ADVERTISEMENT

ಶಿವಮೊಗ್ಗ | ಬೀದಿಬದಿ ವ್ಯಾಪಾರಿಗಳಿಗೆ ತಕ್ಷಣ ಸೌಲಭ್ಯ ಕಲ್ಪಿಸಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 14:24 IST
Last Updated 10 ಏಪ್ರಿಲ್ 2025, 14:24 IST
ಡಿಸಿ ಗುರುದತ್ತ ಹೆಗಡೆ
ಡಿಸಿ ಗುರುದತ್ತ ಹೆಗಡೆ   

ಶಿವಮೊಗ್ಗ: ಗಾಂಧಿಬಜಾರ್‌ ಸೇರಿದಂತೆ ನಗರದ ಜನನಿಬಿಡ ಪ್ರದೇಶ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರಿಗಳು ವ್ಯವಹಾರ ನಡೆಸುತ್ತಿರುವ ಕಾರಣ ಸುಗಮ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ತೀವ್ರ ಅಡಚಣೆ ಆಗುತ್ತಿರುವ ಬಗ್ಗೆ ಸಾರ್ವಜನಿಕದಿಂದ ಬರುತ್ತಿರುವ ದೂರುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಬೀದಿಬದಿ ವ್ಯಾಪಾರಿಗಳಿಗೆ ಮೂಲ ಸೌಕರ್ಯಗಳು ಹಾಗೂ ಸಮಸ್ಯೆಯ ಪರಿಹಾರಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಾಂಧಿ ಬಜಾರಿನ ರಸ್ತೆಯ ಇಕ್ಕೆಲಗಳಲ್ಲಿ ವ್ಯವಹರಿಸುತ್ತಿರುವ ವ್ಯಾಪಾರಿಗಳು ಮುಂದಿನ 15 ದಿನಗಳಲ್ಲಿ ಈಗಾಗಲೇ ಸೂಚಿಸಲಾದ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದರು.

ADVERTISEMENT

ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರ ನಡೆಸುತ್ತಿರುವವರ ಗುರುತಿಸಿ, ಅವರಿಗೆ ಅನುಕೂಲವಾಗುವಂತೆ ಲಭ್ಯವಾಗಬಹುದಾದ ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿಪಡಿಸಿ, ನೀರು, ಶೌಚಾಲಯ ಮತ್ತು ವಿದ್ಯುತ್‌ ಸೌಕರ್ಯಗಳನ್ನು ಮುಂದಿನ 15 ದಿನಗಳೊಳಗಾಗಿ ಒದಗಿಸುವಂತೆ ಮಹಾನಗರಪಾಲಿಕೆಯ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಹೈಟೆನ್ಶನ್‌ ವಿದ್ಯುತ್‌ ತಂತಿ ಹಾದು ಹೋಗಿರುವ ಪ್ರದೇಶ ಹಾಗೂ ಪ್ಲೈಓವರ್‌ಗಳ ಕೆಳಭಾಗದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸಿಕೊಡಬಹುದಾದ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸುವಂತೆ ಸೂಚಿಸಿದ ಅವರು, ಬೀದಿಬದಿ ವ್ಯಾಪಾರಿಗಳಿಂದಲೂ ಅಹವಾಲುಗಳ ಆಲಿಸಿ, ಆದ್ಯತೆಯ ಮೇರೆಗೆ ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮ ವಹಿಸುವಂತೆಯೂ ಸಲಹೆ ನೀಡಿದರು.

ಹಣ್ಣು-ಹೂವಿನ ವ್ಯಾಪಾರಿಗಳನ್ನು ಸಮೀಪದ ಕನ್ಸರ್‌ವೆನ್ಸಿ ರಸ್ತೆಗಳಿಗೆ ಹಾಗೂ ನಗರದ ಗೌರವ ಲಾಡ್ಜ್‌ ಸಮೀಪದ ನೂತನವಾಗಿ ನಿರ್ಮಿಸಲಾದ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ ಅವರು, ನಗರದಲ್ಲಿ 14 ಸ್ಥಳಗಳ ಗುರುತಿಸಲಾಗಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿ, ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕೆ ಒದಗಿಸಲು ಸೂಚಿಸಲಾಗಿದೆ ಎಂದರು.

ಬೀದಿಬದಿ ವ್ಯಾಪಾರಿಗಳ ಸುರಕ್ಷತೆ ಹಾಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಮತ್ತೊಂದು ಸಭೆ ಆಯೋಜಿಸಲಾಗುವುದು ಎಂದರು. ಉತ್ಪತ್ತಿ ಆದ ಕಸವನ್ನು ವ್ಯಾಪಾರಿಗಳು ಬೇರ್ಪಡಿಸಿ ಕೊಡಬೇಕು, ಎಲ್ಲೆಂದರಲ್ಲಿ ಕಸ ಬಿಸಾಕಬಾರದು ಎಂದು ಮನವಿ ಮಾಡಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್‌, ಡಿವೈಎಸ್ಪಿ ಸಂಜೀವ್‌ಕುಮಾರ್‌, ಪಾಲಿಕೆ ಅಧಿಕಾರಿ ಅನುಪಮಾ, ಬೀದಿಬದಿ ವ್ಯಾಪಾರಿಗಳ ಮುಖಂಡರಾದ ಮಣಿಕಂಠ, ಚನ್ನವೀರಪ್ಪ ಉಪಸ್ಥಿತರಿದ್ದರು.

Cut-off box - ಸಂತೆ ಸ್ಥಳಾಂತರಿಸಲು ಡಿಸಿ ಸೂಚನೆ ಮಿಳ್ಳಘಟ್ಟ ರಸ್ತೆಯಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಯನ್ನು ಕೆಎಸ್‌ಆರ್‌ಟಿಸಿ ಡಿಪೊ ಪಕ್ಕದಲ್ಲಿ ಪರ್ಯಾಯವಾಗಿ ಗುರುತಿಸಿದ ಜಾಗಕ್ಕೆ ಸ್ಥಳಾಂತರಿಸಲು ಡಿ.ಸಿ ಸೂಚಿಸಿದರು. ವಿನೋಬನಗರದ ಶಿವಾಲಯದ ಬಳಿ ₹3 ಕೋಟಿ ವೆಚ್ಚದಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ ಮಳಿಗೆ ನಿರ್ಮಿಸಲಾಗಿದೆ. ಆದರೆ ಮಳಿಗೆಗಳನ್ನು ಪಡೆದವರು ಅವುಗಳನ್ನು ಬಳಸುತ್ತಿಲ್ಲ. ಪುನಃ ಬೀದಿ ಬದಿಯಲ್ಲೇ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಅದು ಸರಿಯಲ್ಲ. ಮಳಿಗೆ ಪಡೆದವರು ಅಲ್ಲಿಯೇ ವಹಿವಾಟು ನಡೆಸಲು ಮುಂದಾಗಬೇಕು. ತಪ್ಪಿದಲ್ಲಿ ಅವುಗಳನ್ನು ಅಗತ್ಯವಿರುವವರಿಗೆ ವಿಲೇ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಆ ಸ್ಥಳವನ್ನು ಕೂಡಲೇ ಸ್ವಚ್ಛಗೊಳಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.