ADVERTISEMENT

ಸಿಗಂದೂರು ವಿವಾದ: ಈಡಿಗರ ಸಭೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 16:27 IST
Last Updated 11 ನವೆಂಬರ್ 2020, 16:27 IST
ಚೇತನ್ ರಾಜ್ ಕಣ್ಣೂರು
ಚೇತನ್ ರಾಜ್ ಕಣ್ಣೂರು   

ಸಾಗರ: ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯದ ವಿವಾದಕ್ಕೆ ಸಂಬಂಧಿಸಿದಂತೆ ವರದಹಳ್ಳಿ ರಸ್ತೆಯಲ್ಲಿರುವ ಈಡಿಗರ ಸಮುದಾಯ ಭವನದಲ್ಲಿ ನ. 12ರಂದುಬೆಳಿಗ್ಗೆ 10.30ಕ್ಕೆ ಈಡಿಗ ಸಮಾಜದ ಪ್ರಮುಖರ ಸಭೆ ಕರೆಯಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ಶಾಸಕ ಎಚ್. ಹಾಲಪ್ಪ ಹರತಾಳು ಅವರು ಸಿಗಂದೂರು ವಿವಾದವನ್ನು ಇತ್ಯರ್ಥ ಪಡಿಸಲು ಯಾವ ರೀತಿಯಲ್ಲಿ ಪ್ರಯತ್ನ ಮಾಡಿದ್ದಾರೆ ಎಂಬುದನ್ನು ಈಡಿಗ ಸಮಾಜದವರಿಗೆ ಸತ್ಯಾಂಶವನ್ನು ತಿಳಿಸುವ ಸಲುವಾಗಿ ಈ ಸಭೆಯನ್ನು ಆಯೋಜಿಸಲಾಗಿದೆ’ ಎಂದರು.

‘ಜಿಲ್ಲೆಯ ಕಾಂಗ್ರೆಸ್‌ನಹಲವು ಮುಖಂಡರು ಸಿಗಂದೂರು ವಿವಾದವನ್ನು ತಮ್ಮ ಪಕ್ಷದ ಸಂಘಟನೆಗೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ಮೂಲಕ ದೇವಸ್ಥಾನದ ವಿವಾದವನ್ನು ಬೆಳೆಸಲು ಅವರು ಮುಂದಾಗಿದ್ದಾರೆ. ಈವರೆಗೂ ಸಿಗಂದೂರು ದೇವಾ
ಲಯ ಮುಜರಾಯಿ ವ್ಯಾಪ್ತಿಗೆ ಸೇರದೆ ಇರಲು ಶಾಸಕ ಹಾಲಪ್ಪ ಅವರೇ ಕಾರಣರಾಗಿದ್ದಾರೆ. ಇಂತಹ ಹತ್ತು ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ’ ಎಂದು ಹೇಳಿದರು.

ADVERTISEMENT

‘ಶಾಸಕ ಹಾಲಪ್ಪ ಅವರು ಹಿಂದುಳಿದ ವರ್ಗದ ಪ್ರಬಲ ನಾಯಕರಾಗಿ ಹೊರಹೊಮ್ಮುತ್ತಿರುವುದನ್ನು ಸಹಿಸದ ಕೆಲವು ವ್ಯಕ್ತಿಗಳು ಸಿಗಂದೂರು ವಿಷಯವನ್ನು ಮುಂದಿಟ್ಟುಕೊಂಡು ಅವರಿಗೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿನ ಈಡಿಗರ ಸಂಘ ಕೂಡ ಸಿಗಂದೂರು ವಿಷಯದಲ್ಲಿ ಪಕ್ಷಪಾತ ಧೋರಣೆ ತಾಳಿದೆ. ಹೀಗಾಗಿ ವಾಸ್ತವ ಸಂಗತಿಗಳ ಕುರಿತು ಸಮಾಜದವರಿಗೆ ಮನವರಿಕೆ ಮಾಡಲು ಸಭೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರ ಗಾಳಿಪುರ, ‘ದೇವಸ್ಥಾನದ ವಿಷಯದಲ್ಲಿ ಶಾಸಕ ಹಾಲಪ್ಪ ಹಸ್ತಕ್ಷೇಪ ಮಾಡಿಲ್ಲ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ದೇವೇಂದ್ರಪ್ಪ, ಸುವರ್ಣ ಟೀಕಪ್ಪ, ಅರುಣ್ ಕುಗ್ವೆ, ಆನಂದ ಮೇಸ್ತ್ರಿ, ಹರೀಶ್ ಮೂಡಳ್ಳಿ, ಅರುಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.