ADVERTISEMENT

ಶಿವಮೊಗ್ಗ: ಎಫ್‌ಸಿ ಇಲ್ಲದೇ ವಾಹನಗಳ ಮುಕ್ತ ಓಡಾಟ!

ಪತ್ತೆಗೆ ಆರ್‌ಟಿಒ ಕಾರ್ಯಾಚರಣೆ ಆರಂಭ

ವೆಂಕಟೇಶ ಜಿ.ಎಚ್.
Published 25 ಮಾರ್ಚ್ 2025, 5:37 IST
Last Updated 25 ಮಾರ್ಚ್ 2025, 5:37 IST
<div class="paragraphs"><p>ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಕಚೇರಿ</p></div>

ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಕಚೇರಿ

   

ಶಿವಮೊಗ್ಗ: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ವ್ಯಾಪ್ತಿಯಲ್ಲಿ ‘ಸುಸ್ಥಿತಿಯ ಪ್ರಮಾಣಪತ್ರ’ (ಫಿಟ್ನೆಸ್ ಸರ್ಟಿಫಿಕೇಟ್ ಯಾನೆ ಎಫ್‌ಸಿ) ಇಲ್ಲದ ವಾಹನಗಳ ಓಡಾಟ ಹೆಚ್ಚಳಗೊಂಡಿದೆ. ಇದು ಸಾರಿಗೆ ಇಲಾಖೆಯ ನಿದ್ರೆ ಕೆಡಿಸಿದ್ದು, ಅವುಗಳ ಪತ್ತೆಗೆ ಜಂಟಿ ಸಾರಿಗೆ ಆಯುಕ್ತರು ವಿಶೇಷ ತಂಡ ರಚಿಸಿದ್ದಾರೆ. ಸೋಮವಾರದಿಂದ ಅದು ಪತ್ತೆ ಕಾರ್ಯಾಚರಣೆ ಆರಂಭಿಸಿದೆ.

ಏನಿದು ಎಫ್‌ಸಿ: ರಾಜ್ಯದಲ್ಲಿ ಯಾವುದೇ ವಾಹನ ನೋಂದಣಿ ಆದ ದಿನದಿಂದ 15 ವರ್ಷಗಳವರೆಗೆ ಮಾತ್ರ ಓಡಾಟಕ್ಕೆ ಅನುಮತಿ ಇದೆ. ನಂತರ ಆ ವಾಹನವನ್ನು ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ತಪಾಸಣೆಗೆ ಒಳಪಡಿಸಿ ಅದು ಸುಸ್ಥಿತಿಯಲ್ಲಿದೆಯೇ?,  ಚಾಲನೆಗೆ ಅರ್ಹವಿದೆಯೇ? ಎಂಬುದನ್ನು ಮನವರಿಕೆ ಮಾಡಿಕೊಟ್ಟು ಮತ್ತೆ ಐದು ವರ್ಷಕ್ಕೆ ಅನುಮತಿ (ಎಫ್‌ಸಿ) ಪಡೆಯಬೇಕಿದೆ.

ADVERTISEMENT

ಆದರೆ ನಿಗದಿತ ಅವಧಿ ಮುಗಿದರೂ ಎಫ್‌ಸಿ ಪಡೆಯದೇ ಬಹಳಷ್ಟು ವಾಹನಗಳ ಓಡಾಟ ನಡೆಸುತ್ತಿವೆ. ಇದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ವಿಮೆ ಸಿಗುವುದಿಲ್ಲ: ಎಫ್‌ಸಿ ಇಲ್ಲದ ವಾಹನಗಳು ಅಪಘಾತದಲ್ಲಿ ಹಾನಿಗೀಡಾದರೆ ಇಲ್ಲವೇ ಸವಾರರು ಸಾವನ್ನಪ್ಪಿದರೆ ಅವರಿಗೆ ಯಾವುದೇ ವಿಮೆ ಸಿಗುವುದಿಲ್ಲ. ಅಪಘಾತದ ವೇಳೆ ಎದುರುದಾರರು ತೊಂದರೆಗೀಡಾದರೆ, ವಾಹನಗಳು ಜಖಂ ಆದರೆ ಜೇಬಿನಿಂದಲೇ ಲಕ್ಷಾಂತರ ರೂಪಾಯಿ ನಷ್ಟ ಪರಿಹಾರ ತುಂಬಿ ಕೊಡಬೇಕಾಗುತ್ತದೆ. ಪರಿಹಾರ ತುಂಬಿಕೊಡಲು ಸಾಧ್ಯವಾಗದಿದ್ದರೆ ನ್ಯಾಯಾಲಯ ಆದೇಶ ಮಾಡಿದರೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಮುರುಗೇಂದ್ರ ಶಿರೋಳಕರ್ ಹೇಳುತ್ತಾರೆ.

