ADVERTISEMENT

ಅಧಿವೇಶನದಲ್ಲಿ ಹುಣಸೋಡು ಸ್ಫೋಟ ಚರ್ಚೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 12:43 IST
Last Updated 27 ಜನವರಿ 2021, 12:43 IST
ಶಿವಮೊಗ್ಗ ಸಮೀಪದ ಹುಣಸೋಡು ಸ್ಫೊಟದ ಸ್ಥಳವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ವೀಕ್ಷಿಸಿದರು.
ಶಿವಮೊಗ್ಗ ಸಮೀಪದ ಹುಣಸೋಡು ಸ್ಫೊಟದ ಸ್ಥಳವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ವೀಕ್ಷಿಸಿದರು.   

ಶಿವಮೊಗ್ಗ: ಅಧಿವೇಶನದಲ್ಲಿ ಹುಣಸೋಡು ಸ್ಫೋಟ ಪ್ರಕರಣ ಚರ್ಚಿಸಲಾಗುವುದು. ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸಾವಿನ ಹೊಣೆ ಹೊರಬೇಕು ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಹಲವು ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿವೆ. ಅಲ್ಲಿರುವ ಕುಳಿಗಳೇ ಸಾಕ್ಷಿ ಹೇಳುತ್ತವೆ. ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲವಂತೆ. ಜಿಲ್ಲಾಡಳಿತ ಮಲಗಿದೆ. ಹಾಗಾಗಿ, ಸ್ಥಳೀಯ ಅಧಿಕಾರಿಗಳಿಂದ ತನಿಖೆ ನಡೆದರೆ ಸತ್ಯ ಹೊರಬರಲು ಸಾಧ್ಯವಿಲ್ಲ. ಹೈಕೋರ್ಟ್‌ ನ್ಯಾಯಾಧೀಶರಿಂದಲೇ ತನಿಖೆಯಾಗಬೇಕು. ತಪ್ಪಿಸ್ಥ ಆರೋಪಿಗಳ ಜತೆಗೆ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು, ರಾಜಕಾರಣಿಗಳಿಗೂ ಶಿಕ್ಷೆಯಾಗಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜಕೀಯ ಪ್ರಭಾವವಿಲ್ಲದೆ ಇಂತಹ ದೊಡ್ಡ ಅಕ್ರಮಗಳು ನಡೆಯಲು ಸಾಧ್ಯವೇ ಇಲ್ಲ. ಪ್ರತಿ ಬಾರಿ ಅಕ್ರಮ ನಡೆದಾಗಲೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಅಕ್ರಮ ವ್ಯವಹಾರದಲ್ಲಿ ಆಡಳಿತ ಪಕ್ಷದ ಕಾರ್ಯಕರ್ತರೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಗಣಿಗಾರಿಕೆ ವಿಷಯದಲ್ಲಿ ಕಣ್ಣು, ಬಾಯಿ ಮುಚ್ಚಿಕೊಂಡಿರುವಂತೆ ಸಭೆಗಳಲ್ಲಿ ಅಧಿಕಾರಿಗಳಿಗೆ ಸಚಿವ ಈಶ್ವರಪ್ಪ ಸೂಚಿಸಿದ್ದಾರೆ ಎಂದು ಪತ್ರಿಕಾ ವರದಿಗಳನ್ನು ಪ್ರದರ್ಶಿಸಿದರು.

ADVERTISEMENT

ಪರವಾನಗಿ ಇಲ್ಲದೇ ನೆರೆ ರಾಜ್ಯದಿಂದ ಇಲ್ಲಿಗೆ ಸ್ಫೋಟಕ ಸಾಮಗ್ರಿಗಳು ಸರಬರಾಜಾಗಿವೆ. ಈ ವ್ಯವಹಾರದ ಹಿಂದೆ ದೊಡ್ಡ ಜಾಲವೇ ಇದೆ. ಎಲ್ಲ ಮೂಲಗಳ ಕುರಿತು ಸಮಗ್ರ ತನಿಖೆಯಾಗಬೇಕು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ತಪ್ಪು ಕಂಡು ಬಂದರೂ ಕ್ರಮ ಕೈಗೊಳ್ಳಬೇಕು. ಹುಣಸೋಡು ಸ್ಫೋಟ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಬೇಕು. ಮೃತ ಕುಟುಂಬಗಳಿಗೆ ಮಾನವೀಯತೆಯ ಆಧಾರದಲ್ಲಿ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.