ADVERTISEMENT

ಉಪನ್ಯಾಸಕರ ವ್ಯವಸ್ಥೆಗೆ ಒಕ್ಕೊರಲ ಆಗ್ರಹ

ಗ್ರಾಮೀಣ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದ ಗಣಕ ವಿಜ್ಞಾನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 4:26 IST
Last Updated 27 ಫೆಬ್ರುವರಿ 2022, 4:26 IST
ದರ್ಶನ್‌
ದರ್ಶನ್‌   

ರಿ.ರಾ. ರವಿಶಂಕರ್‌

ರಿಪ್ಪನ್‌ಪೇಟೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹೊಸ ಕನಸುಗಳನ್ನು ಕಟ್ಟಿದ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮೂರು ತಿಂಗಳುಗಳಿಂದ ಕಂಪ್ಯೂಟರ್‌ ಸೈನ್ಸ್‌ (ಗಣಕ ವಿಜ್ಞಾನ ) ವಿಭಾಗಕ್ಕೆ ಪ್ರಾಧ್ಯಾಪಕರಿಲ್ಲದೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಂಕು ಕವಿದಂತಾಗಿದೆ.

ಶಿವಮೊಗ್ಗ, ಸಾಗರದಂತಹ ಪಟ್ಟಣದಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗದೆ, ಉನ್ನತ ಶಿಕ್ಷಣಕ್ಕೆ ತಿಲಾಂಜಲಿ ನೀಡಲು ಹೊರಟವರಿಗೆ ದಾರಿ ತೋರಿದ್ದು ರಿಪ್ಪನ್‌ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.

ADVERTISEMENT

ಬದುಕಿನಲ್ಲಿ ಹೊಸ ಆಶಯಗಳನ್ನು ಹೊತ್ತು ಸಾಗಿದ ವಿದ್ಯಾರ್ಥಿಗಳನ್ನು ತನ್ನಡೆಗೆ ಸೆಳದದ್ದು ₹ 1.5 ಕೋಟಿ ವೆಚ್ಚದ ನೂತನ ಕಟ್ಟಡದಲ್ಲಿ ತಲೆ ಎತ್ತಿ ನಿಂತ ವಿಜ್ಞಾನ ವಿಭಾಗ. ಆದರೆ, ಇಲ್ಲಿ ಒಳ ಹೋದ ವಿದ್ಯಾರ್ಥಿಗಳಿಗೆ ತಿಳಿದ ಸತ್ಯ ಸಂಗತಿ ರಾಸಾಯನಿಕ ವಿಜ್ಞಾನಕ್ಕೆ ಪೂರ್ಣಕಾಲಿಕ ಉಪನ್ಯಾಸಕರಿಲ್ಲ ಎಂಬುದು. ಗಣಕಯಂತ್ರ ವಿಭಾಗಕ್ಕೆ ಪ್ರಾಧ್ಯಾಪಕರು ಇದ್ದರೂ 6 ತಿಂಗಳುಗಳಿಂದ ಮಾತೃತ್ವ ರಜೆಯಲ್ಲಿದ್ದಾರೆ. ಡಿಸೆಂಬರ್‌ 10ರಿಂದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗಣಕ ವಿಜ್ಞಾನ ತರಗತಿಗಳನ್ನು ಬಹಿಷ್ಕರಿಸಿದ್ದಾರೆ.

ಪರಿಣಾಮವಾಗಿ ಇಲ್ಲಿನ ಗಣಕ ವಿಜ್ಞಾನ ವಿಭಾಗದ ಪ್ರಥಮ ವಿಭಾಗದ 20, ದ್ವೀತಿಯ ವಿಭಾಗದ 15 ಹಾಗೂ ತೃತೀಯ ವಿಭಾಗದ 16 ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.

‘ಸರ್ಕಾರ, ಕಾಲೇಜು ಅಭಿವೃದ್ಧಿ ಸಮಿತಿ, ಸ್ಥಳೀಯರು, ಪ್ರಾಂಶುಪಾಲರು ಯಾರಾದರೂ ನಮ್ಮ ಗೋಳನ್ನು ಆಲಿಸಲಿ. ಆಗಲಾದರೂ ನಮ್ಮ ಕನಸುಗಳು ಸಾಕಾರಗೊಳ್ಳಬಹುದು’ ಎಂಬ ನಿರೀಕ್ಷೆಯಲ್ಲಿದ್ದಾರೆ ವಿದ್ಯಾರ್ಥಿನಿಯರಾದ ನೆವಟೂರಿನ ಅಮೃತಾ, ನಿಕಿತಾ, ಅಲುವಳ್ಳಿಯ ಸ್ವಾತಿ.

‘ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಮಕ್ಕಳ ಪಾಡು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಕ್ಷಣವೇ ಸಿಡಿಸಿ ಅನುದಾನದಲ್ಲಿ ಗಣಕ ವಿಜ್ಞಾನದ ಉಪನ್ಯಾಸಕರ ನೇಮಕಕ್ಕೆ ಕಾಲೇಜಿನ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿ’ ಎಂದು ಪೋಷಕರು ಒತ್ತಾಯಿಸಿದ್ದಾರೆ.

***

ಪರೀಕ್ಷೆ ಸಮೀಪಿಸುತ್ತಿದೆ. ಅದರೆ, ಪಠ್ಯ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಗೊಂದಲಕ್ಕೊಳಗಾಗಿದ್ದೇನೆ.
ದರ್ಶನ್‌, ದ್ವಿತೀಯ ಪದವಿ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿ

ರಜೆಯಲ್ಲಿರುವ ಪ್ರಾಧ್ಯಾಪಕರು ನಮ್ಮ ಅನುಮಾನಗಳಿಗೆ ಸ್ಪಂದಿಸಿ ನೋಟ್ಸ್‌ ಕಳುಹಿಸುತ್ತಿದ್ದಾರೆ. ಆದರೂ ಪೂರ್ಣ ಪ್ರಮಾಣದ ಪಾಠ ಪ್ರವಚನಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು.
ಮೇಘರಾಜ್‌, ಹೊಂಬುಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.