‘ಎಫ್‌ಸಿ ಇಲ್ಲದೇ ಓಡಾಟ ನಡೆಸುವ ವಾಹನಗಳು ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಅಪಘಾತಕ್ಕೀಡಾಗುವ ಅವಕಾಶ ಹೆಚ್ಚು. ಅದರಿಂದ ಆಗುವ ಜೀವ ಹಾನಿಗೆ ಯಾರು ಹೊಣೆ?’ ಎಂದು ಪ್ರಶ್ನಿಸುವ ಅವರು, ನಿಗದಿತ ಅವಧಿಯಲ್ಲಿ ಎಫ್‌ಸಿ ಪಡೆಯದೇ ಇದ್ದರೆ ವಾಹನದ ನೋಂದಣಿ ರದ್ದುಗೊಳಿಸಲು ಅವಕಾಶವಿದೆ’ ಎಂದು ಎಚ್ಚರಿಸಿದರು.

1,150 ಪ್ರಕರಣ ದಾಖಲು: ‘ಕಳೆದೊಂದು ವರ್ಷದಿಂದ 20 ವರ್ಷಗಳ ಹಿಂದೆ ನೋಂದಣಿ ಆಗಿರುವ ವಾಹನಗಳ ಪರಿಶೀಲನೆ ನಡೆಸುತ್ತಿದ್ದೇವೆ. ಎಫ್‌ಸಿ ಆಗದ 1,150 ವಾಹನಗಳನ್ನು ಪತ್ತೆ ಮಾಡಿ ಅವರಿಗೆ ದಂಡ ಕೂಡ ವಿಧಿಸಿದ್ದೇವೆ. ಎಫ್‌ಸಿ ಪಡೆಯದ ವಾಹನಗಳ ಪೈಕಿ ಬಹಳಷ್ಟು ಈಗಾಗಲೇ ಗುಜರಿ ಸೇರಿವೆ. ಇಲ್ಲವೇ ಚಾಲನೆಯಲ್ಲಿ ಇಲ್ಲದಿರುವುದು ತಪಾಸಣೆ ವೇಳೆ ಕಂಡುಬಂದಿದೆ. ಎಫ್‌ಸಿ ಆಗಬೇಕಿರುವ 2,916 ಕಾರ್‌ಗಳಲ್ಲಿ 1,712 ಈಗ ಚಾಲನೆಯಲ್ಲಿ ಇಲ್ಲ ಎನ್ನುತ್ತಾರೆ.

ಸಿಬ್ಬಂದಿ ಕೊರತೆ: ಕಾರ್ಯಾಚರಣೆಗೆ ಹಿನ್ನಡೆ

15 ವರ್ಷ ಮೀರಿದರೂ ಎಫ್‌ಸಿ ಪಡೆಯದೇ ಇರುವ ವಾಹನಗಳ ತಪಾಸಣೆ ಹಾಗೂ ಮುಟ್ಟುಗೋಲು ಹಾಕಿಕೊಳ್ಳಲು ಕಚೇರಿಯಲ್ಲಿ ಸಿಬ್ಬಂದಿಯ ಕೊರತೆ ಹಿನ್ನಡೆ ಉಂಟು ಮಾಡಿದೆ ಎಂದು ಆರ್‌ಟಿಒ ಹೇಳುತ್ತಾರೆ. ಶಿವಮೊಗ್ಗ ಕಚೇರಿಯಲ್ಲಿ ಒಟ್ಟು 47 ಹುದ್ದೆಗಳ ಮಂಜೂರಾತಿ ಇದ್ದರೂ 12 ಜನ ಮಾತ್ರ ಇದ್ದಾರೆ. 7 ಇನ್‌ಸ್ಪೆಕ್ಟರ್ ಹುದ್ದೆ ಇದ್ದು ಎಲ್ಲವೂ ಖಾಲಿ ಇವೆ. ಸಾಗರ ಆರ್‌ಟಿಒ ಕಚೇರಿ ಇನ್‌ಸ್ಪೆಕ್ಟರ್ ನಿಯೋಜನೆ ಮೇರೆಗೆ ಸಾಗರ–ಶಿವಮೊಗ್ಗ ಎರಡೂ ಕಡೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕಾರ್ಯಾಚರಣೆಗೆ ತೊಂದರೆ ಆಗಿದೆ ಎನ್ನುತ್ತಾರೆ. ‘ಎಫ್‌ಸಿ ಇಲ್ಲದ 8 ಶಾಲಾ ವಾಹನಗಳ ಪ್ರಾಚಾರ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೇವೆ. ಆರ್‌ಸಿ ಕ್ಯಾನ್ಸಲ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದೇವೆ. ಅವಧಿ ಮುಗಿದ ವಾಹನಗಳ ಮಾಲೀಕರಿಗೂ ನೋಟಿಸ್ ಕೊಡುವ ಪ್ರಕ್ರಿಯೆ ಕೂಡ ಆರಂಭಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಎಫ್‌ಸಿಗೆ ಅರ್ಜಿ ಸಲ್ಲಿಸಿದರೆ ಸ್ಪಂದನೆ

