಬಸವಯ್ಯ, ಪರಿಶೀಲಿಸಿದ ನಂತರ ಹಾಗೂ ಅಗತ್ಯವಿರುವ ಎಲ್ಲಾ ತಪಾಸಣೆಗಳ ಬಳಿಕ ರೋಗಿಗೆ ಲಿವರ್ ನಲ್ಲಿ 4.5 X 3.2 ಸೆಂ. ಮೀ ಅಳತೆಯ ಗಡ್ಡೆ ಇರುವುದು ಪತ್ತೆಯಾಯಿತು. ಅದು ‘ಹೆಪಟೋಸೆಲ್ಯೂಲರ್ ಕಾರ್ಸಿನೋಮ’ ಅಂದರೆ ‘ಲಿವರ್ ಕ್ಯಾನ್ಸರ್’ನ ಒಂದು ವಿಧ. ಆರಂಭಿಕ ಹಂತದ ಕ್ಯಾನ್ಸರ್ ಎಂದು ದೃಢಪಟ್ಟಿತು. ಇದಕ್ಕೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ವಿಧಾನವನ್ನು ಅನುಸರಿಸಿದರೆ ಅರ್ಧ ಭಾಗಕ್ಕಿಂತ ಹೆಚ್ಚಾಗಿ ತೆಗೆಯಬೇಕಾಗಿತ್ತು.
ಕ್ಯಾನ್ಸರ್ ಗೆಡ್ಡೆ ಟ್ಯೂಮರ್ ಇದ್ದ ಸ್ಥಳ ಅತಿ ಸೂಕ್ಷ್ಮವಾಗಿದ್ದರಿಂದ ಶಸ್ತ್ರಚಿಕಿತ್ಸೆಯ ಬಳಿಕ ಉಳಿಯುವ ಲಿವರ್ ಪ್ರಮಾಣ ಕಡಿಮೆ ಆಗುತ್ತದೆ. ರೋಗಿಯ ಸಕ್ಕರೆ ಕಾಯಿಲೆ ರಕ್ತದ ಒತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಟ್ಯೂಮರ್ ಬೋರ್ಡ್ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುವ ವೈದ್ಯರ ತಂಡ ಮೈಕ್ರೋವೇವ್ ಅಬ್ಲೇಶನ್ ಎಂಬ ಚಿಕ್ಕ ರಂಧ್ರದ ಮೂಲಕ ಚಿಕಿತ್ಸೆ ನೀಡುವ ಆಧುನಿಕ ವಿಧಾನ ಆಯ್ಕೆ ಮಾಡಿತು. ಈ ಚಿಕಿತ್ಸೆ ನೀಡಲು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಅನೇಸ್ಥೆಸಿಯೋಲಾಜಿಸ್ಟ್ ಡಾ.ಕೆ.ಆರ್.ಪ್ರವೀಣ್‌ಕುಮಾರ್ ಲೋಕಲ್ ಅನಸ್ಥೇಶಿಯಾ ನೀಡಿದರು.
ಎಂಡೋ ವ್ಯಾಸ್ಕೂಲರ್ ಇಂಟರ್ವೆನ್ಷನಲ್ ರೇಡಿಯೋಲೋಜಿಸ್ಟ್ ಡಾ. ನಿಶಿತಾ,  ಪೆನ್ ರಿಫಿಲ್ ಗಾತ್ರದ ‘ಮೈಕ್ರೋವೇವ್ ಆಂಟೆನಾ ಪ್ರೊಬ್’ ಎಂಬ ಸಾಧನ ಬಳಸಿ ಅಲ್ಟ್ರಾ ಸೌಂಡ್ ಮಾರ್ಗದರ್ಶನದಲ್ಲಿ ಲಿವರ್ ನಲ್ಲಿರುವ ಕ್ಯಾನ್ಸರ್ ಗೆಡ್ಡೆ (ಟ್ಯೂಮರ್) ಸಂಪೂರ್ಣವಾಗಿ ಸುಡಲಾಯಿತು. ಮೈಕ್ರೋವೇವ್ ಅಬ್ಲೇಶನ್ ಚಿಕಿತ್ಸೆ ನೀಡಿದ್ದರಿಂದ ರೋಗಿಯು ಸ್ಪಂದಿಸಿ ಆರೋಗ್ಯವಾಗಿದ್ದ ಕಾರಣ ಅದೇ ದಿನ ಸಾಯಂಕಾಲ ಕೆಲವು ಔಷಧಿಗಳ ನೀಡಿ ಮನೆಗೆ ಕಳುಹಿಸಲಾಯಿತು.  
ಚಿಕ್ಕ ರಂದ್ರದ ಮೂಲಕ ಕ್ಯಾನ್ಸರ್ ಕೋಶಗಳನ್ನು ವಿದ್ಯುತ್ ಶಾಖದ ಮೂಲಕ ನಾಶ ಮಾಡುವ ಆಧುನಿಕ ಕಾರ್ಯವಿಧಾನವು ಇದೀಗ ನಂಜಪ್ಪ ಲೈಫ್ ಕೇರ್ ನಲ್ಲಿ ಲಭ್ಯವಿದೆ. ಇನ್ನು ಇಂತಹ ಚಿಕಿತ್ಸೆಗಾಗಿ ದೊಡ್ಡ ನಗರಗಳಿಗೆ ಪ್ರಯಾಣಿಸಬೇಕಿಲ್ಲ-ಡಾ. ನಿಶಿತಾ ಎಂಡೋ ವ್ಯಾಸ್ಕೂಲರ್ ಇಂಟರ್ವೆನ್ಷನಲ್ ರೇಡಿಯೋಲೋಜಿಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.