ADVERTISEMENT

ಸಿಗಂದೂರು: ಶರಾವತಿ ತಟದಲ್ಲಿ ಚೌಡೇಶ್ವರಿ ಜಾತ್ರೆ

2 ದಿನಗಳ ಜಾತ್ರಾ ಮಹೋತ್ಸವ; ಮಧು ಬಂಗಾರಪ್ಪ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 5:24 IST
Last Updated 14 ಜನವರಿ 2026, 5:24 IST
ಸಿಗಂದೂರು ದೇವಿ ಮೂಲಸ್ಥಾನ ಸೀಗೇ ಕಣಿವೆಯಲ್ಲಿ ಅಲಂಕಾರ
ಸಿಗಂದೂರು ದೇವಿ ಮೂಲಸ್ಥಾನ ಸೀಗೇ ಕಣಿವೆಯಲ್ಲಿ ಅಲಂಕಾರ   

ತುಮರಿ: ನಾಡಿಗೆ ಸಮೃದ್ಧಿ ನೀಡುವ ಮಕರ ಸಂಕ್ರಮಣ ಪರ್ವಕಾಲಕ್ಕೆ ಸಿಗಂದೂರು ಸೀಗೇ ಕಣಿವೆಯ ‘ಚೌಡಿ ಬನ’ದಲ್ಲಿ ಜಾತ್ರಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿದ್ದು, ಜ.14ರಿಂದ 2 ದಿನ ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ.

ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ತೂಗು ಸೇತುವೆ ಕಳೆದ ವರ್ಷ ಉದ್ಘಾಟನೆಗೊಂಡ ಬಳಿಕ ನಡೆಯಲಿರುವ ಮೊದಲ ಜಾತ್ರಾ ಮಹೋತ್ಸವ ಇದಾಗಿದೆ. ಈ ಕಾರಣ ಸಂಕ್ರಮಣ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಅಪಾರ ಸಂಖ್ಯೆಯ ಭಕ್ತಗಣ ದೇವಿಯ ದರ್ಶನಕ್ಕೆ ಆಗಮಿಸಲಿದ್ದು, ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.

300 ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ದೇವಸ್ಥಾನಕ್ಕೆ ಭಕ್ತರು ಜಾತಿ, ಮತ, ಪಂಥ, ಧರ್ಮಾತೀತವಾಗಿ ಆಗಮಿಸಿ, ಪ್ರಾರ್ಥನೆ ಸಲ್ಲಿಸುವುದು, ಹರಕೆ ಒಪ್ಪಿಸುವುದು ವಿಶೇಷ. ವಿವಾಹ ಭಾಗ್ಯಕ್ಕೆ ಪ್ರಾರ್ಥನೆ ಸಲ್ಲಿಸುವುದು, ನವ ದಂಪತಿ ಮದುವೆ ಕಾಣಿಕೆ ಅರ್ಪಿಸುವುದು, ತಮ್ಮ ಕಷ್ಟಕಾರ್ಪಣ್ಯಗಳಿಗೆ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ. ಹೊಲ, ಮನೆ ಕಾಯುವ, ದುಷ್ಟರನ್ನು ಶಿಕ್ಷಿಸುವ ದೇವಿ ಇಲ್ಲಿ ಅಗ್ರಪೂಜಿತೆ. 

ADVERTISEMENT

ಪ್ರಕೃತಿಯ ಸೌಂದರ್ಯವೇ ನೆಲೆಯಾಗಿರುವ ಶರಾವತಿ ತಟದ ಸೀಗೇ ಕಣಿವೆಯಲ್ಲಿ ವಾರ್ಷಿಕ ಸಂಕ್ರಮಣ ಜಾತ್ರೆಯನ್ನು ಗ್ರಾಮಸ್ಥರೆಲ್ಲರೂ ಒಟ್ಟಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಉದ್ಯೋಗ ಸೇರಿದಂತೆ ಇನ್ನಿತರ ಕಾರ್ಯನಿಮಿತ್ತ ಹೊರಭಾಗದಲ್ಲಿ ನೆಲೆಸಿರುವ ಗ್ರಾಮಸ್ಥರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ‘ಉಘೇ ಚೌಡೇಶ್ವರಿ’ ಉದ್ಗಾರ, ಹಾಡು-ಕುಣಿತ ಭಕ್ತರಿಗೆ ಮುದ ನೀಡುತ್ತವೆ. ದೇವಿಯ ಮೂಲ ಸ್ಥಾನ ಸೀಗೇ ಕಣಿವೆಯಲ್ಲಿ ತಳಿರು ತೋರಣ, ಫಲ–ಪುಷ್ಪಗಳಿಂದ ನಿರ್ಮಾಣವಾದ ಮಂಟಪ ಭಕ್ತರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ.

ಚಾಲನೆ

ಜಾತ್ರಾ ಮಹೋತ್ಸವಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಚಾಲನೆ ನೀಡಲಿದ್ದಾರೆ. ಸೀಗೇ ಕಣಿವೆಯಲ್ಲಿ ಧರ್ಮ ಜ್ಯೋತಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಲಿದ್ದಾರೆ. 

