ADVERTISEMENT

ಶ್ರೇಷ್ಠ ಸಂಸ್ಕೃತಿಯಿಂದ ಜಗತ್ತಿನಲ್ಲೇ ಶ್ರೇಷ್ಠತೆ ಗಳಿಕೆ: ಕೆ.ಎಸ್.ಈಶ್ವರಪ್ಪ

ದೇಗುಲ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 13 ಮೇ 2019, 12:47 IST
Last Updated 13 ಮೇ 2019, 12:47 IST
ವಿಜಯಪುರ ತಾಲ್ಲೂಕಿನ ಶಿವಣಗಿಯಲ್ಲಿ ಸೋಮವಾರ ನಡೆದ ಹಾಲಮರಡಿ ಸಿದ್ಧೇಶ್ವರ ದೇವಾಲಯದ ನೂತನ ಕಟ್ಟಡ ಲೋಕಾರ್ಪಣೆ, ಕಳಸಾರೋಹಣ ಸಮಾರಂಭದಲ್ಲಿ ಬಿಜೆಪಿ ಮುಖಂಡ, ಶಾಸಕ ಕೆ.ಎಸ್.ಈಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು
ವಿಜಯಪುರ ತಾಲ್ಲೂಕಿನ ಶಿವಣಗಿಯಲ್ಲಿ ಸೋಮವಾರ ನಡೆದ ಹಾಲಮರಡಿ ಸಿದ್ಧೇಶ್ವರ ದೇವಾಲಯದ ನೂತನ ಕಟ್ಟಡ ಲೋಕಾರ್ಪಣೆ, ಕಳಸಾರೋಹಣ ಸಮಾರಂಭದಲ್ಲಿ ಬಿಜೆಪಿ ಮುಖಂಡ, ಶಾಸಕ ಕೆ.ಎಸ್.ಈಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು   

ವಿಜಯಪುರ:‘ಆಕಾಶ, ಜಲ, ಮಣ್ಣು, ಮರ ಸೇರಿದಂತೆ ಪ್ರತಿಯೊಂದರಲ್ಲಿಯೂ, ದೈವತ್ವವನ್ನು ಕಂಡವರು ಭಾರತೀಯರು. ಈ ಶ್ರೇಷ್ಠ ಸಂಸ್ಕೃತಿಯಿಂದ ಜಗತ್ತಿನಲ್ಲಿಯೇ ಶ್ರೇಷ್ಠತೆಯನ್ನು ಸಾಧಿಸಿದ್ದೇವೆ’ ಎಂದು ಬಿಜೆಪಿ ಮುಖಂಡ, ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ವಿಜಯಪುರ ತಾಲ್ಲೂಕಿನ ಶಿವಣಗಿ ಗ್ರಾಮದಲ್ಲಿ ಸೋಮವಾರ ಹಾಲಮರಡಿ ಸಿದ್ಧೇಶ್ವರ ದೇವಾಲಯದ ನೂತನ ಕಟ್ಟಡ ಲೋಕಾರ್ಪಣೆ, ಕಳಸಾರೋಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಭೂಮಿಯನ್ನು ತಾಯಿ ಎನ್ನುತ್ತೇವೆ, ಬೆಂಕಿಯನ್ನು ಅಗ್ನಿ ದೇವ ಎನ್ನುತ್ತೇವೆ, ವಾಯುವನ್ನು ವಾಯು ದೇವ ಎಂದು ಭಕ್ತಿಭಾವ, ಗೌರವದಿಂದ ಕಾಣುತ್ತೇವೆ. ಈ ಸಂಸ್ಕೃತಿಯ ಶ್ರೇಷ್ಠತೆಯೇ ಭಾರತವನ್ನು ವಿಶ್ವದಲ್ಲಿಯೇ ಅತ್ಯಂತ ಗೌರವಯುತ ಸ್ಥಾನದಲ್ಲಿ ನಿಲ್ಲಿಸಿದೆ’ ಎಂದರು.

‘ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠವಾಗಿದೆ. ವಿದೇಶದಲ್ಲಿ ಒಂದು ರಾತ್ರಿ ಮದುವೆ, ಮಾರನೆ ದಿನವೇ ವಿಚ್ಛೇದನ ನಡೆಯುತ್ತಿವೆ. ಆದರೆ ಭಾರತದಲ್ಲಿ ಸಪ್ತಪದಿ ತುಳಿದ ಸತಿ, ತನ್ನ ಪತಿಯನ್ನು ಆರಾಧ್ಯದೈವವಾಗಿ ಸ್ವೀಕರಿಸುತ್ತಾಳೆ, ಆತನೊಂದಿಗೆ ಕೊನೆಯವರೆಗೂ ಬಾಳುತ್ತಾಳೆ’ ಎಂದರು.

