ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ಕಾಲೇಜು ಪಕ್ಕದ ಅಲೆಮಾರಿ ಕ್ಯಾಂಪ್‌ನ ಅಂಗಳದಲ್ಲಿ ಕಲಿಕೆಯ ಹಾದಿಯ ಹಣತೆ ಕೊಂಚ ಪ್ರಭೆಯಾಗಿದೆ. ಮಂಗಳವಾರ ಪ್ರಕಟವಾದ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಫಲಿತಾಂಶದಲ್ಲಿ ಕ್ಯಾಂಪ್‌ನ ಇಬ್ಬರು ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಡಿವಿಎಸ್ ಸ್ವತಂತ್ರ ಕಾಲೇಜಿನ ವಿದ್ಯಾರ್ಥಿನಿ ಎನ್.ಗೀತಾ ವಾಣಿಜ್ಯ ವಿಭಾಗದಲ್ಲಿ 507 (ಶೇ 84) ಅಂಕ ಪಡೆದರೆ, ಎಂ.ಗಣೇಶ್ 403 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕ್ಯಾಂಪ್‌ನಲ್ಲಿ ಸಂಭ್ರಮ ಮನೆ ಮಾಡಿತ್ತು. ಬರೀ ಫೇಲ್, ಡ್ರಾಪ್‌ಔಟ್‌ನ ನೆರಳಲ್ಲೇ ಕ್ಯಾಂಪ್‌ನ ಹಿರಿಯರ ಹಾದಿಯಲ್ಲಿ ಕಮರುತ್ತಿದ್ದ ಮಕ್ಕಳ ಭವಿಷ್ಯದ ನಡುವೆ ಈ ಇಬ್ಬರೂ ಉತ್ತಮ ಅಂಕ ಪಡೆದು ತೇರ್ಗಡೆಯಾಗಿದ್ದು, ಅಲ್ಲಿದ್ದವರ ಖುಷಿ ಇಮ್ಮಡಿಗೊಳಿಸಿತ್ತು.
ಮನೆಯ ಸಮೀಪದ ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ಪ್ರವೇಶ ಪಡೆಯಲು ಇಬ್ಬರೂ ಸಿದ್ಧತೆ ನಡೆಸಿದ್ದರು.
ಬೀದಿ ದೀಪದ ಬೆಳಕು
ಗೀತಾ ಹಾಗೂ ಗಣೇಶ್ ಅವರ ಮನೆಗಳು ಬಟ್ಟೆಯ ಟೆಂಟ್‌ಗಳಿಂದ ನಿರ್ಮಾಣವಾಗಿವೆ. ಅಲ್ಲಿ ವಿದ್ಯುತ್ ಇಲ್ಲ. ಹೀಗಾಗಿ ಇಬ್ಬರೂ ಸಮೀಪದ ದೇವರಾಜ ಅರಸು ಭವನದ ಎದುರಿನ ಬೀದಿ ದೀಪದ ಬೆಳಕಿನಲ್ಲಿ ಓದಿದ್ದು, ಹೋರಾಟಗಾರ ಜಾರ್ಜ್ ಸಲ್ಡಾನಾ ಅವರ ಮಾರ್ಗದರ್ಶನವನ್ನು ಸ್ಮರಿಸುತ್ತಾರೆ. ತಮಗೆ ಡಿವಿಎಸ್ ಕಾಲೇಜಿನಲ್ಲಿ ಸೀಟು ಕೊಡಿಸಿ, ಪುಸ್ತಕ ತಂದು ಕೊಟ್ಟು ಓದಲು ಹುರಿದುಂಬಿಸಿ ಅವರು ನೆರವಾಗಿದ್ದೇ ಈ ಸಾಧನೆಗೆ ಕಾರಣ ಎನ್ನುತ್ತಾರೆ.
ಗಣೇಶನಿಗೆ ಅಪ್ಪ ಇಲ್ಲ. ಅಮ್ಮ ಪಾರ್ವತಿ ಊರೂರು, ಜಾತ್ರೆಗಳ ಸುತ್ತಿ ಸರ, ಬಳೆ ಮಾರಾಟ ಮಾಡುತ್ತಾರೆ. ಅದರಲ್ಲಿಯೇ ಮೂವರು ಮಕ್ಕಳ ದೇಖರೇಕಿ ಆಗುತ್ತಿದೆ. ಗೀತಾ ಅಪ್ಪ ನಾಗರಾಜ್ ಊರೂರು ಸುತ್ತಿ ಮಿಕ್ಸಿ, ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಕೆಲಸ ಮಾಡುತ್ತಾರೆ. ಅಮ್ಮ ಮಂಜಮ್ಮ. ಇಬ್ಬರು ತಮ್ಮಂದಿರು ಇದ್ದಾರೆ.
ಈ ಇಬ್ಬರಿಗೂ ಮುಂದೆ ಪದವಿಯ ಓದು, ಭವಿಷ್ಯದ ನೆಲೆಯ ಬಗ್ಗೆ ಹಾದಿ ತೋರಲು ಬರಹಗಾರ್ತಿ ಟಿ.ಎಲ್.ರೇಖಾಂಬ ನೆರವಿಗೆ ನಿಂತದ್ದು ಕಾಣಸಿಕ್ಕಿತು.
‘ಜಾರ್ಜ್ ಸಲ್ಡಾನಾ ಅವರ ಮೂರು ದಶಕಗಳ ಪ್ರಯತ್ನ ಈಗ ಫಲ ಕೊಡುತ್ತಿದೆ. ಸೈಕಲ್‌ನಲ್ಲಿ ಓಡಾಡುತ್ತಾ ಇಲ್ಲಿನ ಮಕ್ಕಳನ್ನು ಕಲೆಹಾಕಿ ಅವರಿಗೆ ಶಾಲೆ, ಕಾಲೇಜು, ಹಾಸ್ಟೆಲ್‌ಗಳಲ್ಲಿ ಉಚಿತವಾಗಿ ಪ್ರವೇಶ ಕೊಡಿಸಿ ಬೀದಿ ದೀಪದ ಬೆಳಕಲ್ಲಿ ಕೂರಿಸಿ ಜಾರ್ಜ್ ಓದಿಸುತ್ತಿದ್ದಾರೆ. ಈಗ ಇಲ್ಲಿನ ಶಿಕ್ಷಣದ ಹಣತೆ ಪ್ರಭೆಯಾಗುತ್ತಿದೆ’ ಎಂದು ರೇಖಾಂಬ ಹರ್ಷ ವ್ಯಕ್ತಪಡಿಸಿದರು.
ನಿತ್ಯ ಮುಂದೇನಾಗಬೇಕೆಂಬ ಕನಸಿಗಿಂತ ಸದ್ಯ ಪದವಿಗೆ ಸೇರ್ಪಡೆಯ ಹಾದಿ ಅವರ ಮುಂದೆ ನಿಚ್ಚಳವಾಗಿದ್ದು ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ಸಿಕ್ಕಾಗ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.