ಕಡೇನಂದಿಹಳ್ಳಿ ತಪೋಕ್ಷೇತ್ರದ ರೇವಣ್ಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಾರಗನ ಜಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ಅನುವಂಶಿಕ ಧರ್ಮಾಧಿಕಾರಿ ಎಸ್ ರಾಮಪ್ಪ ಅವರ ನೇತೃತ್ವದಲ್ಲಿ ನಡೆಯಲಿದೆ.

ಜಾತ್ರೆಯ ಅಂಗವಾಗಿ ಮುಖಮಂಟಪ ಅಲಂಕಾರ ಮಾಡಿರುವುದು
ಉತ್ತರಾಯಣ ಪುಣ್ಯಕಾಲದಲ್ಲಿ ದೇವಿಗೆ ವಿಶೇಷ ಪೂಜೆ ಧಾರ್ಮಿಕ ವಿಧಿ ವಿಧಾನಗಳು ನೆಡೆಯಲಿದೆ. ವರ್ಷಕ್ಕೆ ಒಮ್ಮೆ ಮಾತ್ರ ದೇವಿಯ ಮೂಲ ಸ್ಥಾನದಿಂದ ಧರ್ಮ ಜ್ಯೋತಿ ಬರಲಿದೆ. ಈ ವೇಳೆ ಸಕಲ ಜೀವ ರಾಶಿಗಳಿಗೆ ಒಳಿತನ್ನು ಬಯಸುವುದೇ ಮಾನವ ಧರ್ಮ.
– ಎಸ್ ರಾಮಪ್ಪ, ಅನುವಂಶಿಕ ಧರ್ಮಾಧಿಕಾರಿಗಳು ಸಿಗಂದೂರು

ಸೇತುವೆ ಉದ್ಘಾಟನೆ: ಸಂಪರ್ಕ ಸುಲಭ

ಇಲ್ಲಿನ ಸೇತುವೆ ಸಂಚಾರಕ್ಕೆ ಮುಕ್ತವಾದ ಹಿನ್ನೆಲೆಯಲ್ಲಿ ಭಕ್ತರಿಗೆ ಬಂದುಹೋಗುವ ಸಂಕಷ್ಟ ದೂರವಾಗಿದೆ. ಭಕ್ತರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದ್ದು ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಮೂಲ ಸೌಕರ್ಯ ಕಲ್ಪಿಸಿವೆ. ಆಯಕಟ್ಟನ ಸ್ಥಳಗಳಲ್ಲಿ ಬ್ಯಾರಿಕೇಡ್ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿ ಭಕ್ತರಿಗೆ ಸುಗಮವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ. ಗಣ್ಯವ್ಯಕ್ತಿಗಳ ಭೇಟಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಊಟ ವಸತಿ ವ್ಯವಸ್ಥೆಯಿದ್ದು ಜಾತ್ರೆಯ ಅಂಗವಾಗಿ ಕ್ಷೇತ್ರದಲ್ಲಿ ನಿರಂತರ ಅನ್ನ ದಾಸೋಹ ನಡೆಯಲಿದೆ. ಅಗತ್ಯ ವೈದ್ಯಕೀಯ ಸೇವೆ ಆಂಬುಲೆನ್ಸ್ ಸ್ಥಳದಲ್ಲೇ ಸನ್ನದ್ಧವಾಗಿವೆ ಎಂದು ದೇವಳದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಏನೇನು ಕಾರ್ಯಕ್ರಮ?

ಜ. 14ರ ಮುಂಜಾನೆ 4ರಿಂದ ಮಹಾಭಿಷೇಕ ಗೋಪೂಜೆ ಗುರುಪೂಜೆ ದೇವಿ ಪಾರಾಯಣ ಮೂಲ ಸ್ಥಾನ ಸೀಗೇ ಕಣಿವೆಯಲ್ಲಿ ನವ ಚಂಡಿಕಾ ಹವನ ಪುಣ್ಯಾಹ ಶುದ್ಧಿ ಕುಂಭ ಲಗ್ನದಲ್ಲಿ ಪಲ್ಲಕ್ಕಿ ಉತ್ಸವದ ನಂತರ ಧರ್ಮ ಜ್ಯೋತಿಯು ಮಧ್ಯಾಹ್ನ 12ಕ್ಕೆ ದೇವಸ್ಥಾನ ತಲುಪಲಿದೆ. ಮಧ್ಯಾಹ್ನ 1.15ರಿಂದ ಧರ್ಮಸಭೆ ರಾತ್ರಿ 7 ಗಂಟೆಗೆ ‘ಶಿವದೂತ ಗುಳಿಗ’ ನಾಟಕ ರಾತ್ರಿ 9.30ಕ್ಕೆ ‘ಗಾನ ಮಯೂರ’ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜ. 15ರಂದು ದೇವಿಗೆ ಆಭರಣ ಅಲಂಕಾರ ಮಹಾಪೂಜೆ ಸಂಜೆ ದುರ್ಗಾ ದೀಪ ನಮಸ್ಕಾರ ರಂಗಪೂಜೆ ನವಚಂಡಿಕಾ ಹವನ ನಡೆಯಲಿವೆ. ಸಂಜೆ 6ಕ್ಕೆ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯ ಪಾವಂಜೆ ಮೇಳದಿಂದ ‘ಶ್ರೀದೇವಿ ಲಲಿತೋಪಾಖ್ಯಾನ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜಾತ್ರೆಯ ಪ್ರಯುಕ್ತ 2 ದಿನ ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.