ಎಫ್‌ಸಿ ಇಲ್ಲದಿದ್ದರೆ ಇಲ್ಲವೇ 15 ವರ್ಷಗಳ ಡೆಡ್‌ಲೈನ್ ಹತ್ತಿರವಿದ್ದರೆ ತಕ್ಷಣ ಆರ್‌ಟಿಒ ಕಚೇರಿಗೆ ಸಂಪರ್ಕಿಸಬೇಕು. ನಿಗದಿತ ಶುಲ್ಕು ಕಟ್ಟಿ ಮಲವಗೊಪ್ಪ ಕಚೇರಿಗೆ ವಾಹನ ತಂದರೆ ತಪಾಸಣೆ ಮಾಡಿ ಎಫ್‌ಸಿ ಮಾಡಿಕೊಡಲಾಗುವುದು. ಯಾವುದೇ ಕಾರಣಕ್ಕೂ ವಿಳಂಬ ಆಗುವುದಿಲ್ಲ ಎಂದು ವಾಹನ ಮಾಲೀಕರಿಗೆ ಆರ್‌ಟಿಒ ಮನವಿ ಮಾಡುತ್ತಾರೆ. ಎಫ್‌ಸಿ ಪಡೆಯಲು ಕಾರು ಜೀಪು ಸೇರಿದಂತೆ ಲಘು ಮೋಟಾರು ವಾಹನಗಳಿಗೆ (ಎಲ್‌ಎಂವಿ) ಶುಲ್ಕ ₹ 7000 ಇದ್ದು ದ್ವಿಚಕ್ರ ವಾಹನಗಳಿಗೆ ₹ 2200 ಹಾಗೂ ಲಾರಿ ಬಸ್‌ ಸೇರಿದಂತೆ ಗೂಡ್ಸ್ ವಾಹನಗಳಿಗೆ ₹ 800 ಪಾವತಿಸಬೇಕಿದೆ. ಅವಧಿ ಮುಗಿದರೂ ಎಫ್‌ಸಿ ಮಾಡಿಸದಿದ್ದರೆ ದ್ವಿಚಕ್ರ ವಾಹನಗಳಿಗೆ ತಿಂಗಳಿಗೆ ₹ 300 ಹಾಗೂ ಎಲ್‌ಎಂವಿಗಳಿಗೆ ₹ 500 ದಂಡ ಪಾವತಿಸಬೇಕಿದೆ. ದೊಡ್ಡ ವಾಹನಗಳಿಗೆ ₹ 200 ದಂಡ ಇರುತ್ತದೆ ಎಂದು ಆರ್‌ಟಿಒ ಕಚೇರಿ ಮೂಲಗಳು ಹೇಳುತ್ತವೆ.

ಎಫ್‌ಸಿ ಲ್ಯಾಪ್ಸ್ ಆದ ವಾಹನಗಳ ಪತ್ತೆಗೆ ಜಂಟಿ ಆಯುಕ್ತರು ರಚಿಸಿರುವ ಸ್ಕ್ವಾಡ್ ಕಾರ್ಯಾಚರಣೆ ಆರಂಭಿಸಿದೆ. ಅಂತಹ ವಾಹನಗಳ ಪತ್ತೆಗೆ ಪತ್ರ ಬರೆದು ಪೊಲೀಸರ ನೆರವು ಕೋರುತ್ತೇನೆ
-ಮುರುಗೇಂದ್ರ ಶಿರೋಳಕರ್‌, ಶಿವಮೊಗ್ಗ ಆರ್‌ಟಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.