ಶಿವಮೊಗ್ಗ: ‘ತುರ್ತು ಪರಿಸ್ಥಿತಿ ವಿರುದ್ಧ ಹಾಗೂ ಸಂವಿಧಾನ ಉಳಿವಿಗೆ ಹೋರಾಡಿದ ಬಹುಪಾಲು ಶ್ರೇಯ ಆರ್ಎಸ್ಎಸ್ ಸಂಘಟನೆಗೆ ಸಲ್ಲಬೇಕು. ಆದರೆ, ಇಲ್ಲಿ ಸಂಘಟನೆಯನ್ನು ನಿಷೇಧಿಸುವ ಹುನ್ನಾರವನ್ನು ಕೆಲವರು ನಡೆಸಿದ್ದರು’ ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎ.ಎಸ್.ಪದ್ಮನಾಭ ಭಟ್ ಆರೋಪಿಸಿದರು.
‘ದೇಶಕ್ಕೆ ಹೇರಿದ್ದ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ-50 ವರ್ಷ’ ವಿಚಾರದಡಿ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಹಾಗೂ ಮಂಥನ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಶಕ್ತಿಯ ಮುಂದೆ ಯಾವುದೇ ದುಷ್ಟ ಶಕ್ತಿಗಳು ತಲೆ ಎತ್ತಲು ಸಾಧ್ಯವಾಗಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಅಮಾಯಕರನ್ನು ಬಂಧಿಸಲಾಗಿತ್ತು. ಅಂದು ಇಂಧಿರಾಗಾಂಧಿ ಅವರನ್ನು ಹೊಗಳುವವರು ಯಾರೂ ಇರಲಿಲ್ಲ. ಈಗ, ರಾಹುಲ್ ಗಾಂಧಿ ಸಂವಿಧಾನ ಪುಸ್ತಕ ಹಿಡಿದು ಓಡಾಡುತ್ತಿದ್ದಾರೆ. ಈ ಹಿಂದೆ ದೇಶದ ಉಳಿವಿಗೆ ಹೋರಾಡಿದವರನ್ನು ನೆನಪು ಮಾಡಿಕೊಳ್ಳಬೇಕು ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕಿ ತುರ್ತು ಪರಿಸ್ಥಿತಿ ಹೇರಿ ಕರಾಳ ಇತಿಹಾಸ ನಿರ್ಮಿಸಿದ ಸಂವಿಧಾನ ವಿರೋಧಿ ಕಾಂಗ್ರೆಸ್ ಎಂಬುದನ್ನು ಮರೆಯಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಸ್ವಾತಂತ್ರ್ಯ ಬಳಿಕ ದೇಶ ಕಂಡ ಕರಾಳ ಅನುಭವ ಈ ತುರ್ತುಪರಿಸ್ಥಿತಿ. ಅಂಬೇಡ್ಕರ್ ಅವರ ಮೂಲ ಚಿಂತನೆಯುಳ್ಳ ಸಂವಿಧಾನವನ್ನು ಬದಲಿಸಿದ ಕಾಂಗ್ರೆಸ್, ಅವರ ಆಶಯಗಳನ್ನು ಮೂಲೆಗುಂಪು ಮಾಡಿತ್ತು. ಅಂದಿನ ಮನಃಸ್ಥಿತಿಯೇ ಈಗಲೂ ಕಾಂಗ್ರೆಸ್‌ನಲ್ಲಿ ಮುಂದುವರೆದಿದೆ ಎಂದು ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ನಟರಾಜ್ ಭಾಗವತ್ ಹೇಳಿದರು.
50 ವರ್ಷದ ಹಿಂದೆ ದೇಶದ ಪರ ಘೋಷಣೆ ಕೂಗಲು ಸಹ ಸಾಧ್ಯವಿರಲಿಲ್ಲ. ಘೋಷಣೆ ಕೂಗಿದವರನ್ನು ಬಂಧಿಸಲಾಗುತ್ತಿತ್ತು ಎಂದು ಶ್ರೀಗಂಧ ಸಂಸ್ಥೆ ಕೋಶಾಧ್ಯಕ್ಷ ಕೆ.ಈ.ಕಾಂತೇಶ್ ಹೇಳಿದರು.
ಹಿರಿಯ ಸಾಹಿತಿ ಬಾಬು ಕೃಷ್ಣಮೂರ್ತಿ, ಮಾಜಿ ಸಭಾಪತಿ ಡಿ.ಎಚ್.ಶಂಕರ ಮೂರ್ತಿ, ಶ್ರೀಗಂಧ ಸಂಸ್ಥೆ ಸಂಚಾಲಕ ಉಮೇಶ್ ಆರಾಧ್ಯ, ಮಂಥನ ಸಂಸ್ಥೆಯ ಟ್ರಸ್ಟಿ ವಾಸುದೇವ್, ವಿನಯ ಶಿವಮೊಗ್ಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.