ADVERTISEMENT

‘ಈ ಹಿಂದೆ ಭಾರತದ ಪ್ರಧಾನಿಗಳು ವಿದೇಶಕ್ಕೆ ಹೋದರೆ, ಎಲ್ಲಿ ಸಾಲ ಕೇಳಲು ಬರುತ್ತಿದ್ದಾರೋ ? ಎಂಬ ಭಯ ವಿದೇಶಿಗರಲ್ಲಿತ್ತು. ಆದರೆ ಈಗ ಭಾರತ 112 ರಾಷ್ಟ್ರಗಳಿಂದ ಪಡೆದಿದ್ದ ಸಾಲವನ್ನು ತೀರಿಸಿ, ಸಶಕ್ತ ದೇಶವಾಗಿ ಬೆಳೆದು, 12 ರಾಷ್ಟ್ರಗಳಿಗೆ ಸಾಲ ನೀಡುವ ಮಟ್ಟಕ್ಕೆ ಬೆಳೆದಿದೆ. ಇದಕ್ಕೆಲ್ಲಾ ಭಾರತೀಯರ ಸಂಸ್ಕೃತಿ, ಕಾಯಕವನ್ನು ನಂಬಿದ ಫಲವೇ ಕಾರಣ’ ಎಂದು ಈಶ್ವರಪ್ಪ ಹೇಳಿದರು.

‘ನನ್ನ ತಾಯಿ ನನ್ನನ್ನು ಕಷ್ಟಪಟ್ಟು ಬೆಳೆಸಿದಳು. ಹೊಸ ಸೀರೆ ಖರೀದಿಸಲಿಲ್ಲ, ಅನೇಕ ಬಾರಿ ಹೊಟ್ಟೆ ತುಂಬ ಊಟ ಮಾಡಲಿಲ್ಲ. ನಾನು ಎಸ್ಸೆಸ್ಸೆಲ್ಸಿ ಮುಗಿಸಿ ನೌಕರಿ ಮಾಡುತ್ತೇನೆ ಎಂದಾಗ, ಕಪಾಳಕ್ಕೆ ಬಾರಿಸಿದಳು, ನೀನು ಮೊದಲು ಓದು ಎಂದು ಗದರಿಸಿದಳು. ಆಕೆಯ ಫಲವಾಗಿಯೇ ನಾನು ನಿಮ್ಮ ಮುಂದೆ ನಿಂತಿದ್ದೇನೆ’ ಎಂದು ಭಾವುಕರಾಗಿ ನುಡಿದರು.

‘ಶಿವಣಗಿಯಲ್ಲಿ ಭವ್ಯ ಮರಡಿ ಸಿದ್ಧೇಶ್ವರ ದೇವಾಲಯ ನಿರ್ಮಾಣಗೊಂಡಿರುವುದು ಸಂತೋಷದ ಸಂಗತಿ. ದೇವಾಲಯದ ಅಭಿವೃದ್ಧಿಗಾಗಿ ಸರ್ಕಾರಿ ಮಟ್ಟದಲ್ಲಿ ಏನಾದರೂ ಕೆಲಸವಿದ್ದರೆ ನನ್ನನ್ನು ಸಂಪರ್ಕಿಸಿ’ ಎಂದು ಇದೇ ಸಂದರ್ಭ ಭಕ್ತ ಮಂಡಲಿಯವರಿಗೆ ತಿಳಿಸಿದರು.

ಸರೂರ ಶ್ರೀ ರೇವಣಸಿದ್ಧೇಶ್ವರ ಜಗದ್ಗುರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಜಿ.ಪಂ. ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಕಾಂಗ್ರೆಸ್ ಮುಖಂಡ ಸೋಮನಾಥ ಕಳ್ಳಿಮನಿ, ಮಲಕೇಂದ್ರರಾಯಗೌಡ ಪಾಟೀಲ, ಜಿ.ಪಂ. ಸದಸ್ಯ ಸಾಬು ಮಾಶ್ಯಾಳ, ಮಲ್ಲಣ್ಣ ಸಾಲಿ, ಕೆಂಚಪ್ಪ ಲೋಗಾಂವಿ, ರವಿ ಕಿತ್ತೂರ, ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದು ಬುಳ್ಳಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.